ಹೊಸಪೇಟೆ: ನಾಯಕ, ವಾಲ್ಮೀಕಿ ಸಮಾಜದ ಅರಸರು ಮತ್ತು ಪಾಳೇಗಾರರು ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಆದರೆ, ಇತಿಹಾಸ ಪುಟದಲ್ಲಿ ನೀಡಿದ ಕೊಡುಗೆಯನ್ನು ಸರಿಯಾಗಿ ದಾಖಲೆ ಮಾಡದೇ ಕಡೆಗಣಿಸಲಾಗಿದೆ ಎಂದು ಬೆಂಗಳೂರಿನ ಸಂಶೋಧಕ, ಚಿತ್ರ ನಟ ಹಾಗೂ ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ ಹೇಳಿದರು.
ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮತ್ತು ಅದರ ಅಭಿವೃದ್ಧಿಗೆ ನಾಯಕ ಸಮಾಜದ ರಾಜರು ಮತ್ತು ಪಾಳೇಗಾರರ ಕೊಡುಗೆ ಅಪಾರವಾಗಿದೆ. ಚಿತ್ರದುರ್ಗದ ದೊರೆ ಮದಕರಿ ನಾಯಕ ಮತ್ತು ಭರಮ್ಮಣ್ಣ ನಾಯಕರು ನೂರಾರು ಕೆರೆಗಳನ್ನು ಕಟ್ಟಿಸಿ ಕೃಷಿಗೆ ಹೆಚ್ಚು ಅದ್ಯತೆ ನೀಡಿದ್ದಾರೆ. ಇದರ ಪರಿಣಾಮವಾಗಿ ಇಂದು ಚಿತ್ರದುರ್ಗದ ಜಿಲ್ಲೆಯಲ್ಲಿ ರೈತರು ಕೃಷಿಯನ್ನು ನಂಬಿ ಜೀವನ ಮಾಡುತ್ತ ಬಂದಿದ್ದಾರೆ ಎಂದರು.
ಅಂದು ಪೈಪ್ ಲೈನ್ ಹಾಕುವ ಮೂಲಕ ಕೆರೆಗಳ ನೀರು ವ್ಯರ್ಥ್ಯವಾಗದಂತೆ ಹೊಲ-ಗದ್ದೆಗಳಿಗೆ ಹರಿಸಿದ ಕೀರ್ತಿ ಶಿವಪ್ಪ ನಾಯಕ ಅವರಿಗೆ ಸಲ್ಲುತ್ತದೆ. ಕುಡಿಯುವ ನೀರಿಗಾಗಿ ಅತಿ ಹೆಚ್ಚು ಬಾವಿಗಳನ್ನು ತಮ್ಮ ತಾಯಿ ತಂದೆ ಮತ್ತು ಪತ್ನಿಯರ ಹೆಸರಿನಲ್ಲಿ ಕಟ್ಟಿಸಿದ ಶಾಸನಗಳಿವೆ. ಆದರೆ, ಅವರ ಕೊಡುಗೆಗಳನ್ನು ಇತಿಹಾಸಕರಾರು ತಿರುಚಿ ಬರೆದಿದ್ದಾರೆ. ಈ ಬಗ್ಗೆ ಧ್ವನಿ ಎತ್ತಬೇಕಾಗಿದೆ ಎಂದು ಅವರು ಹೇಳಿದರು. ಸಿಂಧೂರು ವೀರ ಲಕ್ಷ್ಮಣನವರ ಕುರಿತು ₹100 ಕೋಟಿ ವೆಚ್ಚದ ಸಿನಿಮಾ ಮಾಡಲು ಮುಂದಾಗಿದ್ದು, ಅದು ಕಾರಣಾಂತರದಿಂದ ನನೆಗುದಿಗ ಬಿದ್ದಿದೆ. ಅರಸರು ಮತ್ತು ಪಾಳೇಗಾರರ ಅಳ್ವಿಕೆಯ ಕಾಲದಲ್ಲಿ ಮಠ ಮಂದಿರಗಳಿಗೆ ಹೆಚ್ಚು ದಾನ ನೀಡಿದ್ದು, ಅಲ್ಲದೇ ದೇಗುಲವನ್ನು ನಿರ್ಮಾಣ ಮಾಡಿರುವ ಬಗ್ಗೆ ಶಾಸನಗಳಲ್ಲಿ ಉಲ್ಲೇಖಗಳಿವೆ. ಈ ಬಗ್ಗೆ ಹೆಚ್ಚು ಸಂಶೋಧನೆ ನಡೆದು ದಾಖಲಿಸುವ ಕಾರ್ಯಕ್ಕೆ ಸಮಾಜದ ಪ್ರತಿಯೊಬ್ಬರು ಕೈಜೊಡಿಸಬೇಕು ಎಂದರು.ಚಿತ್ರದುರ್ಗದ ಇತಿಹಾಸವನ್ನೂ ತಿರುಚಲಾಗಿದೆ. ನಿಜವಾದ ಸಂಶೋಧನೆ ನಡೆದು ದಾಖಲೀಕರಣವಾಗಬೇಕು. ವಾಲ್ಮೀಕಿ ನಾಯಕ ಅರಸರು ಮತ್ತು ಪಾಳೇಗಾರರ ಇತಿಹಾಸ ಪರಂಪರೆ ಕುರಿತು ರಾಜ್ಯ ವ್ಯಾಪ್ತಿ ಸಂಶೋಧನೆ ಕೈಗೊಂಡು ಪುಸಕ್ತ ರೂಪದಲ್ಲಿ ದಾಖಲಾತಿ ಮಾಡಬೇಕು. ಇತಿಹಾಸ ಪುರುಷರ ವಂಶಾವಳಿಯ ದಾಖಲೆಗಳನ್ನೂ ಕಲೆ ಹಾಕಬೇಕು ಎಂದು ಹೇಳಿದರು.