ಫುಟ್ಪಾತ್‌ನಲ್ಲೇ ಸಿಗುತ್ತೆ ಮದ್ಯ.! ಅರೆಬರೆ ಬೆಂದ ಖಾದ್ಯ!!

KannadaprabhaNewsNetwork |  
Published : Aug 23, 2026, 02:30 AM IST
ಹೂವಿನಹಡಗಲಿಯ ಬಸ್‌ ನಿಲ್ದಾಣ ಸುತ್ತುವರೆದಿರುವ ಡಬ್ಬಾ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು ಖಾಲಿ ಪೌಚ್‌ಗಳ ರಾಶಿ ಬಿದ್ದಿರುವುದು.  | Kannada Prabha

ಸಾರಾಂಶ

ಫಾಸ್ಟ್‌ಪುಡ್‌ ಹೆಸರಿನಲ್ಲಿ ಅರೆಬರೆ ಬೆಂದ ಆಹಾರ ಖಾದ್ಯಗಳು, ಧೂಳು ಮೆತ್ತಿಕೊಂಡ ಎಗ್‌ರೈಸ್‌, ಕರಕಲಾದ ಎಣ್ಣೆಯಲ್ಲಿ ಕರಿದ ಮೀನು, ಮೊಟ್ಟೆ, ಮಾಂಸ ಜನಾರೋಗ್ಯವನ್ನು ಹಾಳು ಮಾಡುತ್ತಿವೆ. ಇಷ್ಟಾದರೂ ಇತ್ತ ಸಂಬಂಧಪಟ್ಟ ಅಧಿಕಾರಿಗಳು ಚಿತ್ತ ಹರಿಸಿಲ್ಲ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ಫುಟ್ಪಾತ್‌ನಲ್ಲಿ ಡಬ್ಬಾ ಅಂಗಡಿಗಳ ಎಲ್ಲೆ ಮೀರಿದೆ. ಡಬ್ಬಾ ಅಂಗಡಿಗಳಲ್ಲೇ ಅಕ್ರಮವಾದಿ ಮದ್ಯ ಮಾರಾಟವಾಗುತ್ತಿದೆ. ಫಾಸ್ಟ್‌ಪುಡ್‌ ಹೆಸರಿನಲ್ಲಿ ಅರೆಬರೆ ಬೆಂದ ಆಹಾರ ಖಾದ್ಯಗಳು, ಧೂಳು ಮೆತ್ತಿಕೊಂಡ ಎಗ್‌ರೈಸ್‌, ಕರಕಲಾದ ಎಣ್ಣೆಯಲ್ಲಿ ಕರಿದ ಮೀನು, ಮೊಟ್ಟೆ, ಮಾಂಸ ಜನಾರೋಗ್ಯವನ್ನು ಹಾಳು ಮಾಡುತ್ತಿವೆ. ಇಷ್ಟಾದರೂ ಇತ್ತ ಸಂಬಂಧಪಟ್ಟ ಅಧಿಕಾರಿಗಳು ಚಿತ್ತ ಹರಿಸಿಲ್ಲ.

ಹೂವಿನಹಡಗಲಿ ಬಸ್‌ ನಿಲ್ದಾಣದ ಮುಖ್ಯ ರಸ್ತೆ ಮುಂದಿನ ಡಬ್ಬಾ ಅಂಗಡಿಗಳಲ್ಲಿ ಬೆಳಗಾಗುತ್ತಲೇ ಜನರಿಗೆ ಮದ್ಯ ಲಭ್ಯವಿರುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಿದರೂ ಅಬಕಾರಿ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಣು ಬಾಯಿ ಮುಚ್ಚಿಕೊಂಡಿದ್ದಾರೆ.

ಬಸ್‌ ನಿಲ್ದಾಣದ ರಸ್ತೆ ಮೇಲೆ ಸಾಕಷ್ಟು ಅನಧಿಕೃತ ಶೆಡ್‌ಗಳನ್ನು ಹಾಕಿಕೊಳ್ಳಲಾಗಿದೆ. ಬಸ್‌ ನಿಲ್ದಾಣ ಎಲ್ಲಿದೆ ಎಂದು ಕಾಣದಷ್ಟು ಅಂಗಡಿಗಳು ಸುತ್ತುವರೆದಿವೆ. ಈ ಕುರಿತು ಪುರಸಭೆ ಅಧಿಕಾರಿಗಳು ಅಂಗಡಿಗಳನ್ನು ತೆರವು ಮಾಡಲು ಮುಂದಾಗುತ್ತಿಲ್ಲ.

ಡಬ್ಬಾ ಅಂಗಡಿಗಳ ಮಾಲೀಕರಿಗೆ ನೋಟಿಸ್‌ ನೀಡಿದ್ದೇವೆ, ಆದರೂ ತೆರವು ಮಾಡಿಲ್ಲ. ಈ ಕುರಿತು ಕ್ರಮ ಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳ ಸಬೂಬು ಹೇಳುತ್ತಾರೆ. ಆದರೆ, ತೆರವು ಮಾಡುತ್ತಿಲ್ಲ. ರಸ್ತೆ ಬದಿಯ ಅಂಗಡಿಗಳಲ್ಲಿನ ಮದ್ಯದ ಖಾಲಿ ಪೌಚ್‌ಗಳು ಬಸ್‌ ನಿಲ್ದಾಣದ ತುಂಬೆಲ್ಲ ಆವರಿಸಿವೆ. ಇದರ ಸ್ವಚ್ಛತೆಗೆ ಸಾರಿಗೆ ಇಲಾಖೆಯಾಗಲಿ, ಪುರಸಭೆಯಾಗಲಿ ಗಮನ ಹರಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ಇತ್ತ ಆರೋಗ್ಯ ಇಲಾಖೆ ಆಹಾರ ಸುರಕ್ಷಣಾಧಿಕಾರಿ ಭೇಟಿ ನೀಡಿ, ಗುಣಮಟ್ಟದ ಆಹಾರ ಪರೀಕ್ಷೆಗೂ ಮುಂದಾಗಿಲ್ಲ, ಫುಟ್ಪಾತ್‌ನ ಡಬ್ಬಾ ಅಂಗಡಿಗಳಲ್ಲಿ ಆಹಾರ ತಯಾರಿಸುವವರು ಕಡ್ಡಾಯವಾಗಿ ಪರವಾನಗಿ ಪತ್ರ ಪಡೆಯಬೇಕಿದೆ. ಆದರೆ, ಯಾರ ಬಳಿಯೂ ಪರವಾನಗಿ ಪತ್ರಗಳಿಲ್ಲ. ಎಗ್‌ರೈಸ್‌ ಅಂಗಡಿಗಳ ಹಾ‍ವಳಿ ಹೆಚ್ಚಾಗಿದ್ದು, ಅಡುಗೆ ಎಣ್ಣೆಗೆ ಹಾಕುವ ಕಾರದ ಪುಡಿ ರಸ್ತೆಯಲ್ಲಿ ಸಂಚರಿಸುವವರ ಕಣ್ಣಿಗೆ ರಾಚುತ್ತಿದೆ. ಇದರಿಂದ ಜನ ರೋಸಿ ಹೋಗಿದ್ದಾರೆ. ಕ್ರಮ ಕೈಗೊಳ್ಳಬೇಕಾದ ಪುರಸಭೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ರಸ್ತೆ ಬದಿಯ ಡಬ್ಬಾ ಅಂಗಡಿಗಳಲ್ಲಿ ಮದ್ಯ ಕುಡಿಯಲು ಅವಕಾಶ ನೀಡಿದರೆ, ಜತೆಗೆ ಮದ್ಯ ಕಂಡು ಬಂದಲ್ಲಿ ಅವರ ವಿರುದ್ಧ ಕೇಸ್‌ ದಾಖಲು ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೂವಿನಹಡಗಲಿ ಅಬಕಾರಿ ಇಲಾಖೆ ಅಧಿಕಾರಿ ಸಿದ್ದೇಶ ನಾಯ್ಕ ಹೇಳಿದ್ದಾರೆ.ಬಸ್‌ ನಿಲ್ದಾಣದಲ್ಲಿನ ಡಬ್ಬಾ ಅಂಗಡಿ ತೆರವಿಗೆ 9 ಬಾರಿ ಪುರಸಭೆಗೆ ಪತ್ರ ಬರೆದಿದ್ದೇವೆ. ಒಂದು ಬಾರಿ ನೋಟಿಸ್‌ ನೀಡಿದ್ದಾರೆ. ಆದರೆ, ತೆರವು ಆಗಿಲ್ಲ. ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಪಾರ್ಕಿಂಗ್‌ ವ್ಯವಸ್ಥೆ, ಉದ್ಯಾನ ವನ, ಗಿಡ ಮರಗಳ ನೆಡಲು ವಿಭಾಗೀಯ ನಿಯಂತ್ರಣಾಧಿಕಾರಿಗಳ ಆದೇಶದಂತೆ ಕೆಲಸ ನಡೆಯುತ್ತಿದೆ ಎಂದು ಪ್ರಭಾರ ಸಾರಿಗೆ ಘಟಕ ವ್ಯವಸ್ಥಾಪಕ ಮಹೇಶ ತಿಳಿಸಿದರು.

ಪುಟ್ಫಾತ್‌ ಮೇಲಿನ ಅಂಗಡಿಕಾರರಿಗೆ ತೆರವು ಮಾಡುವಂತೆ ಪುರಸಭೆಯಿಂದ ಈ ಹಿಂದೆ ನೋಟಿಸ್‌ ನೀಡಲಾಗಿತ್ತು. ಈ ಕುರಿತು ಕ್ರಮ ಕೈಗೊಳ್ಳುತ್ತೇವೆ ಎಂದು ಹೂವಿನಹಡಗಲಿ ಪುರಸಭೆ ಮುಖ್ಯಾಧಿಕಾರಿ ಜಿ. ಹನುಮಂತಪ್ಪ ತಿಳಿಸಿದ್ದಾರೆ.

ಪಟ್ಟಣದ ಹೋಟೆಲ್‌ ಹಾಗೂ ಬೀದಿ ಬದಿಯ ಆಹಾರ ತಯಾರಿಸುವ ಅಂಗಡಿಗಳಿಗೆ ಭೇಟಿ ನೀಡಿ, ಆಹಾರ ಸುರಕ್ಷತೆ ಬಗ್ಗೆ ಮಾಹಿತಿ ನೀಡಿದ್ದೇವೆ. ನಿಯಮ ಉಲ್ಲಂಘನೆ ಮಾಡಿದರೆ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಪ್ರಭಾರ ಆಹಾರ ಸುರಕ್ಷಣಾಧಿಕಾರಿ ಡಾ. ಅಶೋಕ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಸಿಗುವ ವಿಶ್ವಾಸ: ಪೊನ್ನಣ್ಣ
ಸದ್ಗುಣಗಳೇ ಮಾನವನ ಧೀಶಕ್ತಿಯಾಗಲಿ: ದಿನೇಶ ಪೂಜಾರ