ಕುಮಟಾ: ಕಳೆದ ತಿಂಗಳಿಂದ ತಾಲೂಕಿನ ಕಡ್ಲೆ, ಹೊಲನಗದ್ದೆ, ಚಿತ್ರಗಿ ಮುಂತಾದ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡು ಆತಂಕ ಹುಟ್ಟಿಸಿದ್ದ ಚಿರತೆಯನ್ನು ಶನಿವಾರ ಬೋನಿಗೆ ಬೀಳಿಸುವಲ್ಲಿ ಅರಣ್ಯ ಇಲಾಖೆ ಸಫಲವಾಗಿದೆ.
ಇತ್ತೀಚೆಗೆ ಮಾಸೂರು ಕ್ರಾಸ್‌ನ ಜನತಾ ಪ್ಲಾಟ್ ನಿವಾಸಿಗಳು ಅರಣ್ಯ ಇಲಾಖೆಗೆ ಮನವಿ ನೀಡಿ ಚಿರತೆ ಹಿಡಿದು ಜನರಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿದ್ದರು. ಚಿರತೆ ಹಿಡಿಯುವ ಪ್ರಯತ್ನವನ್ನು ಮುಂದುವರಿಸಿದ ಅರಣ್ಯ ಇಲಾಖೆ ಈ ಬಾರಿ ಚಿತ್ರಗಿ ಸರ್ಕಾರಿ ಮಾದರಿ ಶಾಲೆ ಎದುರಿನ ಬೆಟ್ಟದಲ್ಲಿ ಬೋನು ಇರಿಸಿದ್ದು, ಕಳೆದ ನಾಲ್ಕು ದಿನಗಳಿಂದ ಚಿರತೆಗಾಗಿ ಕಾಯುತ್ತಿದ್ದರು. ಶನಿವಾರ ಬೆಳಗ್ಗೆ ಪರಿಶೀಲಿಸಿದಾಗ ಬೋನಿನಲ್ಲಿ ಚಿರತೆ ಸೆರೆಯಾಗಿದ್ದು, ಸುದ್ದಿ ತಿಳಿದ ಸಾರ್ವಜನಿಕರು ಚಿರತೆ ನೋಡಲು ಮುಗಿಬಿದ್ದರು. ಬಳಿಕ ಅರಣ್ಯ ಸಿಬ್ಬಂದಿ ಚಿರತೆಯನ್ನು ಸುರಕ್ಷಿತವಾಗಿ ದೊಡ್ಡ ಅರಣ್ಯಕ್ಕೆ ಒಯ್ದು ಸ್ಥಳಾಂತರ ಮಾಡಿದರು. ಜನರ ಆತಂಕ ದೂರ ಮಾಡಿದ ಅರಣ್ಯ ಇಲಾಖೆ ಕಾರ್ಯಕ್ಕೆ ಶಾಸಕ ದಿನಕರ ಶೆಟ್ಟಿ ಪ್ರಶಂಸಿಸಿದ್ದಾರೆ.
ಕಾರ್ಯಾಚರಣೆಯನ್ನು ಡಿಸಿಎಫ್ ಯೋಗೀಶ ಮಾರ್ಗದರ್ಶನದಲ್ಲಿ ಎಸಿಎಫ್ ಲೋಹಿತ್, ಆರ್‌ಎಫ್‌ಒ ಎಸ್.ಟಿ. ಪಟಗಾರ, ಡಿಆರ್‌ಎಫ್‌ಒ ರಾಘವೇಂದ್ರ ನಾಯ್ಕ, ಬೀಟ್ ಫಾರೆಸ್ಟರ್ ರಾಘವೇಂದ್ರ ನಾಯ್ಕ, ಸಿಬ್ಬಂದಿ ಹೂವಣ್ಣ ಗೌಡ, ಸುರೇಶ ನಾಯ್ಕ, ನಯನಾ ನಾಯ್ಕ, ಗಜಾನನ ಗೌಡ ಪಾಲ್ಗೊಂಡಿದ್ದರು.