ಶಿವಾನಂದ ಗೊಂಬಿ
ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರುಪಯುಕ್ತ ಪ್ರದೇಶದಲ್ಲಿ ಸೋಮವಾರ ರಾತ್ರಿ ಬೋನಿಗೆ ಬಿದ್ದ ಚಿರತೆಯನ್ನು ಮಂಗಳವಾರ ಕಾಡಿಗೆ ಬಿಡಲಾಗಿದೆ. 38 ದಿನಗಳ ತೀವ್ರ ಕಾರ್ಯಾಚರಣೆ ಬಳಿಕ ಈ ಚಿರತೆಯನ್ನು ಸೆರೆ ಹಿಡಿಯಲಾಗಿದೆ. ಆದರೆ ಈ ಚಿರತೆ ಬಂದು ಬರೀ 38 ದಿನಗಳಾಗಿಲ್ಲ. ಕನಿಷ್ಠವೆಂದರೂ ನಾಲ್ಕೈದು ತಿಂಗಳಿಂದ ಅದು ಇಲ್ಲೇ ವಾಸ್ತವ್ಯ ಹೂಡಿದೆ. ಜತೆಗೆ ಹಿಡಿಯುವ ಕಾರ್ಯಾಚರಣೆ ಶುರುವಾದ ಬಳಿಕವೂ ಅದು ತಾನೇ ಕಾಡಿಗೆ ಹೋಗಿ ಮತ್ತೆ ಮರಳಿ ಹುಬ್ಬಳ್ಳಿ ಮಹಾನಗರಕ್ಕೆ ಬಂದಿದೆ!
ಈ ಚಿರತೆ ಹಿಡಿಯುವ ಸುಧೀರ್ಘ ಅವಧಿ ಕಾರ್ಯಾಚರಣೆಯಲ್ಲಿ ಭಾಗವಹಿಸಿ, ಕೊನೆಗೂ ಯಶಸ್ವಿಯಾದ ಅರಣ್ಯ ಇಲಾಖೆ ಅಧಿಕಾರಿಗಳು ಬಿಚ್ಚಿಟ್ಟ ರಹಸ್ಯ ಇದು!ಇಂಥ ವನ್ಯಪ್ರಾಣಿಗಳು ಇಷ್ಟೊಂದು ದಿನಗಳ ಕಾಲ ಇಲ್ಲಿ ವಾಸಿಸುತ್ತವೆ ಎಂದರೆ ಈ ಹುಬ್ಬಳ್ಳಿ-ಧಾರವಾಡ ಮಹಾನಗರ ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ನಾಗರಿಕರನ್ನು ಕಾಡುತ್ತಿದೆ.
ಮೂರುವರೆ ವರ್ಷದ್ದು:ಮೂರುವರೆ ವರ್ಷದ ಚಿರತೆ ಇದಾಗಿದ್ದು ಒಂದು ಪ್ರದೇಶದಲ್ಲಿ ಚಿರತೆ ಸೇರಿದಂತೆ ಕಾಡಿನ ಪ್ರಾಣಿಗಳು ಅಷ್ಟೊಂದು ಸಲೀಸಾಗಿ ಒಗ್ಗಿಕೊಳ್ಳುವುದಿಲ್ಲ. ಒಂದು ವೇಳೆ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡರೂ ಹೆಚ್ಚು ದಿನ ಉಳಿಯುವುದಿಲ್ಲ. ಆದರೆ, ಇಲ್ಲಿನ ವಿಮಾನ ನಿಲ್ದಾಣದಲ್ಲಿ ಈ ಚಿರತೆ ನಾಲ್ಕೈದು ತಿಂಗಳು ವಾಸವಾಗಿದೆ. ಆದರೆ, ಇದು ಜನರ ಕಣ್ಣಿಗೆ ಗೋಚರವಾಗಿದ್ದು 2025ರ ಡಿ. 17ಕ್ಕೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾಡಿಗೆ ಹೋಗಿ ಮರಳಿದೆ:ಜನರಿಗೆ ಕಂಡ ಬಳಿಕ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿ 12 ಕಡೆ ಟ್ರ್ಯಾಪ್ ಕ್ಯಾಮೆರಾ, 3 ಕಡೆ ಬೋನ್ ಇಡಲಾಗಿತ್ತು. ಡಿ. 31ರ ವರೆಗೆ ಕಂಡಿದ್ದ ಚಿರತೆ ಇಲ್ಲಿಂದ ಮತ್ತೆ ಕಾಡಿಗೆ ತಾನೇ ಹೋಗದೆ. ಬಳಿಕ 10ರಿಂದ 12 ದಿನ ಯಾರಿಗೂ ಕಾಣಿಸಿಕೊಂಡಿಲ್ಲ. ಆದರೂ ಕಾರ್ಯಾಚರಣೆ ಮಾತ್ರ ನಿಂತಿರಲಿಲ್ಲ. ಜ.12ಕ್ಕೆ ವಿಮಾನ ನಿಲ್ದಾಣಕ್ಕೆ ಮರಳಿ ಬಂದಿದ್ದು ಟ್ರ್ಯಾಪ್ ಕ್ಯಾಮೆರಾದಲ್ಲಿ ಅದರ ಚಲನವಲನ ದಾಖಲಾಗಿದೆ.
ಸೆರೆ ದೊಡ್ಡ ಸವಾಲು:ಹೇಗಾದರೂ ಮಾಡಿ ಚಿರತೆ ಸೆರೆ ಹಿಡಿಯಲೇಬೇಕು ಎಂದು ಬನ್ನೇರುಘಟ್ಟದಿಂದ ಥರ್ಮಲ್ ಡ್ರೋಣ, ಮೈಸೂರಿನಿಂದ ನುರಿತ ತಂಡಗಳನ್ನು ಕರೆಯಿಸಲಾಗಿತ್ತು. ಆದರೆ ಥರ್ಮಲ್ ಡ್ರೋಣ ಕ್ಯಾಮೆರಾದ ಬ್ಲಿಂಕ್ಕಿಂಗ್ ಲೈಟ್ ನೋಡಿ ವಿಮಾನ ನಿಲ್ದಾಣದ ಜಾಗೆಯಲ್ಲಿ ಅವಿತುಕೊಂಡಿತ್ತು. 200 ಎಕರೆ ಪ್ರದೇಶಕ್ಕೂ ದೊಡ್ಡ ಖಾಲಿ ಜಾಗೆಯಲ್ಲಿ ಬೆಳೆದಿದ್ದ ಕಾಡು, ಸಲೀಸಾಗಿ ಸಿಗುತ್ತಿದ್ದ ಆಹಾರದಿಂದಾಗಿ ಅದು ಹೊರಗೆ ಹೆಚ್ಚು ಕಾಣಿಸಿಕೊಳ್ಳುತ್ತಿರಲಿಲ್ಲ.
ಕೊನೆಗೆ ಮೈಸೂರಿನಿಂದ ತರಿಸಿದ ದೊಡ್ಡ ಬೋನ್ ಇಡಲಾಗಿತ್ತು. ಒಂದು ಸಲ ಅದರ ಬಳಿ ಬಂದು ಮರಳಿ ಹೋಗಿತ್ತು. ಚುಚ್ಚುಮದ್ದು ನೀಡಿ ಪ್ರಜ್ಞೆ ತಪ್ಪಿಸಿ ಸೆರೆ ಹಿಡಿಯಲು ಅರಣ್ಯ ಇಲಾಖೆ ತಯಾರಿ ನಡೆಸಿತ್ತು. ಆದರೆ, ಅದರ ಮರುದಿನ ಸೋಮವಾರ ರಾತ್ರಿ ಬೋನ್‌ನೊಳಗೆ ಹೋದ ತಕ್ಷಣವೇ ಸಿಲುಕಿಕೊಂಡು ಸೆರೆಯಾಗಿದೆ. ಹೀಗಾಗಿ ಅದಕ್ಕೆ ಚುಚ್ಚುಮದ್ದು ನೀಡುವ ಅಗತ್ಯವೂ ಬೀಳಲಿಲ್ಲ. ಆದರೆ, ಕಳೆದ ಎಂಟ್ಹತ್ತು ದಿನಗಳಿಂದ ಪ್ರತಿನಿತ್ಯ ಕನಿಷ್ಠವೆಂದರೂ 50-60 ಜನ ಸಿಬ್ಬಂದಿ, ವೈದ್ಯರು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು.ನಾಡಿಗೆ ಬಂದಿದ್ದ ಚಿರತೆ ಮತ್ತೆ ಕಾಡಿಗೆಆಹಾರ ಅರಸಿಕೊಂಡು ನಾಡಿಗೆ ಬಂದಿದ್ದ ಚಿರತೆಯನ್ನು ಸೆರೆ ಸಿಕ್ಕ ಬಳಿಕ ಮರಳಿ ಕಾಡಿಗೆ ಬಿಡಲಾಗಿದೆ. ಚಿರತೆಯ ಆರೋಗ್ಯ ಪರಿಶೀಲಿಸಿದ ವೈದ್ಯರು, ಆರೋಗ್ಯದಲ್ಲೇನೂ ಏರುಪೇರಾಗಿರಲಿಲ್ಲ. ಹೀಗಾಗಿ ಸುರಕ್ಷಿತವಾಗಿ ಮಂಗಳವಾರ ಬೆಳಗಿನ ಜಾವ ಅದನ್ನು ಮತ್ತೆ ಕಾಡಿಗೆ ಬಿಟ್ಟು ಬರಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಆರ್.ಎಸ್. ಉಪ್ಪಾರ ತಿಳಿಸಿದ್ದಾರೆ .ವಿಮಾನ ನಿಲ್ದಾಣದ ನಿರುಪಯುಕ್ತ ಜಾಗೆಯಲ್ಲಿ ಚಿರತೆ ಅವಿತುಕೊಂಡಿರುವುದನ್ನು ನೋಡಿದರೆ ಅದು ಇಲ್ಲಿಗೆ ನಾಲ್ಕೈದು ತಿಂಗಳ ಹಿಂದೆಯೇ ಬಂದಿರುವ ಸಾಧ್ಯತೆ ಇದೆ. ಮಧ್ಯೆ ಕೆಲ ದಿನ ಕಾಡಿಗೆ ಹೊರಟು ಹೋಗಿತ್ತು. ಮರಳಿ ಇಲ್ಲಿಗೆ ಬಂದಿತ್ತು. ದೊಡ್ಡ ಬೋನ್‌ನಲ್ಲೇ ತಾನೇ ಬಂದು ಸಿಲುಕಿತು. ಅದನ್ನೀಗ ಕಾಡಿಗೆ ಬಿಡಲಾಗಿದೆ.
ವಸಂತ ರೆಡ್ಡಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಧಾರವಾಡ