ಕೊಪ್ಪಳ:
ನಗರದಾದ್ಯಂತ ಎಲ್ಲೆಂದರಲ್ಲಿ ಕಸ ಬಿಸಾಡುವವರಿಗೆ ಅದನ್ನು ಸ್ವಚ್ಛ ಮಾಡಿದ್ದಲ್ಲದೆ, ಅಲ್ಲಿಯೇ ರಂಗೋಲಿ ಬಿಡಿಸಿ, ಬುದ್ಧಿ ಹೇಳುವ ಕಾರ್ಯವನ್ನು ಪೌರಕಾರ್ಮಿಕರು ಆರಂಭಿಸಿದ್ದಾರೆ.ಕಸ ಹೊತ್ತು ಹಾಕಲು ನಾವು ಸಿದ್ಧರಿದ್ದೇವೆ. ನಮ್ಮದು ಅದೇ ಕಾಯಕ. ಆದರೆ, ನಗರದಾದ್ಯಂತ ಎಲ್ಲೆಂದರಲ್ಲಿ ಕಸ ಹಾಕಿ, ನಗರವನ್ನು ಗಬ್ಬೆಬ್ಬಿಸುವುದನ್ನು ತಡೆಯಲು ನಾಗರಿಕರು ಸಹಕಾರ ನೀಡಬೇಕು ಎಂದು ಮನವರಿಕೆ ಮಾಡಿಕೊಡುವ ವಿನೂತನ ಪ್ರಯತ್ನವನ್ನು ಪೌರಕಾರ್ಮಿಕರು ಮಾಡುತ್ತಿದ್ದಾರೆ.
ನಗರದ ಪ್ರಮುಖ ವೃತ್ತ, ಕೂಡುರಸ್ತೆಗಳಲ್ಲಿ ಕಸ ಹಾಕುವ ಸ್ಥಳಗಳನ್ನು ನಗರಸಭೆ ಗುರುತಿಸಿದೆ. ಪ್ರಧಾನ ಅಂಚೆ ಕಚೇರಿ ಹತ್ತಿರ ರಸ್ತೆಯಲ್ಲಿ ಕಸ ಹಾಕುವುದನ್ನು ತಡೆಯಲು ಗುರುವಾರ ರಂಗೋಲಿ ಹಾಕುವ ಮೂಲಕ ಜಾಗೃತಿ ಮೂಡಿಸಲಾಯಿತು.ನಗರದ ಆರೇಳು ಕಡೆ ಇಂಥ ಸ್ಥಳಗಳನ್ನು ಸ್ವಚ್ಛಗೊಳಿಸಿ ರಂಗೋಲಿ ಹಾಕಿ, ಕಸ ಹಾಕದಂತೆ ಸುತ್ತಲಿನ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಅಲ್ಲದೆ ಕಸವನ್ನು ನೇರವಾಗಿ ಕಸದ ವಾಹನಕ್ಕೆ ಹಾಕುವಂತೆ ಸೂಚಿಸಲಾಯಿತು.
ಹನ್ನೊಂದು ಮಹಿಳೆಯರು ಸಮುದಾಯ ಸಂಚಾಲಕರಾಗಿ ನೇಮಕಗೊಂಡಿದ್ದು, ಅವರು ಮನೆ ಅಂಗಡಿಗಳಿಗೆ ತೆರಳಿ, ಕಸವನ್ನು ಹಸಿ, ಒಣ, ನೈರ್ಮಲ್ಯ ತ್ಯಾಜ್ಯ, ಎಲೆಕ್ಟ್ರಾನಿಕ್ ತ್ಯಾಜ್ಯ, ಬಯೋಮೆಡಿಕಲ್ ತ್ಯಾಜ್ಯ, ಹೀಗೆ ಐದು ಬಗೆಯಲ್ಲಿ ವಿಂಗಡಿಸಿ ನೀಡುವಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ ಜತೆಗೆ ಕೊಪ್ಪಳ ನಗರ ಕಸಮುಕ್ತ, ಧೂಳುಮುಕ್ತ ಮಾಡುವ ಸಂಕಲ್ಪ ಮಾಡಿದ್ದಾರೆ. ಏನಿದು ರಂಗೋಲಿ?:ಸ್ವಚ್ಛ ನಗರವನ್ನಾಗಿ ಮಾಡಲು ನಿಟ್ಟಿನಲ್ಲಿ ಪೌರಕಾರ್ಮಿಕರು ಹಗಲು, ರಾತ್ರಿ ಎನ್ನದೆ ಕಾರ್ಯನಿರ್ವಹಿಸುತ್ತಿದ್ದಾರೆ. ಈ ನಡುವೆ ನಗರದಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುತ್ತಿರುವುದರಿಂದ ಅವರ ಶ್ರಮ ವ್ಯರ್ಥವಾಗುತ್ತಿದೆ. ಕಸ ಸುರಿಯುವ ಸ್ಥಳಗಳನ್ನು ಗುರುತಿಸಿ, ಅದನ್ನು ಸ್ವಚ್ಛ ಮಾಡಿ, ಅಲ್ಲಿ ರಂಗೋಲಿ ಹಾಕುವುದಲ್ಲದೇ, ಅಲ್ಲಿ ಕಸ ಸುರಿಯದಂತೆ ಜನರಿಗೆ ಮನವಿ ಮಾಡುತ್ತಿದ್ದಾರೆ.
ಬ್ಲ್ಯಾಕ್‌ಸ್ಪಾಟ್ ನಿರ್ಮೂಲನೆ ಕಾರ್ಯಕ್ರಮದಲ್ಲಿ ಕೊಪ್ಪಳ ನಗರಸಭೆ ಪೌರಾಯುಕ್ತ ವೆಂಕಟೇಶ್ ನಾಗನೂರ, ನಗರಸಭೆ ಸದಸ್ಯರಾದ ಪರಶುರಾಮ ಮೇದಾರ್, ನಗರಸಭೆ ವ್ಯವಸ್ಥಾಪಕ ಮುನಿಸ್ವಾಮಿ, ಆರೋಗ್ಯ ನಿರೀಕ್ಷಕ ಲಾಲ್ ಸಾಬ್ ಮನಿಯಾರ್, ರಾಘವೇಂದ್ರ ಚವ್ಹಾಣ, ವಿಶ್ವನಾಥ ಯಾದವ್ ಭಾಗವಹಿಸಿದ್ದರು.ನಮ್ಮ ಕಾರ್ಯವನ್ನು ನಾವು ಮಾಡಿಸುತ್ತೇವೆ. ಪೌರಕಾರ್ಮಿಕರು ಸ್ವಚ್ಛ ಮಾಡುವುದರಲ್ಲಿ ಮೀನಮೇಷ ಮಾಡುವುದಿಲ್ಲ. ಆದರೆ, ಇದಕ್ಕೆ ನಾಗರಿಕರು ಸಹಕಾರ ನೀಡಬೇಕು. ಎಲ್ಲೆಂದರಲ್ಲಿ ಕಸ ಬಿಸಾಡುವುದನ್ನು ಬಿಡಬೇಕು. ಇದಕ್ಕಾಗಿಯೇ ಈ ರಂಗೋಲಿ ಜಾಗೃತಿ ಮಾಡಲಾಗುತ್ತದೆ.
ಲಾಲಸಾಬ ಆರೋಗ್ಯ ನಿರೀಕ್ಷಕರು, ಸಿಎಂಸಿ, ಕೊಪ್ಪಳಪೌರಕಾರ್ಮಿಕರ ಶ್ರಮ ಸಾರ್ಥಕವಾಗಬೇಕು ಎಂದರೆ ಕಸವನ್ನು ಹಸಿ ಕಸ ಹಾಗೂ ಒಣ ಕಸ ಎಂದು ಬೇರ್ಪಡಿಸಿ, ಕಸದ ವಾಹನದಲ್ಲಿಯೇ ಹಾಕಬೇಕು.
ರಾಘವೇಂದ್ರ ಚವ್ಹಾಣ ಆರೋಗ್ಯ ನಿರೀಕ್ಷಕರು, ಸಿಎಂಸಿ, ಕೊಪ್ಪಳ