ಕನ್ನಡಪ್ರಭ ವಾರ್ತೆ ಸಿರಿಗೆರೆತರಳಬಾಳು ಜಗದ್ಗುರು ಬೃಹನ್ಮಠದ ವಿರುದ್ಧ ಕೆಲವರು ನಡೆಸುತ್ತಿರುವ ಅಪಪ್ರಚಾರದ ವಿರುದ್ಧ ಈಗ ಮಠದ ಭಕ್ತರು ಕೆರಳಿದ್ದಾರೆ. ಹೆಮ್ಮನ ಬೇತೂರು ಗ್ರಾಮಸ್ಥರು ತರಳಬಾಳು ಶ್ರೀಗಳಿಗೆ ಬೆಂಬಲ ಸೂಚಿಸಿ ರಕ್ತದಲ್ಲಿ ಸಹಿ ಮಾಡಿದ ಪತ್ರಗಳನ್ನು ರವಾನಿಸಿ, ಮಠದ ಪೀಠಾಧ್ಯಕ್ಷರಾಗಿ ತಾವು ಮುಂದುವರೆಯಬೇಕು. ಯಾರದೇ ಅಪಪ್ರಚಾರಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.
ಇಡೀ ಗ್ರಾಮದ ಭಕ್ತರು ನಿಮಗೆ ಬೆಂಬಲ ಸೂಚಿಸುತ್ತಿದ್ದೇವೆ. ಯಾರ ಒತ್ತಡಕ್ಕೂ ಮಣಿಯದೇ ಸ್ವಯಂಪ್ರೇರಿತರಾಗಿ ನಾವೆಲ್ಲರೂ ಸಭೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದೇವೆ. ಶ್ರೀಗಳ ವಿರುದ್ಧ ನಡೆಸುತ್ತಿರುವ ಪಿತೂರಿಗೆ ಹೋರಾಟದ ಮೂಲಕ ಉತ್ತರ ಕೊಡಲು ನಾವು ಸಿದ್ದರಿದ್ದೇವೆ. ಸಮಾಜದಲ್ಲಿ ವಿನಾಕಾರಣ ಸುಳ್ಳು ಹೇಳುತ್ತಾ ಮಠದ ಹೆಸರು ಕೆಡಿಸಲು ಯತ್ನಿಸುತ್ತಿರುವವರು ಸುಮ್ಮನಿದ್ದರೆ ಒಳಿತು. ಇಲ್ಲದಿದ್ದರೆ ನಾವೂ ತಿರುಗೇಟು ನೀಡುವ ಕಾಲ ದೂರವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.ಇಂದು ಹಳ್ಳಿ ಹಳ್ಳಿಗಳಲ್ಲಿ ಎಲ್ಲಾ ಜನಸಾಮಾನ್ಯರು, ಪ್ರಜ್ಞಾವಂತ ಭಕ್ತರು ಪೂಜ್ಯರ ಮುಂದಾಳತ್ವದಲ್ಲಿ ಬಲಿಷ್ಠ ಸಮ ಸಮಾಜದ ನಿರ್ಮಾಣ ಮಾಡಲು ತೊಡಗಿದ್ದೇವೆ. ಪಿತೂರಿ ನಡೆಸುವವರ ಬಗ್ಗೆ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ. ಇಷ್ಟು ದಿನ ಇಲ್ಲದ ಸುಳ್ಳು ಆರೋಪ, ಪಿತೂರಿ ಹೆಚ್ಚಾಗಿ ನಡೆಯುತ್ತಿದೆ. ನಾವೆಲ್ಲರೂ ಶ್ರೀಗಳ ಪರ ನಿಲ್ಲುವ ಮೂಲಕ ಸರಿಯಾದ ಉತ್ತರ ನೀಡೋಣ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.ಗ್ರಾಮದ ದೇವಾಲಯದಲ್ಲಿ ಗ್ರಾಮದ ಮುಖಂಡರು, ಭಕ್ತರೆಲ್ಲರೂ ಸೇರಿ ಶ್ರೀ ತರಳಬಾಳು ಬೃಹನ್ಮಠದ ಮೇಲೆ ಸುಳ್ಳು ಸುದ್ದಿ, ಪಿತೂರಿ ಆರೋಪ ಮಾಡುವ ಬಂಡವಾಳಶಾಹಿಗಳ ವಿರುದ್ಧ ತೊಡೆ ತಟ್ಟಿ ನಿಲ್ಲೋಣ. ಜಗದ್ಗುರುಗಳ ನೇತೃತ್ವದಲ್ಲಿ ಸಮಾಜ ಸೇವೆ ಮಾಡಲು ರಕ್ತದಲ್ಲಿ ಸಹಿ ಮಾಡಿ ನಿರ್ಣಯ ಕೈಗೊಂಡಿದ್ದೇವೆ ಎಂದರು.
ಸಿರಿಗೆರೆ ಮಠವು ಬೇರೆ ಮಠಗಳಂತೆ ಆಗಬಾರದು. ಸ್ವಾಮೀಜಿಗಳು ಕೊನೆ ಉಸಿರು ಇರುವವರೆಗೂ ಮುಂದುವರಿಯಬೇಕು. ಅವರು ಸುತ್ತಮುತ್ತಲಿನ ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿದ ಆಧುನಿಕ ಭಗೀರಥರು. ಎಷ್ಟೋ ಹಳ್ಳಿಗಳಲ್ಲಿ ಇಂದಿಗೂ ನೀರಾವರಿ ಸೌಲಭ್ಯ ಮುಂದುವರಿದಿದೆ ಎಂದರೆ ಅದು ಸಿರಿಗೆರೆ ಶ್ರೀಗಳಿಂದ ಆಗಿರುವ ಕಾರ್ಯ. ಹಾಗಾಗಿ ಶ್ರೀಗಳ ಬದಲಾವಣೆ ಮಾಡಬಾರದು ಎಂಬ ನಿರ್ಣಯ ತೆಗೆದುಕೊಂಡು ಶ್ರೀಗಳ ವಿರುದ್ಧ ಇರುವವರ ಷಡ್ಯಂತ್ರಕ್ಕೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಗುಡುಗಿದರು.ಶ್ರೀಗಳ ದೂರದೃಷ್ಟಿಯಿಂದ ಕಾರ್ಯಗತಗೊಂಡಿರುವ 20 ಕ್ಕೂ ಹೆಚ್ಚು ಏತನೀರಾವರಿ ಯೋಜನೆಗಳ ಅಡಿಯಲ್ಲಿ ನೂರಾರು ಕೆರೆಗಳಿಗೆ ನೀರು ತುಂಬಿಸುವ ಸತ್ಕಾರ್ಯ ಮಾಡಿದ್ದಾರೆ. ಅದರಲ್ಲೂ ಸರ್ಕಾರ ಕೈಗೊಳ್ಳುವ ಜನಪರ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದಲ್ಲಿ ಶ್ರೀಗಳ ಕಾರ್ಯವೈಖರಿ ಮಹತ್ವವಾದುದು ಎಂದು ತಿಳಿಸಿದರು.ಸಭೆಯಲ್ಲಿ ಎಸ್.ಆರ್. ಪ್ರಕಾಶ್, ನಾಗರಾಜಪ್ಪ, ಎಸ್.ಎನ್. ಕಲ್ಲೇಶಪ್ಪ, ಎನ್.ಎಂ. ಪ್ರಸನ್ನ, ಎಸ್. ಬಸವರಾಜ್, ಬಿ.ಎಸ್. ಸಚಿನ್, ಪಂಪಣ್ಣ, ಸಿ.ಎಸ್. ಪ್ರಕಾಶ, ಎಚ್.ಆರ್. ಶಿವಕುಮಾರ, ಇ. ರಮೇಶ, ಕರಿಬಸಣ್ಣ, ಎಸ್.ಎಸ್. ಸೋಮಶೇಖರ್, ಯು.ಆರ್., ಎಸ್. ಶ್ರೀನಿವಾಸ್, ಜಿ.ಎಸ್ ರಾಜಶೇಖರ್, ತಿಪ್ಪೇಸ್ವಾಮಿ, ಪರಿಶಿಷ್ಟ ಪಂಗಡ ಸಮಾಜದ ಮುಖಂಡ ಟಿ.ಡಿ ರಮೇಶ್, ಬಕ್ಕೇಶ್ ಇತರರು ಇದ್ದರು.