ಕೊಪ್ಪಳ: ಮಾನಸಿಕ ನೆಮ್ಮದಿ ಹಾಗೂ ವಿಕಾಸಕ್ಕೆ ಚುಟುಕು ಸಾಹಿತ್ಯ ಪ್ರೇರಣೆ ನೀಡುತ್ತದೆ. ಸಾಹಿತ್ಯ ಆಸಕ್ತರಿಗೆ ಸೂಕ್ತ ವೇದಿಕೆ ದೊರೆತಾಗ ಪ್ರತಿಯೊಬ್ಬರೂ ಕವಿಗಳಾಗಿ ಹೊರ ಹೊಮ್ಮಲು ಸಾಧ್ಯ ಎಂದು ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಸಂಚಾಲಕ ಡಾ. ಎಂ.ಜಿ.ಆರ್. ಅರಸು ಹೇಳಿದರು.
ಶ್ರೀನಿವಾಸ ಚಿತ್ರಗಾರ ಅವರ ಎಳೆಯರಿಗಾಗಿ ಒತ್ತಕ್ಷರ ಇಲ್ಲದ ಕಥೆಗಳು ಕೃತಿ, ಈರಪ್ಪ ಬಿಜಲಿ ಅವರ ನಿಖಿಲ್‌ನ ಬಣ್ಣದ ಕೊಡೆ ಕೃತಿ ಹಾಗೂ ಎ.ಪಿ. ಅಂಗಡಿ ಅವರ 156ನೇ ಕಲಾಕೃತಿ ಬಿಡುಗಡೆಗೊಳಿಸಿದ ವಿಪ ಸದಸ್ಯೆ ಹೇಮಲತಾ ನಾಯಕ, ತಿರುಳಗನ್ನಡ ನಾಡು ಸಾಹಿತ್ಯ, ಸಂಗೀತಕ್ಕೆ ಕೊರತೆಯಿಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಅವರಿಗೆಲ್ಲ ಸೂಕ್ತ ಪ್ರೋತ್ಸಾಹ ಸಿಗುತ್ತಿಲ್ಲ. ಸಮಾಜ ಸೇವೆ ಹೆಸರಿನಲ್ಲಿ 24 ತಾಸು ರಾಜಕಾರಣ ಮಾಡುವ ಪದ್ಧತಿ ಕೈಬಿಟ್ಟಾಗ ಸೇವೆಗೆ ಮಹತ್ವ ಸಿಗುತ್ತದೆ ಎಂದು ಹೇಳಿದರು. ಉತ್ತರ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಗಳು ಅಸಮತೋಲನ ಎದುರಿಸುತ್ತಿದೆ. ಶಿಕ್ಷಣ, ವಿಶ್ವವಿದ್ಯಾಲಯ ಹಾಗೂ ಮಹಿಳಾ ಸಬಲೀಕರಣ ಪ್ರಗತಿ ಯಶಸ್ವಿಯಾಗುತ್ತಿಲ್ಲ. ತುಂಗಭದ್ರಾ ಡ್ಯಾಮ್ ಕ್ರಸ್ಟ್‌ಗೇಟ್ ಹೊಸದಾಗಿ ಹಾಕಲಾಗಿದೆ. ಆದರೆ ಮಳೆಯಾಗುತ್ತಿಲ್ಲ. ರೈತರು ಗೊಬ್ಬರ, ಕ್ರಿಮಿನಾಶಕಕ್ಕಾಗಿ ಪರದಾಡುತ್ತಿದ್ದಾರೆ. ಕೊಪ್ಪಳದಲ್ಲಿ ಕಳಪೆ ಗೊಬ್ಬರ ಮಾರಾಟದ ಕೂಗು ಕೇಳಿಬರುತ್ತಿದೆ. ಸಾಹಿತಿಗಳೂ ಲೇಖನಿ ಜತೆಗೆ ಜನಪರ ಕೆಲಸ ಮಾಡಲು ಸಿದ್ಧರಾಗಬೇಕು ಎಂದು ಹೇಳಿದರು.
ಪರಿಷತ್ ತಾಲೂಕು ಅಧ್ಯಕ್ಷ ಮೈಲಾರಪ್ಪ ಉಂಕಿ ಅಧ್ಯಕ್ಷತೆ ವಹಿಸಿದ್ದರು. ಆನಂತರ ಗೋಷ್ಠಿ-೧ರಲ್ಲಿ ಚುಟುಕು ಸಾಹಿತ್ಯ ಬೆಳೆದು ಬಂದ ಬಗೆ ಕುರಿತು ಶಿ.ಕಾ. ಬಡಿಗೇರ ಉಪನ್ಯಾಸ ನೀಡಿದರು. ಸಾಹಿತಿಗಳಾದ ವೀರಣ್ಣ ಹುರಕಡ್ಲಿ, ಎಪಿ ಅಂಗಡಿ, ಕೋಮಲಾ ಕುದರಿಮೋತಿ, ಡಾ. ಫಕೀರಪ್ಪ ವಜ್ರಬಂಡಿ, ಎಸ್.ಎಂ. ಕಂಬಾಳಿಮಠ, ವಿದ್ಯಾವತಿ ಚಿತ್ರಗಾರ, ಮುಖoಡರಾದ ಮುದಕಪ್ಪ ಹೊಸಮನಿ, ಬಸವರಾಜ್ ಕೊಡ್ಲಿ, ಸರೋಜಾ ಬಾಕಳೆ ಇದ್ದರು.ಗೋಷ್ಠಿ-೨ರಲ್ಲಿ ಕೊಪ್ಪಳ ತಾಲೂಕು ಅಭಿವೃದ್ಧಿ ಒಂದು ಅವಲೋಕನ ಕುರಿತು ಹೋರಾಟಗಾರ ಗಾಳೆಪ್ಪ ಕಡೆಮನಿ ವಿಷಯ ಮಂಡಿಸಿದರು. ಹಿರಿಯ ಚಿಂತಕ ವೀರಣ್ಣ ಹುರಕಡ್ಲಿ ಅಧ್ಯಕ್ಷತೆ ವಹಿಸಿದ್ದರು.
ಕವಿ ಯಲ್ಲಪ್ಪ ಮಲ್ಲಪ್ಪ ಹರನಾಳಗಿ ಅಧ್ಯಕ್ಷತೆ ವಹಿಸಿದ್ದರು. ಶರಣಬಸಪ್ಪ ಬಿಳಿಯಲಿ ಆಶಯ ನುಡಿ ಹೇಳಿದರು. ಸಾಹಿತಿಗಳಾದ ಅರುಣಾ ನರೇಂದ್ರ ಪಾಟೀಲ್, ಶಾಂತ ಕನಕಗಿರಿ ಮಠ್ ಇದ್ದರು.
ಪರಿಷತ್ತಿನ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಸಾಯಿಬಾಬಾ ದೇವಸ್ಥಾನದಿಂದ ನಿಮಿಷಾಂಬ ದೇವಸ್ಥಾನ ವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು.