ಗಜೇಂದ್ರಗಡ: ಸಾರ್ವಜನಿಕರ ದೂರಿನ ಹಿನ್ನೆಲೆ ಸಮೀಪದ ರಾಮಾಪುರ ಗ್ರಾಮ ಪಂಚಾಯಿತಿ ಮೇಲೆ ಜಿಲ್ಲಾ ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕ ವಿಜಯ ಬಿರಾದಾರ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳು ಸೋಮವಾರ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಗ್ರಾಮದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ ಇಲ್ಲದಿರುವುದು ಸೇರಿ ಹಲವಾರು ಗ್ರಾಪಂನಲ್ಲಿ ಹಲವಾರು ಅಕ್ರಮದ ಆರೋಪದ ಹಿನ್ನೆಲೆ ದಾಳಿ ನಡೆದಿದೆ. ದಾಳಿ ವೇಳೆ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಇರಲಿಲ್ಲ. ಅಲ್ಲದೆ ಮಹತ್ವದ ದಾಖಲೆಗಳನ್ನು ಪಿಡಿಒ ಅವರು ಮನೆಗೆ ತೆಗೆದುಕೊಂಡು ಹೋಗಿರುವ ಕುರಿತು ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ. ಕೆಲ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆದಿದ್ದಾರೆ.

ಪಿಡಿಒ ಗ್ರಾಪಂ ಠರಾವ್ ಬುಕ್ ಮತ್ತು ಕ್ಯಾಶ್ ಬುಕ್ ಹಾಗೂ ಚೆಕ್ ಬುಕ್ ಸೇರಿ ಅನೇಕ ದಾಖಲೆಗಳನ್ನು ಮನೆಗೆ ತೆಗೆದುಕೊಂಡು ಹೋಗಿರುವ ಸಂಗತಿ ಬೆಳಕಿಗೆ ಬಂದಿದೆ. ಗ್ರಾಪಂನಲ್ಲಿ ಇರಬೇಕಾದ ದಾಖಲೆಗಳನ್ನು ಪಿಡಿಒ ಮನೇಯಲ್ಲಿರಿಸಿಕೊಂಡಿದ್ದು ಏಕೆ ಎಂಬ ಪ್ರಶ್ನೆಗಳು ಉದ್ಭವವಾಗಿವೆ.

ದಾಳಿ ವೇಳೆ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಪಿ.ಜಿ. ಕವಟಗಿ, ಎಸ್.ಎಸ್. ತೇಲಿ ಇತರರು ಇದ್ದರು.

ಈ ಸಂದರ್ಭದಲ್ಲಿ ಗ್ರಾಪಂ ಆಡಳಿತಾಧಿಕಾರಿ ಅರವಿಂದ ಬಂಡಿ, ತಾಪಂ ಎಡಿ ಬಸವರಾಜ ಬಡಿಗೇರಿ, ಗ್ರಾಪಂ ಕಾರ್ಯದರ್ಶಿ ಮಹೇಶ ಭಗವತಿ, ಬಿಲ್ ಕಲೆಕ್ಟರ್‌ಗಳಾದ ಹುಸೇನಸಾಬ ಮ್ಯಾಗೇರಿ, ಬಸವರಾಜ ಕಲಕೇರಿ ಇದ್ದರು.


ಕೌಟುಂಬಿಕ ಕಲಹ: ಮೊಬೈಲ್ ಟವರ್ ಏರಿದ ವ್ಯಕ್ತಿ

ಮುಂಡರಗಿ: ಕೌಟುಂಬಿಕ ಕಲಹದ ಹಿನ್ನೆಲೆ ವ್ಯಕ್ತಿಯೊಬ್ಬ ಮೊಬೈಲ್ ಟವರ್ ಏರಿ ಕೆಲಸಮಯ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿದ ಘಟನೆ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.ಗ್ರಾಮದ ನಜೀರ್‌ಸಾಬ್ ಎಂಬವರು ಮೊಬೈಲ್ ಟವರ್ ಏರಿ ಹೈಡ್ರಾಮಾ ಮಾಡಿದ್ದು, ಕುಟುಂಬದಲ್ಲಿನ ಸಣ್ಣಪುಟ್ಟ ಕಲಹ ನಡೆದ ಹಿನ್ನೆಲೆ ನಜೀರ್‌ಸಾಬ್ ಮದ್ಯದ ಅಮಲಿನಲ್ಲಿ ಮೊಬೈಲ್ ಟವರ್ ಏರಿ ಆತಂಕ ಸೃಷ್ಟಿಸಿದ್ದ.ವಿಷಯ ತಿಳಿದ ತಕ್ಷಣ ಸಿಪಿಐ ಅಯ್ಯನಗೌಡ ಪಾಟೀಲ ಹಾಗೂ ಪೊಲೀಸ್ ಸಿಬ್ಬಂದಿ ಮತ್ತು ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಟವರ್ ಏರಿದ್ದ ನಜೀರ್‌ಸಾಬ್‌ನನ್ನು ಮನವೊಲಿಸಿ ಕೆಳಗಿಳಿಸುವಲ್ಲಿ ಯಶಸ್ವಿಯಾದರು.