ಕಾರಹುಣ್ಣಿಮೆ ಹಬ್ಬದಂಗವಾಗಿ ಸಂಪ್ರದಾಯದಂತೆ ಹೋರಿಗಳನ್ನು ಓಡಿಸುವ ಸಂದರ್ಭದಲ್ಲಿ ಪಟಾಕಿ ಹಾರಿಸುವ ಕಾರಣಕ್ಕೆ ನಡೆದ ಮಾತಿನ ಚಕಮಕಿ ಕೈ-ಕೈ ಮಿಲಾಯಿಸುವ ಹಂತ ತಲುಪಿದ್ದರ ಪರಿಣಾಮವಾಗಿ, ಎಂಟು ಜನರು ಗಾಯಗೊಂಡ ಘಟನೆ ಹಾನಗಲ್ಲ ತಾಲೂಕಿನ ನರೇಗಲ್ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಹಾನಗಲ್ಲ: ಕಾರಹುಣ್ಣಿಮೆ ಹಬ್ಬದಂಗವಾಗಿ ಸಂಪ್ರದಾಯದಂತೆ ಹೋರಿಗಳನ್ನು ಓಡಿಸುವ ಸಂದರ್ಭದಲ್ಲಿ ಪಟಾಕಿ ಹಾರಿಸುವ ಕಾರಣಕ್ಕೆ ನಡೆದ ಮಾತಿನ ಚಕಮಕಿ ಕೈ-ಕೈ ಮಿಲಾಯಿಸುವ ಹಂತ ತಲುಪಿದ್ದರ ಪರಿಣಾಮವಾಗಿ, ಎಂಟು ಜನರು ಗಾಯಗೊಂಡ ಘಟನೆ ಹಾನಗಲ್ಲ ತಾಲೂಕಿನ ನರೇಗಲ್ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಸೋಮವಾರ ಮಧ್ಯಾಹ್ನ ನರೇಗಲ್ಲಿನಲ್ಲಿ ಕಾರಹುಣ್ಣಿಮೆಯಂದು ಸಂಪ್ರದಾಯದಂತೆ ರೈತರು ತಮ್ಮ ಎತ್ತುಗಳನ್ನು ಓಡಿಸುವ ಸಂದರ್ಭದಲ್ಲಿ ಪಟಾಕಿ ಹಾರಿಸುವ ವಿಚಾರವಾಗಿ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ. ಮಾತಿಗೆ ಮಾತು ಬೆಳೆದಾಗ ಒಂದು ಕೋಮಿನವರು ಇನ್ನೊಂದು ಗುಂಪಿನ ಜನರನ್ನು ಕುಡುಗೋಲು ಮತ್ತಿತರ ಮಾರಕಾಸ್ತ್ರಗಳಿಂದ ಥಳಿಸಿ ೬ ಜನರನ್ನು ಗಾಯಗೊಳಿಸಿದ್ದಾರೆ. ಇವರಲ್ಲಿ ಗಂಭೀರವಾಗಿ ಗಾಯಗೊಂಡ ಮೂವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸಗೆ ದಾಖಲಿಸಲಾಗಿದೆ.ಘಟನೆಯಲ್ಲಿ ಶಿವರಾಜ್ ಕುರುಬರ(೨೭), ನಾಗಪ್ಪ ಹನುಮಂತಪ್ಪ ಕುರುಬರ (೩೪), ಮಲ್ಲಪ್ಪ ರಾಯಪ್ಪ ಕೊಡಸಂಗಿ (೩೦), ನಿಂಗರಾಜ ಮಹಾಂತೇಶ ಕುರುಬರ (೩೦), ಜಯಪ್ಪ ಸಂಗಪ್ಪ ಕುರುಬರ (೨೦), ಲೋಹಿತ ರೇವಣಪ್ಪ ಕುರುಬರ (೨೪), ಬಾಷಾಸಾಬ ಗೌಂಡಿ (೫೫), ಖಾಜಾ ಗೌಂಡಿ (೧೮) ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಶಿವರಾಜ ಕುರುಬರ, ಜಯಪ್ಪ ಕುರುಬರ ಹಾಗೂ ಲೋಹಿತ ಕುರುಬರ ಅವರನ್ನು ಹುಬ್ಬಳ್ಳಿ ಕಿಮ್ಸಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ.
ಘಟನೆಯಿಂದಾಗಿ ನರೇಗಲ್ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹಾವೇರಿ ಎಸ್.ಪಿ. ಯಶೋದಾ ವಂಟಗೋಡಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.