ಹಾನಗಲ್ಲ: ತಾಲೂಕಿನ ಮೂರು ಗ್ರಾಮಗಳಲ್ಲಿ ೫೦ ಜಾನುವಾರುಗಳಿಗೆ ಲಂಪಿ ಸ್ಕಿನ್ ಡಿಸೀಜ್ (ಚರ್ಮ ಗಂಟು ಕಾಯಿಲೆ) ಕಾಣಿಲಿಕೊಂಡಿದ್ದು, ಹುಣಶೆಟ್ಟಿಕೊಪ್ಪ ಗ್ರಾಮದಲ್ಲಿ ಮೂರು ವರ್ಷದ ಹೋರಿಕರುವೊಂದರ ಸಾವು ಸಂಭವಿಸಿದೆ.
ಹಾನಗಲ್ಲ ತಾಲೂಕಿನ ಹುಣಶೆಟ್ಟಿಕೊಪ್ಪದಲ್ಲಿ ಹದಿನೈದು ದಿನಗಳಿಂದ ಲಂಪಿ ಸ್ಕಿನ್ ರೋಗ ಬಾಧೆಯಿಂದ ನರಳುತ್ತಿದ್ದ ಅಂದಾಜು ೭೫ ಸಾವಿರ ರು. ಮೌಲ್ಯದ ಹೋರಿ ಕರುವೊಂದು ಭಾನುವಾರ ರಾತ್ರಿ ಸಾವನ್ನಪ್ಪಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ. ಇದರ ಜೊತೆಗೆ ಖರೀದಿಸಿ ತಂದ ಇನ್ನೊಂದು ಹೋರಿ ಕರು ಈಗ ರೋಗದಿಂದ ಗುಣಮುಖವಾಗುತ್ತಿದೆ. ಕಾಮನಹಳ್ಳಿ, ಆರೇಗೊಪ್ಪ ಗ್ರಾಮಗಳಲ್ಲಿ ಕೂಡ ಚರ್ಮ ಗಂಟು ಕಾಯಿಲೆ ಕಳೆದ ಒಂದು ತಿಂಗಳಿಂದ ಕಾಣಿಸಿಕೊಂಡಿದೆ. ಇದಕ್ಕಾಗಿ ಪಶು ವೈದ್ಯ ಇಲಾಖೆ ಚಿಕಿತ್ಸೆ ನೀಡುತ್ತಿದೆ. ಬಹುತೇಕ ಜಾನುವಾರುಗಳು ಗುಣಮುಖವಾಗಿದ್ದು, ಹುಣಶೆಟ್ಟಿಕೊಪ್ಪದ ಮಂಜಪ್ಪ ಹೊಂಬಳಿ ಎಂಬ ರೈತರ ಮೂರು ವರ್ಷದ ಹೋರಿ ಭಾನುವಾರ ರಾತ್ರಿ ಸಾವನ್ನಪ್ಪಿದೆ. ಸೋಮವಾರ ವೈದ್ಯರು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಇನ್ನುಳಿದ ಗ್ರಾಮಗಳಲ್ಲಿ ರೋಗ ಬಾಧೆ ಕಾಣಿಸಿದ್ದು, ಚಿಕಿತ್ಸೆಯ ಫಲದಿಂದ ಜಾನುವಾರುಗಳು ಗುಣಮುಖವಾಗುತ್ತಿದೆ.ಲಂಪಿ ಸ್ಕಿನ್ ಡಿಸೀಜ್ (ಚರ್ಮ ಗಂಟು ಕಾಯಿಲೆ) ರೋಗವು ಬಹುತೇಕ ಸಣ್ಣ ಕರುಗಳಿಗೆ ಬರುತ್ತದೆ. ಇದು ಬಂದಾಗ ತೀವ್ರ ಜ್ವರ, ಚರ್ಮದ ಮೇಲೆ ಗುಳ್ಳೆಗಳು ಬಂದು ಜಾನುವಾರುಗಳು ಆಹಾರವನ್ನು ತಿನ್ನವುದಿಲ್ಲ. ಇದು ಬಹುತೇಕ ಮಳೆಗಾಲದ ಸಮಯದಲ್ಲಿ ಬರುವ ರೋಗವಾಗಿದ್ದು, ಸೊಳ್ಳೆ ಹಾಗೂ ಕುರುಡು ನೊಣಗಳು ಕಡಿಯುವುದರಿಂದ ರೋಗಬಾಧೆ ಹೆಚ್ಚಾಗುವ ಸಾಧ್ಯತೆಯಿದೆ. ಇದರ ನಿಯಂತ್ರಣಕ್ಕೆ ಪ್ರತಿ ವರ್ಷ ಜಾನುವಾರುಗಳಿಗೆ ಮುಂಜಾಗ್ರತಾ ಲಸಿಕೆಗಳನ್ನು ಹಾಕಿಸಿಕೊಳ್ಳಬೇಕು. ರೋಗ ಬಾಧಿತ ಜಾನುವಾರುಗಳನ್ನು ಉಳಿದ ಜಾನುವಾರುಗಳಿಂದ ಪ್ರತ್ಯೇಕಿಸಿ ಇಡಬೇಕು. ಇದು ಸಾಂಕ್ರಾಮಿಕ ರೋಗವಾಗಿರುವುದರಿಂದ ಜಾಗೃತೆವಹಿಸಬೇಕಾಗುತ್ತದೆ. ೨೦೨೦ ರಲ್ಲಿ ಈ ರೋಗಕ್ಕೆ ತುತ್ತಾಗಿ ಹಾನಗಲ್ಲ ತಾಲೂಕಿನ ೩೦೦ಕ್ಕೂ ಅಧಿಕ ಜಾನುವಾರುಗಳು ಸಾವನ್ನಪ್ಪಿದ್ದವು. ಈಗ ಸಾವನ್ನಪ್ಪಿದ ಹೋರಿಯ ಮಾಲೀಕರಿಗೆ ಸರ್ಕಾರದ ಪರಿಹಾರಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪಶು ವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ. ಗಿರೀಶ ರಡ್ಡೇರ ತಿಳಿಸಿದರು.
ರೈತ ಮಂಜಪ್ಪ ಹೊಂಬಳಿ ಪ್ರತಿಕ್ರಿಯಿಸಿ, ೭೫ ಸಾವಿರ ರು. ಮೌಲ್ಯದ ಎರಡು ಹಲ್ಲಿನ ಹೋರಿಗೆ ಕಳೆದ ೧೫ ದಿನಗಳಿಂದ ಲಂಪಿ ಸ್ಕಿನ್ ಡಿಸೀಜ್(ಚರ್ಮ ಗಂಟು ಕಾಯಿಲೆ) ರೋಗ ಬಾಧೆ ಕಾಣಿಸಿಕೊಂಡಿತ್ತು. ವೈದ್ಯರೂ ಕೂಡ ಕಾಳಜಿಯಿಂದ ಚಿಕಿತ್ಸೆ ನೀಡಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದೆ. ಹೋರಿ ಮೇವು ತಿನ್ನದೇ ಇದ್ದುದರಿಂದ ಆರೋಗ್ಯ ಕ್ಷೀಣಿಸಿತ್ತು. ಕಾಲುಗಳು ದಪ್ಪವಾಗುತ್ತಿದ್ದವು. ಮೈಮೇಲೆ ಕುರುವಿನಂತೆ ಗಾಯದ ಗುಳ್ಳೆಗಳಾಗಿದ್ದವು ಎಂದು ವಿವರಿಸಿದರು.ಮಳೆಗಾಲ ಆರಂಭವಾಗುತ್ತಿದ್ದಂತೆ ಜಾನುವಾರುಗಳಿಗೆ ಇಂಥ ಹಲವು ರೋಗಗಳ ಸಾಧ್ಯತೆಯಿರುತ್ತದೆ. ಆದ್ದರಿಂದ ಸರ್ಕಾರದ ಯೋಜನೆಯಂತೆ ಪ್ರತಿ ಹಳ್ಳಿಯ ಜಾನುವಾರುಗಳಿಗೆ ರೋಗ ನಿರೋಧಕ ಲಸಿಕೆ ಹಾಕಲು ಮುಂದಾಗುತ್ತೇವೆ. ಆದರೆ ಕೆಲವು ರೈತರು ಇದನ್ನು ನಿರಾಕರಿಸುತ್ತಿರುವುದು ವಿಷಾದದ ಸಂಗತಿ. ರೋಗ ಬಂದಾಗ ಪರಿತಪಿಸಬೇಕಾಗುತ್ತದೆ. ಈಗ ಹಾನಗಲ್ಲ ತಾಲೂಕಿನ ಮೂರು ಗ್ರಾಮಗಳನ್ನು ಹೊರತುಪಡಿಸಿ ಬೇರೆಲ್ಲೂ ಚರ್ಮರೋಗ ಬಾಧೆ ಕಾಣಿಸಿಕೊಂಡಿಲ್ಲ ಎಂದು ಹಾನಗಲ್ಲ ಪಶು ವೈದ್ಯ ಇಲಾಖೆ ನಿರ್ದೇಶಕ ಡಾ. ಗಿರೀಶ ರಡ್ಡೇರ ಹೇಳಿದರು.