ದೀರ್ಘ ಹೋರಾಟಕ್ಕೆ ಇಲ್ಲ ನ್ಯಾಯ: ಮಂತ್ರಿ, ಶಾಸಕರನ್ನು ನಿಲ್ಲಿಸಿ ಕೇಳೋಣ

KannadaprabhaNewsNetwork |  
Published : Aug 11, 2026, 02:00 AM IST
ಕೊಪ್ಪಳ ಬಳಿಯ ಭಾಗ್ಯನಗರ ಬಾಲಾಜಿ ಫಂಕ್ಷನ್ ಹಾಲಿನಲ್ಲಿ ಬಲ್ಡೋಟ ಹಾಗೂ ಕಾರ್ಖಾನೆಗಳ ಮಾಲಿನ್ಯ ವಿರೋಧಿಸಿ 300ನೇ ದಿನದ ಹೋರಾಟ ರೂಪಿಸಲು ಕರೆದ ಪೂರ್ವಭಾವಿ ಸಭೆಯಲ್ಲಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿದರು. | Kannada Prabha

ಸಾರಾಂಶ

ಕೊಪ್ಪಳದ ನಗರದ ಭಾಗ್ಯನಗರ ಬಾಲಾಜಿ ಫಂಕ್ಷನ್ ಹಾಲಿನಲ್ಲಿ ಬಲ್ಡೋಟ ಹಾಗೂ ಕಾರ್ಖಾನೆಗಳ ಮಾಲಿನ್ಯ ವಿರೋಧಿಸಿ 300ನೇ ದಿನದ ಹೋರಾಟ ರೂಪಿಸಲು ಪೂರ್ವಭಾವಿ ಸಭೆ ನಡೆಸಲಾಯಿತು.

ಕೊಪ್ಪಳ: ನಮ್ಮ ಹೋರಾಟದ ನಡೆ ಶಾಸಕರ ಮನೆ ಕಡೆ ಎನ್ನುವ ಘೋಷಣೆಯೊಂದಿಗೆ ಹೋರಾಟಕ್ಕೆ ಸಿದ್ಧರಾಗೋಣ ಎಂದು ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.

ನಗರದ ಭಾಗ್ಯನಗರ ಬಾಲಾಜಿ ಫಂಕ್ಷನ್ ಹಾಲಿನಲ್ಲಿ ಬಲ್ಡೋಟ ಹಾಗೂ ಕಾರ್ಖಾನೆಗಳ ಮಾಲಿನ್ಯ ವಿರೋಧಿಸಿ 300ನೇ ದಿನದ ಹೋರಾಟ ರೂಪಿಸಲು ಕರೆದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಇದೇ ಆ. 27ರಂದು ''ನಮ್ಮ ಹೋರಾಟದ ನಡೆ ಶಾಸಕರ ಮನೆ ಕಡೆ'' ಎನ್ನುವ ಘೋಷಣೆಯೊಂದಿಗೆ ಹೋರಾಟಕ್ಕೆ ಸಿದ್ದರಾಗೋಣ. ಬಾಧಿತ ಹಳ್ಳಿಯ ಮತ್ತು ನಗರದ ಪ್ರತಿ ವಾರ್ಡಿನ ನಾಗರಿಕರು ಆ ದಿನದ ಹೋರಾಟಕ್ಕೆ ಆಗಮಿಸಬೇಕೆಂದು ಕರೆ ನೀಡಿದರು.

''ಆ. 15ರಂದು ಗವಿಶ್ರೀಗಳು ಹೇಳಿದ್ದೇನು? ಜನಪ್ರತಿನಿಧಿಗಳು ಮಾಡಿದ್ದೇನು?'' ಎಂದು ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಂತ್ರಿ, ಶಾಸಕ, ಸಂಸದರನ್ನು ನಿಲ್ಲಿಸಿ ಕೇಳೋಣ ಎಂದು ನಿರ್ಣಯ ಮಂಡಿಸಿದರು.

ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ವಿ. ಕಣವಿ ಮಾತನಾಡಿ, ಲೀಗಲ್ ಸೆಲ್ ರಚಿಸುವುದಾಗಿ ಹೇಳಿದರು.

ನಗರದ ವಾಣಿಜ್ಯೋದ್ಯಮಿ ಬಸವರಾಜ ಬಳ್ಳೊಳ್ಳಿ ಮಾತನಾಡಿ, ನಾವು ಮತ್ತೊಮ್ಮೆ ನಿಯೋಗದೊಂದಿಗೆ ಮಂತ್ರಿ, ಶಾಸಕ, ಸಂಸದರನ್ನು ಭೇಟಿ ಮಾಡೋಣ. ಗವಿಶ್ರೀಗಳು ಮೌನ ವಹಿಸಿಲ್ಲ. ಅವರನ್ನು ಸಮಯ ಬಂದಾಗ ಕರೆಯೋಣ, ಬರುತ್ತಾರೆ ಎಂದರು.

ಡಿ.ಎಚ್. ಪೂಜಾರ ಮಾತನಾಡಿ, ಈ ಬೃಹತ್ ಬಂಡವಾಳ ಹೂಡಿಕೆ ತಡೆದು ಆದೇಶ ತರಬೇಕೆಂದು ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೆ ವಹಿಸಲಾಗಿತ್ತು. ಅವರು ಮುತುವರ್ಜಿ ವಹಿಸಿ ಆದೇಶ ತರುತ್ತಿಲ್ಲ. ಆದ್ದರಿಂದ 301ನೇ ದಿನಕ್ಕೆ ''''ಹೋರಾಟದ ನಡೆ ಶಾಸಕರ ಮನೆ ಕಡೆ'''' ಬೃಹತ್ ಹೋರಾಟ ನಡೆಸೋಣ ಎಂದರು.

ನಗರದ ಹಿರಿಯ ವೈದ್ಯ ಡಾ. ಕೆ.ಜಿ. ಕುಲಕರ್ಣಿ ಅವರು, ಹೋರಾಟ ವೇದಿಕೆ ಪ್ರಮುಖರೊಂದಿಗೆ ಮಾತುಕತೆ ನಡೆಸಲು ಬಲ್ಡೋಟ ಕಂಪನಿ ಮಾಲೀಕರು ಸಿದ್ಧರಿದ್ದಾರೆ. ಈ ಕುರಿತು ಹೋರಾಟಗಾರರ ಜತೆ ಮಾತನಾಡುವಂತೆ ಕೋರಿದ್ದಾರೆ ಎಂದರು.

ಜಂಟಿ ಕ್ರಿಯೆ ವೇದಿಕೆ ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಡಾ. ಕೆ.ಜಿ. ಕುಲಕರ್ಣಿ ಅವರ ಮಾತಿಗೆ ಪ್ರತಿಕ್ರಿಯೆ ನೀಡಿ, ಕಾರ್ಖಾನೆ ಮಾಲೀಕರೊಂದಿಗೆ ಬಹಿರಂಗವಾಗಿ ಚರ್ಚಿಸಲು ವೇದಿಕೆ ಸಿದ್ಧವಾಗಿದೆ. 2011ರಿಂದ ನಡೆಸುತ್ತಿರುವ ಎಂಎಸ್‌ಪಿಎಲ್‌ ಪೆಲೆಟ್‌ ಘಟಕದಿಂದ ನಗರದ ಶೇ. 40ರಷ್ಟು ಭಾಗ ಧೂಳುಬಾಧಿತವಾಗಿದೆ. ಮೊದಲು ಪೆಲೆಟ್ ಘಟಕದ ಧೂಳು, ಬೂದಿ ನಿಯಂತ್ರಣ ಮಾಡಿ ತೋರಿಸಲಿ. ಬಸಾಪುರ ಕೆರೆ ಸಂಪೂರ್ಣ ಸಾರ್ವಜನಿಕರದ್ದೆಂದು ಗೊತ್ತಿದ್ದೂ ಅದನ್ನು ತಮ್ಮ ಹಣದ, ಅಧಿಕಾರದ ಪ್ರಭಾವದಿಂದ ಕಿತ್ತುಕೊಂಡಿದ್ದಾರೆ. ಇದನ್ನು ಹೇಗೆ ಸಹಿಸಿಕೊಳ್ಳುವುದು? ಮಾಲಿನ್ಯ ನಿಯಂತ್ರಣ ಮಾಡಲಾಗದಿದ್ದರೆ ಪೆಲೆಟ್ ಘಟಕ ಬಂದ್ ಮಾಡಿ, ಕೊಪ್ಪಳ ಜನರ ಆರೋಗ್ಯ, ಜೀವ ಉಳಿಸಲಿ ಎಂದರು.

ಶಿವಕುಮಾರ ಕುಕುನೂರು, ಮಂಜುನಾಥ ಜಿ. ಗೊಂಡಬಾಳ, ಸದಾನಂದಯ್ಯ ಬೀಳಗಿಮಠ, ಪ್ರಕಾಶಕ ಡಿ.ಎಂ. ಬಡಿಗೇರ್, ನಿವೃತ್ತ ಎಂಜಿನಿಯರ್‌ ಬಸವರಾಜ ಮುದುಗಲ್, ಮೂಕ್ಕಪ್ಪ ಮೇಸ್ತ್ರಿ ಬಸಾಪುರ, ಚಾರಣ ಬಳಗದ ಸಿ.ಬಿ. ಪಾಟೀಲ್, ನಿಸರ್ಗ ಕೃಷಿಕ ಹನುಮಂತ ತಳಕಲ್, ಎಸ್. ಮಹಾದೇವಪ್ಪ ಮಾವಿನಮಡು, ಕಾಶಪ್ಪ ಚಲುವಾದಿ, ಗವಿಸಿದ್ದಪ್ಪ ಹಲಗಿ ಸಲಹೆ ಸೂಚನೆಗಳನ್ನು ನೀಡಿದರು. ರಂಗಧಾರ ರೆಪರ್ಟರಿ ತಂಡದಿಂದ ಆದಿವಾಸಿ ಹಕ್ಕು ದಿನಾಚರಣೆ ಅಂಗವಾಗಿ ಕಿರು ನೃತ್ಯ ಪ್ರದರ್ಶನ ಮಾಡಿದರು. ರಮೇಶ ತುಪ್ಪದ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುತ್ತಿಗೆ ಕಾರ್ಮಿಕರ ಸೇವೆ ಕಾಯಂ ಮಾಡಿ: ಸಿಐಟಿಯು ಪ್ರತಿಭಟನೆ
ಕಾಂಗ್ರೆಸ್‌ ಶಿಸ್ತಿನ ಸಿಪಾಯಿ, ರಾಜೀನಾಮೆ ಪ್ರಶ್ನೆಯೇ ಇಲ್ಲ: ರಾಘವೇಂದ್ರ ಹಿಟ್ನಾಳ