ಈಡೇರಿದ ಬಸವನಾಡಿನ ಬಹುದಿನಗಳ ಕನಸು

KannadaprabhaNewsNetwork | Published : Dec 20, 2024 12:48 AM

ಸಾರಾಂಶ

ರಾಜ್ಯದ ಸಾಂಸ್ಕೃತಿಕ ನಾಯಕ, ಜಗಜ್ಯೋತಿ ಬಸವೇಶ್ವರ ಜನ್ಮ ಸ್ಥಳದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ಬಜೆಟ್‌ನಲ್ಲಿ ಪ್ರತ್ಯೇಕ ಪ್ರಾಧಿಕಾರ ರಚನೆಯ ಘೋಷಣೆ ಮಾಡಿದ್ದರು. ಇದೀಗ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಆ.೧೬ ರಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧೇಯಕ ಮಂಡಿಸಿದರು. ಇದರಿಂದ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡಬೇಕೆಂಬ ಬಸವಭಕ್ತರ ಬಹುದಿನಗಳ ಬೇಡಿಕೆ ಇದೀಗ ಈಡೇರಿದ್ದು, ಕ್ಷೇತ್ರದ ಶಾಸಕ, ಸಚಿವ ಶಿವಾನಂದ ಪಾಟೀಲರ ಇಚ್ಛಾಸಕ್ತಿ ಕೂಡ ಎದ್ದು ಕಾಣುತ್ತಿದೆ.

ಬಸವರಾಜ ನಂದಿಹಾಳ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ರಾಜ್ಯದ ಸಾಂಸ್ಕೃತಿಕ ನಾಯಕ, ಜಗಜ್ಯೋತಿ ಬಸವೇಶ್ವರ ಜನ್ಮ ಸ್ಥಳದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ಬಜೆಟ್‌ನಲ್ಲಿ ಪ್ರತ್ಯೇಕ ಪ್ರಾಧಿಕಾರ ರಚನೆಯ ಘೋಷಣೆ ಮಾಡಿದ್ದರು. ಇದೀಗ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಆ.೧೬ ರಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧೇಯಕ ಮಂಡಿಸಿದರು. ಇದರಿಂದ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡಬೇಕೆಂಬ ಬಸವಭಕ್ತರ ಬಹುದಿನಗಳ ಬೇಡಿಕೆ ಇದೀಗ ಈಡೇರಿದ್ದು, ಕ್ಷೇತ್ರದ ಶಾಸಕ, ಸಚಿವ ಶಿವಾನಂದ ಪಾಟೀಲರ ಇಚ್ಛಾಸಕ್ತಿ ಕೂಡ ಎದ್ದು ಕಾಣುತ್ತಿದೆ.

ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿ, ಹೋರಿಮಟ್ಟಿ ಗುಡ್ಡ, ಇಂಗಳೇಶ್ವರ, ಮಸಬಿನಾಳ, ದೇಗಿನಾಳ, ದೇವರಹಿಪ್ಪರಗಿ, ಶಿವಣಗಿ ಮತ್ತು ತಂಗಡಗಿ ಮತ್ತು ಸುತ್ತಮುತ್ತಲಿನ ಪರಂಪರಾ ತಾಣಗಳನ್ನು ಅಂತಾರಾಷ್ಟ್ರೀಯ ಯಾತ್ರಾ ಸ್ಥಳಗಳಾಗಿ, ಸಾಂಸ್ಕೃತಿಕ ಮತ್ತು ಪ್ರವಾಸಿ ಕೇಂದ್ರಗಳಾಗಿ ಅಭಿವೃದ್ಧಿಗೊಳಿಸುವುದು. ಅವುಗಳನ್ನು ನಿರ್ವಹಿಸುವುದು ಬ.ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯವಾಗಲಿದೆ. ವಿಧೇಯಕವು ವಿಧಾನ ಪರಿಷತ್ತಿನಲ್ಲಿ ಅನಮೋದನೆಗೊಂಡು ರಾಜ್ಯಪತ್ರದಲ್ಲಿ ಪ್ರಕಟಗೊಂಡ ನಂತರ ಪ್ರಾಧಿಕಾರ ಅಸ್ತಿತ್ವಕ್ಕೆ ಬರಲಿದೆ. ವಿಧೇಯಕದಲ್ಲಿ ಕಂದಾಯ ಇಲಾಖೆ ಸಚಿವರು ಪ್ರಾಧಿಕಾರದ ಅಧ್ಯಕ್ಷರು, ಸಚಿವ ಸಂಪುಟದ ಸಚಿವರೊಬ್ಬರನ್ನು ಪ್ರಾಧಿಕಾರದ ಉಪಾಧ್ಯಕ್ಷರನ್ನಾಗಿಸುವುದು, ಪ್ರಾಧಿಕಾರದ ಪದನಿಮಿತ್ತ ಸದಸ್ಯರಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು, ಪ್ರವಾಸೋಧ್ಯಮ ಸಚಿವರು, ಮತಕ್ಷೇತ್ರ ಶಾಸಕರು, ಬಸವ ಸಮಿತಿ ಅಧ್ಯಕ್ಷರು, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ, ಪ್ರವಾಸೋಧ್ಯಮ ಇಲಾಖೆಯ ಕಾರ್ಯದರ್ಶಿ, ಕಂದಾಯ ಇಲಾಖೆಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ, ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಪ್ರಾಧಿಕಾರದ ಆಯುಕ್ತರು, ಬಸವನಬಾಗೇವಾಡಿ ಪುರಸಭೆ ಅಧ್ಯಕ್ಷರು, ಕವಿವಿ ಕುಲಪತಿ, ಹಂಪಿ ವಿವಿ ಕುಲಪತಿ, ಸರ್ಕಾರ ನಾಮನಿರ್ದೇಶಿಸಿದ ಐವರು ಸದಸ್ಯರು, ಪುರಾತತ್ವ ಸಂಗ್ರಹಾಲಯಗಳ ಮತ್ತು ಪರಂಪರೆ ಇಲಾಖೆಯ ನಿರ್ದೇಶಕ, ಪೌರಾಡಳಿತ ಇಲಾಖೆ ನಿರ್ದೇಶಕ, ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಇಲಾಖೆಯ ನಿರ್ದೇಶಕರನ್ನು ಒಳಗೊಂಡ ಪ್ರಾಧಿಕಾರ ಅಸ್ತಿತ್ವಕ್ಕೆ ಬರಲಿದೆ.ಬಸವೇಶ್ವರ ಜನ್ಮಸ್ಥಳದ ಅಭಿವೃದ್ಧಿಗಾಗಿ ೨೦೦೨ರಲ್ಲಿ ರಾಷ್ಟ್ರೀಯ ಬಸವಸೈನ್ಯದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು, ಪ್ರಮುಖರು ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಬೃಹತ್ ಹೋರಾಟ ಮಾಡಿದ್ದರು. ಆಗಿನ ಜಿಲ್ಲಾ ಉಸ್ತುವಾರಿ ಸಚಿವ ದಿ.ಬಿ.ಎಸ್.ಪಾಟೀಲ ಸಾಸನೂರ ಅವರು ಪ್ರಾಧಿಕಾರ ರಚನೆ ಮಾಡಲು ಸಾಧ್ಯವಿಲ್ಲ. ಇದನ್ನು ಕೂಡಲಸಂಗಮ ಅಭಿವೃದ್ಧಿ ಮಂಡಳಿಗೆ ಸೇರಿಸುವ ಭರವಸೆ ನೀಡಿದ್ದರು. ಬಳಿಕ, ಆಗಿನ ಸಿಎಂ ದಿ.ಎಸ್.ಎಂ.ಕೃಷ್ಣ ಅವರ ಮನವೊಲಿಸಿ ಕೂಡಲಸಂಗಮ ಅಭಿವೃದ್ಧಿ ಮಂಡಳಿಗೆ ಸೇರಿಸಿದ್ದರು.ಕೂಡಲಸಂಗಮ ಅಭಿವೃದ್ಧಿ ಮಂಡಳಿಗೆ ಸೇರ್ಪಡೆಗೊಂಡ ಮೂರು ವರ್ಷಗಳ ನಂತರ ೨೦೦೫ರಲ್ಲಿ ಮಂಡಳಿ ವಿಶೇಷಾಧಿಕಾರಿಯಾಗಿದ್ದ ಡಾ.ಎಸ್.ಎಂ.ಜಾಮದಾರ ಅವರ ನಿರ್ದೇಶನದಲ್ಲಿ ಐತಿಹಾಸಿಕ ಬಸವೇಶ್ವರ ದೇವಸ್ಥಾನ, ಬಸವೇಶ್ವರರು ಜನಿಸಿದ ಮನೆಯನ್ನು ಭವ್ಯ ಬಸವಜನ್ಮ ಸ್ಮಾರಕವಾಗಿ ನಿರ್ಮಿಸಲಾಗಿದೆ. ನಂತರ ಮಂಡಳಿಯಿಂದ ಬಸವೇಶ್ವರರಿಗೆ ಸಂಬಂಧಿಸಿದ ಆರ್ಟ್ ಗ್ಯಾಲರಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯದೇ ಇರುವುದು ಬಸವ ಭಕ್ತರಿಗೆ ನಿರಾಶೆಯಾಗಿದೆ. ಹೀಗಾಗಿ, ಬಸವೇಶ್ವರ ಜನ್ಮಸ್ಥಳದ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರದ ಕೂಗು ಕೇಳಿಬಂದಿತ್ತು. ಇದೀಗ ಬ.ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬರಲಿದೆ. ಇದರಿಂದ ಭವ್ಯ ಬಸವೇಶ್ವರ ಪ್ರತಿಮೆ, ಉದ್ಯಾನವನ, ಆರ್ಟ್ ಗ್ಯಾಲರಿ, ವಚನ ವಿಶ್ವವಿದ್ಯಾಲಯ ಸೇರಿದಂತೆ ಬೇಡಿಕೆ ಈಡೇರುವ ನಿರೀಕ್ಷೆಯಲ್ಲಿ ಬಸವ ಭಕ್ತರು ಇದ್ದಾರೆ.

ಬಸವನಬಾಗೇವಾಡಿಯ ಬಸವ ಭಕ್ತರ ಹಲವು ವರ್ಷಗಳ ಬೇಡಿಕೆ. ಬಸವನಬಾಗೇವಾಡಿಗೆ ಪ್ರತ್ಯೇಕ ಪ್ರಾಧಿಕಾರ ರಚನೆ ಬೇಡಿಕೆಯನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಅವರು ನುಡಿದಂತೆ ನಡೆದುಕೊಂಡ ಹಿನ್ನೆಲೆಯಲ್ಲಿ ಬೆಳಗಾವಿ ಅಧಿವೇಶನದಲ್ಲಿ ಈ ವಿಧೇಯಕ ಮಂಡನೆಯಾಗಿದೆ. ಅವರಿಗೆ ಅಭಿನಂದನೆಗಳು. ಪ್ರತ್ಯೇಕ ಪ್ರಾಧಿಕಾರದಿಂದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವದು.

ಶಿವಾನಂದ ಪಾಟೀಲ, ಸಚಿವರು.

ರಾಷ್ಟ್ರೀಯ ಬಸವ ಸೈನ್ಯವು ಹಲವಾರು ವರ್ಷಗಳಿಂದ ಬಸವೇಶ್ವರ ಜನ್ಮಸ್ಥಳದ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕೆಂದು ರಾಜ್ಯದ ವಿವಿಧ ಸಿಎಂಗಳಿಗೆ, ಮಂತ್ರಿಗಳಿಗೆ, ಅಧಿಕಾರಿಗಳಿಗೆ ಮನವಿ ಕೊಡುತ್ತಾ ಬಂದಿತ್ತು. ಇದೀಗ ಸಚಿವ ಶಿವಾನಂದ ಪಾಟೀಲ ಅವರ ಮುತುವರ್ಜಿಯಿಂದ ನಮ್ಮ ಬೇಡಿಕೆ ಈಡೇರಿದೆ. ಪ್ರಾಧಿಕಾರದಿಂದ ಮುಂಬರುವ ದಿನಗಳಲ್ಲಿ ಹೆಚ್ಚು ಅಭಿವೃದ್ಧಿ ಕಾರ್ಯಗಳು ನಡೆದು ಇದು ಅಂತಾರಾಷ್ಟ್ರೀಯ ತಾಣವಾಗಬೇಕು.

- ಶಂಕರಗೌಡ ಬಿರಾದಾರ, ಸಂಸ್ಥಾಪಕ ಅಧ್ಯಕ್ಷರು, ರಾಷ್ಟ್ರೀಯ ಬಸವಸೈನ್ಯ.

Share this article