ಕನ್ನಡ ಪ್ರಭ ವಾರ್ತೆ ಮದ್ದೂರು
ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪ ಹೋಬಳಿ ಅಭಿವೃದ್ಧಿಗೆ ಸಾಕಷ್ಟು ಒತ್ತು ನೀಡಿದ್ದೇನೆ. ಆದರೆ, ಚುನಾವಣೆಯಲ್ಲಿ ಮಾತ್ರ ಮತಗಳಿಕೆ ಪ್ರಮಾಣ ಮಾತ್ರ ಕಡಿಮೆಯಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದರು.ತಾಲೂಕಿನ ಕೊಪ್ಪ ಹೋಬಳಿಯ ಮೂಡ್ಯ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ವೇಳೆ ಮುಖಂಡರೊಂದಿಗೆ ಮಾತುಕತೆ ನಡೆಸಿದ ಸಚಿವರು, ಕೊಪ್ಪ ಹೋಬಳಿ ಅಭಿವೃದ್ಧಿ ನಾನು ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡುತ್ತಿದ್ದೇನೆ. ಆದರೆ, ಚುನಾವಣೆಯಲ್ಲಿ ಮಾತ್ರ ನನಗೆ ಈ ಭಾಗದಿಂದ ಮತಗಳು ನನ್ನ ನಿರೀಕ್ಷೆಗೆ ತಕ್ಕಂತೆ ಬರುತ್ತಿಲ್ಲ ಎಂದು ಮುಖಂಡರೊಂದಿಗೆ ವ್ಯಥ್ಯೆ ಪಟ್ಟುಕೊಂಡರು.ಕೊಪ್ಪ ಹೋಬಳಿ ಸಮಗ್ರ ಅಭಿವೃದ್ಧಿಗೆ 500 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ 2 ವರ್ಷಗಳಲ್ಲೇ ಕ್ಷೇತ್ರದಲ್ಲಿ 1200 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಕೊಪ್ಪ ಹೋಬಳಿ ಸಮಗ್ರ ಅಭಿವೃದ್ಧಿಗೆ ನೀರಾವರಿ ಯೋಜನೆ ಕುಡಿಯುವ ನೀರು, ರಸ್ತೆ ಚರಂಡಿ ಸೇರಿದಂತೆ ಮೂಲ ಸೌಲಭ್ಯಗಳಿಗೆ ಈಗಾಗಲೇ 500 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು ನೀಡಿ ಅಭಿವೃದ್ಧಿ ಪಡಿಸಿದ್ದೇನೆ ಎಂದರು.ಈ ವೇಳೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ. ಜೋಗಿಗೌಡ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ್, ಮನ್ಮುಲ್ ಮಾಜಿ ನಿರ್ದೇಶಕ ಕುಮಾರ್ ಕೊಪ್ಪ, ಗ್ರಾಪಂ ಅಧ್ಯಕ್ಷ ಸಂತೋಷ್ ಕೊಟ್ಟಿಗೆಯಾರ್ ಸದಸ್ಯರಾದ ರುದ್ರೇಶ್, ಗಿರೀಶ್, ಪರ್ವೆಜ್ ಅಹಮದ್, ಸಾವಿತ್ರಿ ಸುರೇಶ್, ಸುಧಾ ರಾಮು, ಕೆ.ಲಿಂಗರಾಜು, ಮುಖಂಡರಾದ ಕೆ.ಜಿ.ಕೃಷ್ಣೇಗೌಡ, ಗಟ್ಟಹಳ್ಳಿ ಹರೀಶ್, ಕೆ.ರಮೇಶ್ ಗೌಡ, ಎಂ.ಎಸ್ ಬೋರಲಿಂಗಯ್ಯ ಇದ್ದರು.