ಮನುಷ್ಯ ದುಡಿದು ದೊಡ್ಡವನಾಗುತ್ತಾನೆ ಹೊರತು, ಹಣೆ ಬರಹದಿಂದಲ್ಲ

KannadaprabhaNewsNetwork | Published : Jan 25, 2024 2:05 AM

ಸಾರಾಂಶ

ಕೊಪ್ಪಳ ಗವಿಮಠ ಆವರಣದಲ್ಲಿ ಶ್ರೀ ಗವಿಸಿದ್ದೇಶ್ವರ ಜಾತ್ರೆ ಪ್ರಯುಕ್ತ ಜರುಗಿದ ಕಾಯಕ ದೇವೋ ಭವ ಜಾಗೃತಿ ಜಾಥಾ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಗವಿಮಠದ ಶ್ರೀಗಳು ಸ್ವಾವಲಂಬಿಗಳಾಬೇಕು ಎಂದು ಕರೆ ನೀಡಿದರು.

ಕೊಪ್ಪಳ: ಪ್ರತಿಯೊಬ್ಬ ವ್ಯಕ್ತಿ ದುಡಿದು ಬದುಕಬೇಕು. ಮನುಷ್ಯ ದುಡಿದು ದೊಡ್ಡವನಾಗುತ್ತಾನೆಯೇ ಹೊರತು ಹಣೆ ಬರಹದಿಂದಲ್ಲ ಎಂದು ಕೊಪ್ಪಳ ಗವಿಮಠದ ಶ್ರೀಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ನಗರದ ಗವಿಮಠ ಆವರಣದಲ್ಲಿ ಶ್ರೀ ಗವಿಸಿದ್ದೇಶ್ವರ ಜಾತ್ರೆ ಪ್ರಯುಕ್ತ ಜರುಗಿದ ಕಾಯಕ ದೇವೋ ಭವ ಜಾಗೃತಿ ಜಾಥಾ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗವಿಸಿದ್ದೇಶ್ವರ ಜಾತ್ರೆ ಕಾಯಕ ನಿಷ್ಠೆಯ ಜಾಥಾ ಮೂಲಕ ಆರಂಭವಾಗಿದೆ. ದೇವರು ಕಾಲು, ಕೈ, ಮಾತು ಇಲ್ಲದವರಿಗೆ ಹುಟ್ಟಿಸಿದ್ದಾನೆ. ನಿಸರ್ಗ ನಿರಂತರ ಕೆಲಸ ಮಾಡುತ್ತದೆ. ನದಿ ನಿಂತರೆ ಕೆಡುತ್ತದೆ. ಮನುಷ್ಯ ದುಡಿಯದೆ ಇದ್ದರೆ ಕೆಡುತ್ತಾನೆ. ಮನುಷ್ಯ ದುಡಿದೆ ಬದುಕಬೇಕು. ಕಣ್ಣಿಲ್ಲದವರಿದ್ದಾರೆ. ಕಾಲಿಲ್ಲದವರಿದ್ದಾರೆ. ಬುದ್ಧಿಮಾಂದ್ಯರಿದ್ದಾರೆ, ಹೊಟ್ಟೆ ಇಲ್ಲದವರು ಯಾರು ಇಲ್ಲ. ಕಾರಣ ದೇವರು ಹೊಟ್ಟೆ ನೀಡಿದ್ದಾನೆ ಎಂದರೆ ಎಲ್ಲರೂ ದುಡಿದು ಹೊಟ್ಟೆ ತುಂಬಿಸಿಕೊಳ್ಳಬೇಕು. ತಮ್ಮ ತೋಳ್ಬಲದಿಂದ ದೊಡ್ಡವರಾಗುತ್ತಾರೆಯೇ ಹೊರತು ಹಣೆಬರಹದಿಂದಲ್ಲ. ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದರು.

ಜಾತ್ರಾ ಮಹೋತ್ಸವದಲ್ಲಿ ನೂರು ಕೌಶಲ್ಯ ಅಭಿವೃದ್ಧಿ ಮಳಿಗೆ ಇರುತ್ತವೆ. ಈ ಮಳಿಗೆ ಮೂಲಕ ಬದುಕು ಕಟ್ಟಿಕೊಳ್ಳಿ, ಸ್ವಯಂ ಉದ್ಯೋಗದ ಮಳಿಗೆಯ ದರ್ಶನ ಗವಿಸಿದ್ಧನಷ್ಟೇ ಪವಿತ್ರ ಎಂದು ಹೇಳಿದರು.

ನಾನು ದುಡಿದು ಉಣಬೇಕು. ತಂದೆ ಮಾಡಿದ್ದು ಉಂಡರೆ ಎಂಜಲ ತಿಂದಂತೆ, ಮೋಸ ಮಾಡಿ ತಿಂದರೆ ಎಂಜಲ ತಿಂದಂತೆ. ನಾವು ದುಡಿದು ತಿನ್ನಬೇಕು. ಜಾತ್ರೆಯಲ್ಲಿ ಕಾಯಕ ನಿಷ್ಠೆಯ ಕಾರ್ಯಕ್ರಮವನ್ನು ಆಸಕ್ತಿಯಿಂದ ಆಯೋಜಿಸಲಾಗಿದೆ. ಈ ಬಾರಿ ಜಾತ್ರೆಯಲ್ಲಿ 100ಕ್ಕೂ ಹೆಚ್ಚು ಸ್ವಯಂ ಉದ್ಯೋಗಿ ಯಶಸ್ವಿಯಾದವರು ಬಂದಿದ್ದಾರೆ. ಅವರ ಯಶೋಗಾಥೆಗಳನ್ನು ಅರಿತು ಅಳವಡಿಸಿಕೊಳ್ಳಬೇಕು ಎಂದರು.

ಕೌಶಲ್ಯಾಭಿವೃದ್ಧಿ ಇಲಾಖೆಯ ಪ್ರಾಣೇಶ ಮಾತನಾಡಿ, ಕಾಯಕ ಮಾಡಿದರೆ ಅದು ಫಲ ನೀಡುತ್ತದೆ. ಸ್ವಯಂ ಉದ್ಯೋಗ ಮಾಡುವುದರಿಂದ ಸ್ವಾವಲಂಬಿ ಬದುಕು ಬದುಕಬಹುದು. ಲಾಭ ಗಳಿಸುವುದು ಪ್ರಾಮಾಣಿಕವಾಗಿದ್ದರೆ ಮಾತ್ರ ಸಾಧ್ಯ. ಕಾಯಕದಲ್ಲಿ ನಿಷ್ಠೆ ಹೊಂದಿರಬೇಕು. ಗವಿಮಠವು ಜ್ಞಾನಾರ್ಜನೆಯೊಂದಿಗೆ ಕಾಯಕದೇವೊ ಭವ ಎಂದು ಹೇಳಿದ ಮಠವಾಗಿದೆ. ಯುವಕರು ಸ್ವಯಂ ಉದ್ಯೋಗ ಮಾಡಬೇಕು ಎಂದರು.

ಪ್ರಶಸ್ತಿ ಪ್ರದಾನ: ಜಾಗೃತಿ ಜಾಥಾ ನಿಮಿತ್ತ ಹಮ್ಮಿಕೊಂಡ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ವಿಶೇಷ ಸಾಧಕರಾದ ಭಾಗ್ಯನಗರದ ಪೇಪರ್‌ ಬ್ಯಾಗ್‌ ತಯಾರಕ ಸಿದ್ದಣ್ಣ ಅವರನ್ನು ಗೌರವಿಸಲಾಯಿತು. ಆನಂತರ ಹತ್ತು ವರ್ಷಗಳ ಶ್ರೀಮಠದ ಜಾಥಾ ಯಶೋಗಾಥೆಯ ವಿಡಿಯೋ ದೃಶ್ಯಾವಳಿಗಳನ್ನು ವಿದ್ಯಾರ್ಥಿಗಳಿಗೆ ತೋರಿಸಲಾಯಿತು.

ಬಿಜಕಲ್‌ನ ಶ್ರೀಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಿಡಿಪಿಐ ಶ್ರೀಶೈಲ ಬಿರಾದಾರ, ಬಿಇಒ ಶಂಕರಯ್ಯ ಟಿ.ಎಸ್., ಸಾವಿರಾರು ವಿದ್ಯಾರ್ಥಿಗಳು, ಅಧಿಕಾರಿಗಳು, ಭಕ್ತರು ಇದ್ದರು.

Share this article