ಮನುಷ್ಯನ ಒಳ ಮನಸ್ಸು ಬದಲಾವಣೆಯಾದರೆ ನೆಮ್ಮದಿ ಸಾಧ್ಯ । ಬ್ರಹ್ಮಕುಮಾರಿ ವೀಣಾಜೀ । ಸಮಯದ ಕರೆ-ಸಕಾರಾತ್ಮಕ ಬದಲಾವಣೆ ಕುರಿತ ಕಾರ್ಯಗಾರ
ಪ್ರಸ್ತುತ ಜಗತ್ತು ತೀವ್ರಗತಿಯಲ್ಲಿ ಬದಲಾವಣೆಯಾಗುತ್ತಿದೆ, ಆದರೆ, ಮನುಷ್ಯನ ಒಳ ಮನಸ್ಸು ಬದಲಾವಣೆಯಾಗದೆ ಸದಾ ಒತ್ತಡದಲ್ಲಿದ್ದು, ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತಿಲ್ಲ ಎಂದು ಶಿರಸಿಯ ರಾಜಯೋಗ ಶಿಕ್ಷಣ ಕೇಂದ್ರದ ಹಿರಿಯ ರಾಜಯೋಗಿ ಶಿಕ್ಷಕಿ ಬ್ರಹ್ಮಾಕುಮಾರಿ ವೀಣಾಜೀ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯಾಂಗ ಇಲಾಖೆ, ಜಿಲ್ಲಾ ವಕೀಲರ ಸಂಘ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ಹಾಗೂ ಸಂಜೀವಿನಿ ಟ್ರಸ್ಟ್ ವತಿಯಿಂದ ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಎ.ಡಿ.ಆರ್ ಕಟ್ಟಡದಲ್ಲಿ ಆಯೋಜಿಸಿದ್ದ ಸಮಯದ ಕರೆ-ಸಕಾರಾತ್ಮಕ ಬದಲಾವಣೆ ಕುರಿತ ಕಾರ್ಯಾಗಾರದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.ಬದಲಾವಣೆ ಜಗದ ನಿಯಮ, ಬದಲಾವಣೆ ಎಂಬುದು ನಿರಂತರವಾಗಿ ನಡೆಯುತ್ತದೆ, ಅದರಂತೆ ಪ್ರಸ್ತುತ ಸನ್ನಿವೇಶದಲ್ಲೂ ಸಾಮಾಜಿಕ, ಅರ್ಥಿಕ, ಭೌದ್ಧಿಕ ಬದಲಾವಣೆಗಳು ತ್ರೀವಗತಿಯಲ್ಲಿ ನಡೆಯುತ್ತಿದ್ದು, ಒಳ ಮನಸ್ಸು ಮಾತ್ರ, ಅಸಮಾನತೆಯಲ್ಲಿ ಇರುವುದರಿಂದ ಶಾಂತಿ, ನೆಮ್ಮದಿಯನ್ನು ಕಾಣಲು ಸಾಧ್ಯವಾಗುತ್ತಿಲ್ಲ ಎಂದರು.
ಬೇಡವಾದವುಗಳನ್ನು ಹೆಚ್ಚು ಕಲಿಯುತ್ತೇವೆ, ಬೇಕಾದವುಗಳ ಬಗ್ಗೆ ನಕಾರಾತ್ಮಕ ಧೋರಣೆ ತಳೆಯುತ್ತಿದ್ದೇವೆ, ಆಧ್ಯಾತ್ಮಿಕ ಚಿಂತನೆಯನ್ನು ಕಡಿತಗೊಳಿಸುತ್ತಿರುವುದರಿಂದ ಗೊಂದಲ, ತೋಯ್ದಾಟದಲ್ಲಿ ಜೀವನ ನಡೆಸುತ್ತಾ ಹೆಚ್ಚು ಒತ್ತಡಕ್ಕೆ ಸಿಲುಕಿಗೊಳ್ಳುತ್ತಿದ್ದೇವೆ ಎಂದರು.
ಇದರಿಂದ ದ್ವೇಷ, ಅಸೂಯೆ ಹೆಚ್ಚಾಗಿ ನೈತಿಕತೆಯನ್ನು ಕಳೆದುಕೊಳ್ಳುತ್ತಿದ್ದೇವೆ, ಮನಸ್ಸು ದುರ್ಬಲಗೊಂಡು ಆತ್ಮಹತ್ಯೆಯತ್ತ ಸಾಗುತ್ತಿದೆ, ಇವುಗಳೆಲ್ಲವೂ ಕಡಿಮೆಯಾಗಬೇಕಾದರೆ, ರಾಜಯೋಗ, ಧ್ಯಾನ, ಆಧ್ಯಾತ್ಮಕತೆಯತ್ತ ಮನಸ್ಸನ್ನು ಕೇಂದ್ರೀಕರಿಸಬೇಕಾಗಿದೆ ಎಂದರು.
ಕಾರ್ಯಾಗಾರವನ್ನು ಉದ್ಘಾಟಿಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್. ಭಾರತಿ ಮಾತನಾಡಿ, ಮನುಷ್ಯ ತನ್ನಲ್ಲಿರುವ ನಕಾರಾತ್ಮಕ ಅಂಶಗಳನ್ನು ಹೊರ ಹಾಕಿ ಉತ್ತಮ ಜೀವನ ನಡೆಸಲು ಸಕಾರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದು ಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನುಷ್ಯನಲ್ಲಿ ಕೆಟ್ಟ ಮನಸ್ಸು, ಒಳ್ಳೆಯ ಮನಸ್ಸು ಇರುತ್ತದೆ. ಅಡ್ಡ ದಾರಿ ಹಿಡಿಯಲು ನಕರಾತ್ಮಕ ಅಂಶಗಳು ಕಾರಣವಾಗುತ್ತವೆ. ಮಾನಸಿಕ, ದೈಹಿಕ ಬೆಳವಣಿಗೆಗೆ ಸಕರಾತ್ಮಕ ಅಂಶಗಳು ಮುಖ್ಯ. ಪ್ರತಿಯೊಬ್ಬರೂ ನಕರಾತ್ಮಕ ಅಂಶಗಳಿಂದ ದೂರ ಇರುವ ಮೂಲಕ ಒಳ್ಳೆಯ ಚಿಂತನೆಗಳ ಕಡೆ ಗಮನಹರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ್, ನ್ಯಾಯಾಧೀಶರಾದ ಬಿ.ಎಸ್. ಹೊನ್ನಸ್ವಾಮಿ, ಚಂಪಕಾ, ವೆಂಕಟೇಶ್, ಎನ್.ನಿವೇದಿತಾ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ.ದಾನೇಶ್ವರಿ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಕೆ. ವಿರೂಪಾಕ್ಷಸ್ವಾಮಿ, ಜಂಟಿ ಕಾರ್ಯದರ್ಶಿ ಮಲ್ಲು ಇತರರು ಇದ್ದರು.