ಮಲ್ಲೇಶ್ವರ ಹಾಗೂ ವಿಜಯನಗರಗಳಲ್ಲಿ ಪಾದಚಾರಿ ರಸ್ತೆಯಲ್ಲಿ ಮತ್ತೆ ಬೀದಿ ಬದಿ ವ್ಯಾಪಾರಿಗಳು ಸಣ್ಣ ಪ್ರಮಾಣದಲ್ಲಿ ವ್ಯಾಪಾರ ಆರಂಭಿಸಿದ್ದಾರೆ. ವ್ಯಾಪಾರಿಗಳು ನಡೆಸುತ್ತಿರುವ ಯತ್ನದ ಫಲವಾಗಿ ಸಾರ್ವಜನಿಕರು ನಡೆದಾಡುವಷ್ಟು ಜಾಗ ಬಿಟ್ಟು ಮತ್ತೆ ತಮ್ಮ ಜಾಗಗಳಲ್ಲಿ ವ್ಯಾಪಾರ ಆರಂಭಿಸಿದ್ದಾರೆ.
ಉಮಾಶಂಕರ ಕಾರ್ಯ
ಬೆಂಗಳೂರು : ಮಲ್ಲೇಶ್ವರ ಹಾಗೂ ವಿಜಯನಗರಗಳಲ್ಲಿ ಪಾದಚಾರಿ ರಸ್ತೆಯಲ್ಲಿ ಮತ್ತೆ ಬೀದಿ ಬದಿ ವ್ಯಾಪಾರಿಗಳು ಸಣ್ಣ ಪ್ರಮಾಣದಲ್ಲಿ ವ್ಯಾಪಾರ ಆರಂಭಿಸಿದ್ದಾರೆ. ವ್ಯಾಪಾರಿಗಳು ನಡೆಸುತ್ತಿರುವ ಯತ್ನದ ಫಲವಾಗಿ ಸಾರ್ವಜನಿಕರು ನಡೆದಾಡುವಷ್ಟು ಜಾಗ ಬಿಟ್ಟು ಮತ್ತೆ ತಮ್ಮ ಜಾಗಗಳಲ್ಲಿ ವ್ಯಾಪಾರ ಆರಂಭಿಸಿದ್ದಾರೆ.
ಮಲ್ಲೇಶ್ವರ ಸಂಪಿಗೆ ರಸ್ತೆ, 18ನೇ ಕ್ರಾಸ್ ಸೇರಿದಂತೆ ಮಲ್ಲೇಶ್ವರ ಸುತ್ತಮುತ್ತಲಿನ ರಸ್ತೆಗಳಲ್ಲಿ ಪಾಲಿಕೆ ಅಧಿಕಾರಿಗಳು ರಸ್ತೆ ಒತ್ತುವರಿ ತೆರವುಗೊಳಿಸಿದ್ದರು. ಆದರೆ, ತೆರವುಗೊಳಿಸಿದ ಒಂದು ವಾರದವರೆಗೂ ಯಾವುದೇ ವ್ಯಾಪಾರಿಯೂ ಅಲ್ಲಿ ವ್ಯಾಪಾರ ಮಾಡುತ್ತಿರಲಿಲ್ಲ. ಆದರೆ, ಕಳೆದ ಸೋಮವಾರದಿಂದ ಪಾದಚಾರಿ ರಸ್ತೆಗಳಲ್ಲಿ ಬಟ್ಟೆ, ಗೊಂಬೆಗಳು, ಬಳೆಗಳು ಸೇರಿದಂತೆ ಹಿಂದೆ ಮಾರುತ್ತಿದ್ದ ಎಲ್ಲಾ ವಸ್ತುಗಳನ್ನು ಮಾರುವುದು ಕಂಡುಬಂದಿದೆ.
ಮಾರ್ಗೋಸಾ ರಸ್ತೆಯಲ್ಲಿಯೂ ಪಾದಚಾರಿ ರಸ್ತೆಯಲ್ಲಿ ವ್ಯಾಪಾರಿಗಳು ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಆದರೆ, ಸಾರ್ವಜನಿಕರಿಗೆ ನಡೆದಾಡಲು 2 ಅಥವಾ 3 ಅಡಿಗಳಷ್ಟು ಜಾಗಗಳನ್ನು ಬಿಟ್ಟು ಅಂಗಡಿಗಳ ಕಟ್ಟಡಗಳಿಗೆ ಹೊಂದಿಕೊಂಡಂತೆ ವಸ್ತುಗಳನ್ನು ಇರಿಸಿದ್ದರು. ಪಕ್ಕದ ಕಟ್ಟಡಗಳ ಮಾಲಿಕರ ಅನುಮತಿ ಪಡೆದು ಮಹಡಿಯ ಮೆಟ್ಟಿಲು, ಖಾಲಿ ಜಾಗಗಳಲ್ಲಿ ಬಟ್ಟೆ ಹಾಗೂ ಇತರೆ ವಸ್ತುಗಳನ್ನು ಇರಿಸಿದ್ದು ಕಂಡು ಬಂತು. ಒಂದು ವೇಳೆ ಪಾಲಿಕೆ ಅಧಿಕಾರಿಗಳು ಬಂದು ಪ್ರಶ್ನಿಸಿದರೂ ಪಾದಚಾರಿ ರಸ್ತೆಯಲ್ಲಿ ತಾವು ಮಾರಾಟ ಮಾಡುತ್ತಿಲ್ಲ ಎಂದು ಹೇಳಲು ಈ ತಂತ್ರ ಅನುಸರಿಸುತ್ತಿದ್ದಾರೆ. ತೆರವು ಮಾಡಿದ ದಿನದಿಂದ ಇದುವರೆಗೂ ಈ ರಸ್ತೆಗಳಲ್ಲಿ ಸೋಮವಾರದಿಂದ ಗುರುವಾರದವರೆಗೂ ಎಂದಿನಂತೆ ವ್ಯಾಪಾರಿಗಳು ಅಲ್ಲಲ್ಲಿ ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿದೆ. ಶುಕ್ರವಾರ ಈ ರಸ್ತೆಗಳಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಇರುವುದು ಕಂಡು ಬಂತು.
ತೆರವುಗೊಳಿಸಿದ ರಸ್ತೆಗಳಲ್ಲಿ ಮತ್ತೆ ವ್ಯಾಪಾರ
ನಗರದ ಹಲವು ಕಡೆಗಳಲ್ಲಿ ತೆರವುಗೊಳಿಸಿದ ರಸ್ತೆಗಳಲ್ಲಿ ವ್ಯಾಪಾರಿಗಳು ತೆರವು ಮಾಡಿದ ನಾಲ್ಕೈದು ದಿನಗಳವರೆಗೆ ಸುಮ್ಮನಿದ್ದು ಮತ್ತೆ ವ್ಯಾಪಾರ ಮಾಡಲು ಆರಂಭಿಸಿರುವುದು ಕಂಡು ಬಂದಿದೆ. ಆದರೆ, ಈ ಸಂಬಂಧ ಪಾಲಿಕೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ನಾವು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ತೆರವುಗೊಳಿಸುವುದು ನಮ್ಮ ಕರ್ತವ್ಯ. ಮತ್ತೆ ಅಲ್ಲಿ ಪಾದಚಾರಿ ರಸ್ತೆ ಒತ್ತುವರಿ ಆಗದಂತೆ ತಡೆಯುವುದು ಸ್ಥಳೀಯ ಪೊಲೀಸರ ಜವಾಬ್ದಾರಿ ಎಂದು ತಿಳಿಸಿದ್ದಾರೆ.
ವಿಜಯನಗರದಲ್ಲಿ ಮತ್ತೆ ಆರಂಭ
ವಿಜಯನಗರದ ಫುಡ್ ಸ್ಟ್ರೀಟ್ ನಲ್ಲಿ ಪಾಲಿಕೆ ಅಧಿಕಾರಿಗಳು ಕಳೆದ ವಾರವಷ್ಟೇ ಪಾದಚಾರಿ ರಸ್ತೆ ಒತ್ತುವರಿ ತೆರವು ಮಾಡಿದ್ದರು. ಕೇವಲ ನಾಲ್ಕು ದಿನಗಳು ಮಾತ್ರ ವ್ಯಾಪಾರ ಸ್ಥಗಿತವಾಗಿತ್ತು. ಆ ನಂತರ ಎಂದಿನಂತೆ ತಳ್ಳುಗಾಡಿಗಳು, ಆಟೋಗಳು ಸಾಲುಗಟ್ಟಿ ಮತ್ತೆ ವ್ಯಾಪಾರ ಆರಂಭಿಸಿವೆ. ಇಲ್ಲಿ ವಾಹನ ಸವಾರರು, ಪಾದಚಾರಿಗಳು ಯಾರೂ ವ್ಯಾಪಾರಿಗಳನ್ನು ಪ್ರಶ್ನೆ ಮಾಡುವ ಧೈರ್ಯ ತೋರುತ್ತಿಲ್ಲ. ಹಣ್ಣು, ಆಹಾರ ಪದಾರ್ಥಗಳ ವ್ಯಾಪಾರ ಎಂದಿನಂತೆ ಮುಂದುವರಿದಿದೆ. ಯಾರು ಏನೇ ಹೇಳಿದರೂ ವ್ಯಾಪಾರ ಮಾತ್ರ ತಡೆಯಲು ಸಾಧ್ಯವಿಲ್ಲ ಎಂಬಂತಾಗಿದೆ.