ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ ನಡೆದಿದ್ದು, ಕ್ಷುಲ್ಲಕ ವಿಚಾರಕ್ಕೆ ಐವರು ದುಷ್ಕರ್ಮಿಗಳು ನಾಲ್ಕೈದು ಕಿ.ಮೀ.ಗಳಷ್ಟು ದೂರ ವಾಟರ್ ಟಾಂಕರ್ ಅನ್ನು ಸಿನಿಮೀಯ ರೀತಿ ಹಿಂಬಾಲಿಸಿಕೊಂಡು ಬಂದು ಚಾಲಕನಿಗೆ ಕಲ್ಲಿನಿಂದ ಹಲ್ಲೆ ಮಾಡಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಚೂಡಸಂದ್ರದ ಬಳಿ ಗುರುವಾರ ರಾತ್ರಿ 10 ಗಂಟೆಗೆ ನಡೆದಿದೆ.ಘಟನೆಯಲ್ಲಿ ವಾಟರ್ ಟಾಂಕರ್ ಚಾಲಕ ಅಸ್ಲಿನ್ ವಿನೋ ಗಾಯಗೊಂಡಿದ್ದು, ಅವರ ಸ್ನೇಹಿತ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮನೆಯ ಮುಂದಿನ ರಸ್ತೆಯಲ್ಲಿ ಹಾಕಿದ್ದ ಹಲಗೆ ಮೇಲೆ ವಾಟರ್ ಟ್ಯಾಂಕರ್ ಹರಿದಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಮಾತಿನ ಚಕಮಕಿ ನಡೆದಿದ್ದು, ಇದರಿಂದ ಕೆರಳಿದ ದುಷ್ಕರ್ಮಿಗಳು ದ್ವಿಚಕ್ರ ವಾಹನದಲ್ಲಿ ನಾಲ್ಕೈದು ಕಿ.ಮೀ. ಚೇಸ್ ಮಾಡಿಕೊಂಡು ಬಂದು ವಾಟರ್ ಟ್ಯಾಂಕರ್ ವಾಹನವನ್ನು ಅಡ್ಡಗಟ್ಟಲು ಯತ್ನಿಸಿದ್ದಾರೆ. ಈ ವೇಳೆ ಚಾಲಕ ವಾಹನ ನಿಲ್ಲಿಸದಿದ್ದಾಗ ಮತ್ತಷ್ಟು ಕೆರಳಿದ ಕಿಡಿಗೇಡಿಗಳು ವಾಟರ್ ಟ್ಯಾಂಕರ್‌ನ ಮುಂಭಾಗದ ಗಾಜಿಗೆ ಕಲ್ಲು ತೂರಿದ್ದಾರೆ. ಆ ಕಲ್ಲು ಗಾಜನ್ನು ಸೀಳಿಕೊಂಡು ಹೋಗಿ ಚಾಲಕನ ಎಡಗಣ್ಣಿಗೆ ಬಿದ್ದು ರಕ್ತ ಗಾಯವಾಗಿದೆ. ಇದಾದ ನಂತರವು ಆರೋಪಿಗಳು ಚಾಲಕನಿಗೆ ಥಳಿಸಿದ್ದಾರೆ. ಕಿಡಿಗೇಡಿಗಳ ಕೃತ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮತ್ತೊಂದೆಡೆ ವಾಟರ್ ಮಾಫಿಯಾಯಿಂದ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಈ ಸಂಬಂಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದೂರಿನಲ್ಲಿ ಏನಿದೆ?
ಅಸ್ಲಿನ್ ವಿನೋ ಅವರು ನೀರನ್ನು ಅನ್‌ಲೋಡ್ ಮಾಡಿ ವಾಪಸ್ಸು ಬರುತ್ತಿರುವಾಗ ಚೂಡಸಂದ್ರ ಬಳಿ ಅಪರಿಚಿತ ವ್ಯಕ್ತಿಗಳು ಅವರ ವಾಹನವನ್ನು ಅಡ್ಡಗಟ್ಟಿ ಇಲ್ಲಿ ಚಿಕ್ಕ ರಸ್ತೆ ಇದೆ, ಇಲ್ಲಿಗೆ ಏಕೆ ಬಂದಿದ್ದೀಯಾ ಎಂದು ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದರು. ಇದರಿಂದ ಅಸ್ಮಿನ್ ಅವರು ಭಯಭೀತರಾಗಿ ಅಲ್ಲಿಂದ ವಾಹನವನ್ನು ತೆಗೆದುಕೊಂಡು ಹೋಗಿ ಹೊಸರೋಡ್ ರಸ್ತೆ ಬಳಿ ರಾತ್ರಿ10 ಗಂಟೆಗೆ ಬಂದಾಗ, ಇವರ ವಾಹನ ಅಡ್ಡಗಟ್ಟಿದ್ದ ಸುಮಾರು 5 ಜನ ಅಪರಚಿತರು ವಾಹನದ ಮೇಲೆ ಕಲ್ಲು ಎಸೆದಿದ್ದು, ಆ ಕಲ್ಲು ಗ್ಲಾಸ್ ಒಡೆದುಕೊಂಡು ಬಂದು ಎಡಗಣ್ಣಿಗೆ ಬಿದ್ದು ರಕ್ತ ಗಾಯವಾಗಿದೆ. ನಂತರ ಇನ್ನೊಂದು ಬಾರಿ ಈ ಕಡೆ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.