ಗುತ್ತಿಗೆದಾರರ ಬಿಲ್ ಪಾವತಿಯಲ್ಲಿ ವಿಳಂಬ ತಪ್ಪಿಸಲು ಹಾಗೂ ಹೆಚ್ಚಿನ ಪಾರದರ್ಶಕತೆ ತರಲು ಕಾಗದ ರಹಿತ ಪಾವತಿ ಪದ್ಧತಿಯನ್ನು ಜಾರಿಗೆ ತರಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.

ಬೆಂಗಳೂರು : ಗುತ್ತಿಗೆದಾರರ ಬಿಲ್ ಪಾವತಿಯಲ್ಲಿ ವಿಳಂಬ ತಪ್ಪಿಸಲು ಹಾಗೂ ಹೆಚ್ಚಿನ ಪಾರದರ್ಶಕತೆ ತರಲು ಕಾಗದ ರಹಿತ ಪಾವತಿ ಪದ್ಧತಿಯನ್ನು ಜಾರಿಗೆ ತರಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.

ಗೃಹಕಚೇರಿಯಲ್ಲಿ ನಡೆದ ಮುಖ್ಯಆಯುಕ್ತರು ಹಾಗೂ ಐದು ಪಾಲಿಕೆಗಳ ಆಯುಕ್ತರ ಸಭೆ ನಂತರ ಈ ವಿಷಯ ತಿಳಿಸಿದ ಅವರು, ಬಿಲ್‌ ಪಾವತಿ ವಿಳಂಬ ತಪ್ಪಿಸಲು, ಕಾಮಗಾರಿಗಳ ಡಿಜಿಟಲ್ ಟ್ರ್ಯಾಕಿಂಗ್, ಗುತ್ತಿಗೆದಾರರಿಗೆ ಆನ್‌ಲೈನ್ ಪಾವತಿ ಮತ್ತು ಎಲ್ಲ ಹಂತಗಳಲ್ಲಿ ಕಾಲಮಿತಿ ನಿಗದಿಗೊಳಿಸಲು ಇದು ಸಹಕಾರಿಯಾಗಿದೆ ಎಂದರು.

ಏಕರೂಪದ ವ್ಯವಸ್ಥೆ

ನೂತನ ವ್ಯವಸ್ಥೆಯಿಂದ ಐದು ನಗರ ಪಾಲಿಕೆಗಳಲ್ಲಿ ಬಿಲ್ ನಿರ್ವಹಣೆ, ಕಾಮಗಾರಿ ಮೇಲ್ವಿಚಾರಣೆ, ಗುಣಮಟ್ಟ ನಿಯಂತ್ರಣ ಮತ್ತು ಪಾವತಿಗಾಗಿ ಒಂದೇ ರೀತಿಯ ಏಕರೂಪದ ವ್ಯವಸ್ಥೆ ಜಾರಿಗೆ ಬಂದಂತಾಗಿದೆ. ಈ ಸುಧಾರಣೆ ಕರ್ನಾಟಕ ಸರ್ಕಾರದ ಅನುದಾನ ಮತ್ತು ಜಿಬಿಎ ವ್ಯಾಪ್ತಿಯ ನಗರಪಾಲಿಕೆಗಳ ಅನುದಾನಕ್ಕೂ ಅನ್ವಯವಾಗಲಿದೆ. ಹಾಗೂ ಆಡಳಿತಾತ್ಮಕ ವಿಳಂಬ ತಡೆಗಟ್ಟುವುದು, ಹೊಣೆಗಾರಿಕೆ ನಿಗದಿಪಡಿಸುವುದು, ಸರಳ ಹಾಗೂ ಸುಲಭ ಬಿಲ್ ನಿರ್ವಹಣೆಗೆ ಅನುವು ಮಾಡಿಕೊಡುವುದು ಮತ್ತು ಸಾರ್ವಜನಿಕ ಕಾಮಗಾರಿಗಳ ಗುಣಮಟ್ಟವನ್ನು ಹೆಚ್ಚಿಸುವುದು ಈ ಸುಧಾರಣೆಗಳ ಮುಖ್ಯ ಉದ್ದೇಶವಾಗಿದೆ ಎಂದರು.

ಈ ಹೊಸ ವ್ಯವಸ್ಥೆ ಪಾವತಿಯನ್ನು ವೇಗಗೊಳಿಸುತ್ತದೆ. ಅಲ್ಲದೆ, ಬೆಂಗಳೂರಿನ ಐದೂ ನಗರ ಪಾಲಿಕೆಗಳಲ್ಲಿ ಗುತ್ತಿಗೆದಾರರ ಪಾವತಿ ಪ್ರಕ್ರಿಯೆಯನ್ನು ನಂಬಿಕೆಗೆ ಅರ್ಹವಾಗಿಸಲಿದೆ. ಜೊತೆಗೆ ಕಾಮಗಾರಿಗಳ ಗುಣಮಟ್ಟ, ಒಪ್ಪಂದಗಳ ನಿರ್ವಹಣೆ ಮತ್ತು ಆರ್ಥಿಕ ಶಿಸ್ತನ್ನು ಬಲಪಡಿಸಲಿದೆ ಎಂದರು.

ವೇಗದ ಮತ್ತು ಸರಳ ಬಿಲ್ ವಿಲೇವಾರಿ

ಹೊಸ ವ್ಯವಸ್ಥೆಯಲ್ಲಿ ಬಿಲ್‌ಗಳು ಸಮಗ್ರ ಆರ್ಥಿಕ ನಿರ್ವಹಣಾ ವ್ಯವಸ್ಥೆ (ಐಎಫ್ ಎಂ ಎಸ್) ತಂತ್ರಾಂಶದ ಮೂಲಕ ಹಂತ-ಹಂತವಾಗಿ ಸರಳವಾಗಿ ವಿಲೇ ಆಗಲಿವೆ. ಪ್ರತಿಯೊಂದು ಬಿಲ್ ಅನ್ನು ಮೊದಲು ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ (ಪಿಎಂಸಿ) ಪರಿಶೀಲಿಸುತ್ತದೆ. ನಂತರ ಸ್ಥಳೀಯ ಎಂಜಿನಿಯರ್‌ಗಳು ತಪಾಸಣೆ ನಡೆಸಿ ದೃಢೀಕರಿಸುತ್ತಾರೆ. ತದನಂತರ ಚೀಫ್ ಎಂಜಿನಿಯರ್ ಅವರಿಂದ ಪ್ರಿ-ಆಡಿಟ್ ಮತ್ತು ಅನುಮೋದನೆ ದೊರೆತ ಬಳಿಕ, ಜೇಷ್ಠತೆಯ ಆಧಾರದ ಮೇಲೆ ಪಾವತಿ ಪ್ರಕ್ರಿಯೆ ನಡೆಯುತ್ತದೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದರು. ಗುತ್ತಿಗೆದಾರರ ನೋಂದಾಯಿತ ಬ್ಯಾಂಕ್ ಖಾತೆಗಳಿಗೆ ಐಎಫ್ ಎಂ ಎಸ್ ತಂತ್ರಾಂಶದ ಮೂಲಕ ಒಟಿಪಿ ಆಧಾರಿತ ದೃಢೀಕರಣದೊಂದಿಗೆ ನೇರವಾಗಿ ಹಣ ಜಮಾ ಆಗಲಿದೆ. ಇದರಿಂದ ಹಳೆಯ ಮಾದರಿಯ ಮ್ಯಾನುವಲ್ ಆರ್ ಟಿಜಿಎಸ್ ವ್ಯವಸ್ಥೆಗೆ ಪೂರ್ಣವಿರಾಮ ಬೀಳಲಿದೆ. ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ, ಪ್ರಕ್ರಿಯೆ ಹೆಚ್ಚು ಸುರಕ್ಷಿತ ಹಾಗೂ ಪಾರದರ್ಶಕವಾಗಲಿದೆ ಎಂದರು.