ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಉತ್ಸವವಾದ ‘ಬೆಂಗಳೂರು ತಂತ್ರಜ್ಞಾನ ಶೃಂಗಸಭೆ’ 29ನೇ ಆವೃತ್ತಿಯು ನ.17ರಿಂದ 19 ರವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನಡೆಯಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಕಟಿಸಿದರು.
ಬೆಂಗಳೂರು : ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಉತ್ಸವವಾದ ‘ಬೆಂಗಳೂರು ತಂತ್ರಜ್ಞಾನ ಶೃಂಗಸಭೆ’ 29ನೇ ಆವೃತ್ತಿಯು ನ.17ರಿಂದ 19 ರವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನಡೆಯಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಕಟಿಸಿದರು.
ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆದ ‘ಬೆಂಗಳೂರು ಟೆಕ್ ಸಮ್ಮಿಟ್-2026’ ಪೂರ್ವಭಾವಿ ಆಗಿ ಐಟಿ ಕಂಪೆನಿಗಳ 250ಕ್ಕೂ ಹೆಚ್ಚು ಸಿಇಒಗಳೊಂದಿಗೆ ಉಪಹಾರಸಭೆ ಹಾಗೂ ಸಂವಾದ ನಡೆಸಿ ಮಾತನಾಡಿದರು.
‘ಕೃತಕಬುದ್ಧಿ ಮತ್ತೆ ಹಾಗೂ ಅದರಾಚೆ’ ಎಂಬ ಧ್ಯೇಯವಾಕ್ಯದ ಅಡಿ ನಡೆಸುತ್ತಿರುವ ಟೆಕ್ ಸಮ್ಮಿಟ್‌ನಲ್ಲಿ 75ಕ್ಕೂ ಹೆಚ್ಚು ದೇಶಗಳಿಂದ 1,800ಕ್ಕೂ ಹೆಚ್ಚು ಪ್ರದರ್ಶಕರು, 20,000ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ 60,000ಕ್ಕೂ ಹೆಚ್ಚು ಸಂದರ್ಶಕರು ಭಾಗವಹಿಸುವ ನಿರೀಕ್ಷೆಯಿದೆ. ಇದು ಎಐ ಆಚೆಗೆ ಇರುವ ಹೊಸ ಸಾಧ್ಯತೆಗಳನ್ನು ಅನ್ವೇಷಿಸಲು ಮುನ್ನುಡಿ ಬರೆಯಲಿದೆ ಎಂದು ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಕೃತಕ ಬುದ್ಧಿಮತ್ತೆ (ಎಐ), ಡೀಪ್‌ಟೆಕ್, ವಿದ್ಯುನ್ಮಾನ ಮತ್ತು ಸೆಮಿಕಂಡಕ್ಟರ್, ಜೈವಿಕ ತಂತ್ರಜ್ಞಾನ, ಸ್ಟಾರ್ಟ್‌ಅಪ್, ಎವಿಜಿಸಿ ಸೇರಿ ಮುಂಚೂಣಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಜಾಗತಿಕ ದಿಗ್ಗಜರು, ಉದ್ಯಮಿಗಳು, ಹೂಡಿಕೆದಾರರು, ಸಂಶೋಧಕರು ಹಾಗೂ ನೀತಿ ನಿರೂಪಕರನ್ನು ಒಂದೇ ವೇದಿಕೆಗೆ ತರಲು ಮತ್ತು ಸಹಯೋಗದ ಮೂಲಕ ಹೊಸ ಅವಕಾಶಗಳನ್ನು ಸೃಷ್ಟಿಸಲು ಈ ಸಮ್ಮೇಳನ ವೇದಿಕೆಯಾಗಲಿದೆ ಎಂದು ಹೇಳಿದರು.
‘ಫ್ಯೂಚರ್ ಮೇಕರ್ಸ್’ ಪ್ರಮುಖ ಆಕರ್ಷಣೆ:
ಭವಿಷ್ಯದ ನಿರ್ಮಾತೃಗಳು (ಫ್ಯೂಚರ್ ಮೇಕರ್ಸ್) ಕಾರ್ಯಕ್ರಮ ಈ ಬಾರಿಯ ಪ್ರಮುಖ ಆಕರ್ಷಣೆಯಾಗಿರಲಿದೆ. ನವೋದ್ಯಮ ಸಂಸ್ಥೆಗಳ ಸಂಸ್ಥಾಪಕರು, ಹೂಡಿಕೆದಾರರು, ನವೋದ್ಯಮಿಗಳು ಮತ್ತು ಪರಿವರ್ತನೆಯ ಹರಿಕಾರರನ್ನು ಒಂದೇ ವೇದಿಕೆಗೆ ತರಲಿದೆ. ಅಲ್ಲದೆ, ಎಂಬೆಡೆಡ್ ವರ್ಲ್ಡ್ ಇಂಡಿಯಾದ ಮೊದಲ ಆವೃತ್ತಿ ಸಹ ಇದೇ ವೇದಿಕೆಯಲ್ಲಿ ಆಯೋಜಿಸಲಾಗುತ್ತಿದೆ.
ನಾವು ಆಲಿಸುವ ಜತೆ ಪಾಲಿಸ್ತೇವೆ-ಪ್ರಿಯಾಂಕ್:
ಸಲಹೆಗಳನ್ನು ಸ್ವೀಕರಿಸಿ ಪ್ರತಿಕ್ರಿಯಿಸಿದ ಐಟಿ-ಬಿಟಿ, ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಕರ್ನಾಟಕವನ್ನು ಭಾರತದ ತಂತ್ರಜ್ಞಾನ ರಾಜಧಾನಿಯಾಗಿ ಮತ್ತಷ್ಟು ಬಲಪಡಿಸಲು ರಾಜ್ಯ ಸರ್ಕಾರ ಬದ್ಧತೆ ಹೊಂದಿದೆ. ಸರ್ಕಾರ ಮತ್ತು ಕೈಗಾರಿಕಾ ವಲಯವು ಕೇವಲ ವಿಚಾರ ವಿನಿಮಯಕ್ಕಷ್ಟೇ ಅಲ್ಲ, ರಾಜ್ಯದ ತಂತ್ರಜ್ಞಾನ ಭವಿಷ್ಯವನ್ನು ಒಟ್ಟಾಗಿ ರೂಪಿಸಲು ಒಂದೇ ವೇದಿಕೆಗೆ ಬಂದಿವೆ. ನಾವು ಅಭಿಪ್ರಾಯಗಳನ್ನು ಆಲಿಸುವುದಷ್ಟೇ ಅಲ್ಲ, ಅವುಗಳನ್ನು ಪಾಲಿಸಿ ಕಾರ್ಯರೂಪಕ್ಕೂ ತರುತ್ತೇವೆ ಎಂದು ಭರವಸೆ ನೀಡಿದರು.
ಇನ್ನೋವರ್ಸ್ ಪ್ರತಿಷ್ಠಾನಕ್ಕೆ ಚಾಲನೆ:
ಕರ್ನಾಟಕವನ್ನು ಡೀಪ್‌ಟೆಕ್ (ಸುಧಾರಿತ ತಂತ್ರಜ್ಞಾನ) ಕ್ಷೇತ್ರದ ಜಾಗತಿಕ ರಾಜಧಾನಿಯನ್ನಾಗಿ ರೂಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಆರಂಭಿಸಿರುವ ಮಹತ್ವಾಕಾಂಕ್ಷಿ ''''''''ಇನ್ನೋವರ್ಸ್ ಫೌಂಡೇಷನ್'''''''' ಉಪಕ್ರಮಕ್ಕೂ ಅಧಿಕೃತ ಚಾಲನೆ ನೀಡಲಾಯಿತು.
ವೆಬ್‌ಸೈಟ್ ಬೆಂಗಳೂರು ಟೆಕ್ ಸಮ್ಮಿಟ್ ಕುರಿತು ಹೆಚ್ಚಿನ ವಿವರಗಳಿಗೆ www.bengalurutechsummit.com ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಎಲೆವೇಟ್ ನೆಕ್ಸ್ಟ್ ವಿಜೇತ ನವೋದ್ಯಮಿಗಳಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ''''''''ಎಲಿವೇಟ್ ನೆಕ್ಸ್ಟ್–2026'''''''' ಯೋಜನೆಯಡಿ ಆಯ್ಕೆಯಾದ 33 ನವೋದ್ಯಮ ಸಂಸ್ಥೆಗಳ ವಿಜೇತರನ್ನು ಸನ್ಮಾನಿಸಲಾಯಿತು. 33 ಸಂಸ್ಥಾಪಕರ ಪೈಕಿ 24 ಮಂದಿ ಬೆಂಗಳೂರಿನವರಾಗಿದ್ದು ನಾಲ್ವರು ಹೊಸಕೋಟೆ, ಉಡುಪಿ, ಬೀದರ್ ಮತ್ತು ಹುಬ್ಬಳ್ಳಿಯ ಮೂಲದವರಾಗಿದ್ದಾರೆ. ಆಯ್ಕೆಯಾದ ಪ್ರತಿಯೊಂದು ನವೋದ್ಯಮ ಸಂಸ್ಥೆಗೆ ಸಂಶೋಧನೆ ಹಾಗೂ ಉತ್ಪನ್ನ ಅಭಿವೃದ್ಧಿಗಾಗಿ 85 ಲಕ್ಷ ರು.ಗಳಿಂದ 1 ಕೋಟಿ ರು.ವರೆಗೆ ಅನುದಾನ ನೀಡಲಾಗುತ್ತದೆ.
