ಜಗದ್ವಿಖ್ಯಾತ ಮೈಸೂರು ದಸರಾವನ್ನು ಇಲ್ಲಿನ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಉದ್ಘಾಟಿಸುವುದು ನಿಶ್ಚಿತ. ಈ ಕುರಿತು ಯಾವುದೇ ಗೊಂದಲವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ದಸರಾ ಉದ್ಘಾಟನೆ ತಿರಸ್ಕರಿಸಿದ್ದಾರೆ ಎಂಬ ವದಂತಿ ಹರಿದಾಡುತ್ತಿದ್ದು, ಇದು ಸತ್ಯಕ್ಕೆ ದೂರ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ‘ಕನ್ನಡಪ್ರಭ’ಕ್ಕೆ ಸ್ಪಷ್ಟಪಡಿಸಿದರು.

ಕೊಪ್ಪಳ : ಜಗದ್ವಿಖ್ಯಾತ ಮೈಸೂರು ದಸರಾವನ್ನು ಇಲ್ಲಿನ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಉದ್ಘಾಟಿಸುವುದು ನಿಶ್ಚಿತ. ಈ ಕುರಿತು ಯಾವುದೇ ಗೊಂದಲವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ದಸರಾ ಉದ್ಘಾಟನೆ ತಿರಸ್ಕರಿಸಿದ್ದಾರೆ ಎಂಬ ವದಂತಿ ಹರಿದಾಡುತ್ತಿದ್ದು, ಇದು ಸತ್ಯಕ್ಕೆ ದೂರ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ‘ಕನ್ನಡಪ್ರಭ’ಕ್ಕೆ ಸ್ಪಷ್ಟಪಡಿಸಿದರು.

ಈ ಕುರಿತು ಮಾತನಾಡಿದ ಅವರು, ಸೆ.28ಕ್ಕೆ ಶ್ರೀಗಳಿಗೆ ಅಧಿಕೃತ ಆಹ್ವಾನ ನೀಡುವ ಸಲುವಾಗಿ ಗವಿಮಠಕ್ಕೆ ಭೇಟಿ ನೀಡಲಾಗುವುದು. ಈ ಕುರಿತು ಈಗಾಗಲೇ ಗವಿಮಠದೊಂದಿಗೆ ಸಂಪರ್ಕಿಸಿ ದಿನಾಂಕ ಖಚಿತಪಡಿಸಲಾಗಿದೆ ಎಂದು ತಿಳಿಸಿದರು.

ಸಿಎಂ ಮಾತುಕತೆ ಬಳಿಕವೇ ಘೋಷಣೆ:

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಶ್ರೀಗಳೊಂದಿಗೆ ಮಾತನಾಡಿ, ಅವರ ಸಮ್ಮತಿ ಪಡೆದ ಬಳಿಕವೇ ದಸರಾ ಉದ್ಘಾಟಕರಾಗಿ ಅವರ ಹೆಸರನ್ನು ಘೋಷಿಸಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಉದ್ದೇಶಪೂರ್ವಕವಾಗಿ ಹರಡುತ್ತಿರುವ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಹೇಳಿದರು.

ಬಹುತೇಕ ಪ್ರಕ್ರಿಯೆ ಪೂರ್ಣ:

ದಸರಾ ಉದ್ಘಾಟನೆಗೆ ಸಂಬಂಧಿಸಿದ ಸರ್ಕಾರದ ಪ್ರಕ್ರಿಯೆಗಳು ಬಹುತೇಕ ಪೂರ್ಣಗೊಂಡಿವೆ. ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಅ.11ರಂದು ಮೈಸೂರು ದಸರಾ ಉದ್ಘಾಟಿಸುವುದು ನಿಶ್ಚಿತ. ಈ ವಿಚಾರದಲ್ಲಿ ಯಾವುದೇ ಬದಲಾವಣೆ ಅಥವಾ ಗೊಂದಲ ಇಲ್ಲ ಎಂದು ಸಚಿವ ತಂಗಡಗಿ ‘ಕನ್ನಡಪ್ರಭ’ಕ್ಕೆ ಸ್ಪಷ್ಟಪಡಿಸಿದರು.