ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿಶಿಷ್ಟ ‘ಸಂತೆ’ ಕಾರ್ಯಕ್ರಮವು ವಿದ್ಯಾರ್ಥಿನಿಯರಲ್ಲಿನ ಉದ್ಯಮಶೀಲತೆ, ಹಣಕಾಸಿನ ಅರಿವು ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಅನಾವರಣಗೊಳಿಸಿತು. ವಿದ್ಯಾರ್ಥಿನಿಯರೇ ವ್ಯಾಪಾರಿಗಳಾಗಿ ವಿವಿಧ ವಸ್ತುಗಳನ್ನು ಮಾರಾಟ ನಡೆಸಿದರೆ, ಇದೇ ಸಂದರ್ಭದಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವೂ ಗಮನ ಸೆಳೆಯಿತು.ಶಿಕ್ಷಣದೊಂದಿಗೆ ವ್ಯವಹಾರ ಜ್ಞಾನ ನೀಡುವ ವೇದಿಕೆಯಾಗಿ ರೂಪುಗೊಂಡ ಸಂತೆಯಲ್ಲಿ ಗ್ರಾಮೀಣ ಮತ್ತು ನಗರದ ಪ್ರದೇಶಗಳ ವಿದ್ಯಾರ್ಥಿನಿಯರು ತಮ್ಮ ಪೋಷಕರು ಬೆಳೆದ ತರಕಾರಿ, ಹಣ್ಣುಹಂಪಲು ಮತ್ತು ಮನೆಯಲ್ಲಿ ತಯಾರಿಸಿದ ತಿಂಡಿ ತಿನಿಸುಗಳನ್ನು ಪ್ರದರ್ಶನಕ್ಕಿಟ್ಟು ಮಾರಾಟ ಮಾಡುವ ಚಾಕಚಕ್ಯತೆ ಗಮನ ಸೆಳೆಯಿತು. ಶಾಲೆಯ ಪ್ರಾಂಗಣದಲ್ಲಿ ಶಾಲೆಯ ಟೇಬಲ್ ಕುರ್ಚಿಗಳನ್ನೇ ಸದುಪಯೋಗ ಮಾಡಿಕೊಂಡಿದ್ದ ವಿದ್ಯಾರ್ಥಿನಿಯರು ತಾಜಾ ತಾಜಾ ತರಕಾರಿ, ಚರುಮುರಿ, ಹಣ್ಣಿನ ರಸ, ಜನರಲ್ ಸ್ಟೋರ್ ವಸ್ತುಗಳು, ಉಡುಗೆ, ತೊಡುಗೆ ವಸ್ತ್ರಗಳು, ಘಮಘಮಿಸುತ್ತಿದ್ದ ತರೇವಾರು ತಿಂಡಿ ತಿನಿಸಿಗಳು ಕೈ ಬೀಸಿ ಕರೆಯುತ್ತಿದ್ದವು. ಆದರೆ ವ್ಯವಹಾರ ಜ್ಞಾನದಲ್ಲಿ ಚೌಕಾಸಿ ಎಂಬುದು ಸಂತೆಯಲ್ಲಿ ಕಂಡುಬಂದು, ಅನೇಕ ಮಕ್ಕಳು ನಿಗದಿತ ದರಕ್ಕಿಂತ ಕಡಿಮೆ ದರಕ್ಕೆ ವಸ್ತುಗಳು, ತಿಂಡಿ ತಿನಿಸುಗಳನ್ನು ಕೇಳುವ ಜತೆಗೆ ಖರೀದಿಗೆ ಮುಂದಾದರು.ಮತ್ತೊಂದೆಡೆ ಜ್ಞಾನದೊಂದಿಗೆ ಮೊಬೈಲ್ ಹಾವಳಿ ನಿಯಂತ್ರಣಕ್ಕೆ ಜಾಗೃತಿ ಮೂಡಿಸುತ್ತಿದ್ದ ಶಿಕ್ಷಕ ವೃಂದವು ಮಾದಕ ವಸ್ತುಗಳ ಬಳಕೆ ಮತ್ತು ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದರೊಂದಿಗೆ ಉತ್ತಮ ಮೌಲ್ಯಗಳು ಮತ್ತು ಜೀವನ ಕೌಶಲ್ಯಗಳನ್ನು ಬೆಳೆಸಲು ಬೇಕಾಗುವ ಮಾರ್ಗದರ್ಶನ ನೀಡಿದರು. ಪೋಷಕರೊಂದಿಗೆ ತಾವೇ ಬೆಳೆಸಿದ ಹಾಗೂ ಸಂಗ್ರಹಿಸಿದ ತರಕಾರಿಗಳು, ಸೊಪ್ಪುಗಳು, ಆಹಾರ ಪದಾರ್ಥಗಳು ಮತ್ತು ಆರೋಗ್ಯಕರ ತಿನಿಸುಗಳ ತಾತ್ಕಾಲಿಕ ಮಳಿಗೆಗಳೊಂದಿಗೆ ವ್ಯವಹಾರ ಕೌಶಲ್ಯದೊಂದಿಗೆ ಸ್ವಾವಲಂಬನೆ, ಉದ್ಯಮಶೀಲತೆ ಮತ್ತು ಹಣಕಾಸಿನ ಅರಿವನ್ನು ಬೆಳೆಸಿಕೊಂಡರು.

ಕಾರ್ಯಕ್ರಮವನ್ನು ಉದ್ಘಾಟಿಸಿ ತಹಸೀಲ್ದಾರ್‌ ಸಂತೋಷ್ ಕುಮಾರ್‌ ಮಾತನಾಡಿ, ವಿದ್ಯಾಭ್ಯಾಸದ ಜೊತೆಗೆ ವ್ಯವಹಾರ ಕೌಶಲ್ಯವೂ ಇಂದಿನ ವಿದ್ಯಾರ್ಥಿಗಳಿಗೆ ಅತ್ಯಗತ್ಯವಾಗಿದೆ. ಸಣ್ಣ ವಯಸ್ಸಿನಲ್ಲೇ ವ್ಯಾಪಾರದ ಅನುಭವ ಪಡೆದರೆ ಆತ್ಮವಿಶ್ವಾಸ ಮತ್ತು ಸ್ವಾವಲಂಬನೆ ಬೆಳೆಯುತ್ತದೆ. ಪ್ರಾಮಾಣಿಕತೆ ಹಾಗೂ ನಂಬಿಕೆಯೇ ಯಶಸ್ವಿ ವ್ಯಾಪಾರದ ಮೂಲಾಧಾರವಾಗಿದ್ದು, ಸ್ವಯಂ ಉದ್ಯೋಗದ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ವೈ. ಕೆ. ಪಾಲಾಕ್ಷಮೂರ್ತಿ, ದೈಹಿಕ ಶಿಕ್ಷಕ ಶಶಿಧರ, ಅಧ್ಯಾಪಕ ವೃಂದ ಗಂಗಾಧರ್‌ ತೇವರಿಮಠ್, ಉಮಾದೇವಿ, ರೇಣುಕಾ, ವಾಣಿಶ್ರೀ, ನಯನ, ಶಶಿಕಲಾ, ಲತಾಮಣಿ, ಅನುಪಮ ಸೇರಿದಂತೆ ಪೋಷಕರು ಹಾಗೂ ಗಣ್ಯರು ಭಾಗವಹಿಸಿ ವಿದ್ಯಾರ್ಥಿನಿಯರನ್ನು ಅಭಿನಂದಿಸಿದರು.