ಬೆಂಗಳೂರು : ಸೈಬರ್, ಆರ್ಥಿಕ ಅಪರಾಧಗಳು ಹಾಗೂ ಮಾದಕ ವಸ್ತು ಜಾಲವನ್ನು ಸಂಪೂರ್ಣವಾಗಿ ಮಟ್ಟ ಹಾಕುವುದರ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಿ ಎಂದು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ರಾಜ್ಯದ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ ಸಲೀಂ ಸೂಚಿಸಿದ್ದಾರೆ.
ಕವಾಯತು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮ
ಕೋರಮಂಗಲದ ಕೆಎಸ್‌ಆರ್‌ಪಿ ಕವಾಯತು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೇವಾ ಕವಾಯತು ವಂದನೆ ಸ್ವೀಕರಿಸಿ ನಂತರ ಡಿಜಿ-ಐಜಿಪಿ ಕಮಂಡೇಷನ್ ಡಿಸ್ಕ್ ಪ್ರಶಸ್ತಿಯನ್ನು 200 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪ್ರದಾನ ಮಾಡಿ ಮಾತನಾಡಿ, ಸೈಬರ್, ಆರ್ಥಿಕ ಅಪರಾಧಗಳು ಹಾಗೂ ಮಾದಕ ವಸ್ತು ಜಾಲ ನಮಗೆ ದೊಡ್ಡ ಸವಾಲಾಗಿದೆ. ಅದನ್ನು ತಾವು ಗಂಭೀರವಾಗಿ ತೆಗೆದುಕೊಂಡು ಬುಡಸಮೇತ ಕಿತ್ತು ಹಾಕಬೇಕು. ಇತ್ತೀಚೆಗೆ ಸೈಬರ್ ಅಪರಾಧಗಳು, ಮಾದಕ ವಸ್ತು ಜಾಲ ಹೆಚ್ಚಾಗುತ್ತಿವೆ. ರಾಜ್ಯ ಸರ್ಕಾರ ಮಾದಕ ವಸ್ತುಗಳ ಜಾಲ ನಿರ್ಮೂಲನೆಗೆ ಪಣ ತೊಟ್ಟಿದೆ. ಆ ನಿಟ್ಟಿನಲ್ಲಿ ಎಲ್ಲರೂ ಕರ್ತವ್ಯ ನಿರ್ವಹಿಸಬೇಕೆಂದು ತಾಕೀತು ಮಾಡಿದರು.
ಒಂದು ದೇಶ ಅಥವಾ ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಸರಿಯಿದ್ದರೆ ಅಭಿವೃದ್ಧಿ ಹೆಚ್ಚಾಗುತ್ತದೆ. ಬಂಡವಾಳ ಹೂಡುವವರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಹಾಗಾಗಿ ಶಾಂತಿ ಮತ್ತು ಸುವ್ಯವಸ್ಥೆಗೆ ಹೆಚ್ಚಿನ ಒತ್ತುಕೊಟ್ಟು ರಾಜ್ಯದ ಅಭಿವೃದ್ಧಿಗೆ ಶ್ರಮಿಸಿ ಎಂದು ಅವರು ಸಲಹೆ ನೀಡಿದರು.ದೇಶದಲ್ಲಿ ರಾಜ್ಯದ ಪೊಲೀಸರಿಗೆ ಉತ್ತಮ ಹೆಸರಿದೆ. ಅದನ್ನು ಕಾಪಾಡಿ ಕೊಂಡು ಹೋಗಬೇಕು. ನಾವು ಜನಸಾಮಾನ್ಯರು ಮತ್ತು ಪೊಲೀಸರ ನಡುವೆ ಉತ್ತಮ ಬಾಂಧವ್ಯ ಬೆಳೆಯಲು, ಆಸರೆ, ಮನೆ ಮನೆ ಪೊಲೀಸ್ ಎಂಬ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. ಸಾರ್ವಜನಿಕರ ಬಾಂಧವ್ಯ ಮುಖ್ಯ. ಉತ್ತಮ ಸಮಾಜ ನಿರ್ಮಾಣ ಮಾಡಿದರೆ ನಮ್ಮ ರಾಜ್ಯ ಮಾದರಿ ರಾಜ್ಯ ಆಗಲಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಮಾದರಿ ರಾಜ್ಯವನ್ನಾಗಿಸಲು ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.
ಪೊಲೀಸರ ಮನೋಸ್ಥೆರ್ಯ ಹೆಚ್ಚಿಸಲು ಹೊಸ ಕ್ಯಾಪ್
ಪೊಲೀಸರ ಮನೋಸ್ಥೆರ್ಯ ಹೆಚ್ಚಿಸಲು ಹೊಸ ಕ್ಯಾಪ್ ತಂದಿದ್ದೇವೆ. ಈ ಬೆಳವಣಿಗೆಯಿಂದ ಸಿಬ್ಬಂದಿಯಲ್ಲಿ ಉತ್ಸಾಹ ಹೆಚ್ಚಾಗಿದೆ. ಈಗಾಗಲೇ ವಿದ್ಯಾನಿಧಿ, ಆರೋಗ್ಯಭಾಗ್ಯ, ಪೊಲೀಸ್ ಶಾಲೆ ಹೀಗೆ ಹತ್ತಾರು ಜಾರಿಗೆ ಯೋಜನೆಗಳನ್ನು ತಂದಿದ್ದೇವೆ. ಇದರಿಂದ ಸಿಬ್ಬಂದಿಗೆ ಮತ್ತಷ್ಟು ಉತ್ತೇಜನವಾಗಲಿದೆ. ತಾಂತ್ರಿಕವಾಗಿ ಆರೋಪಿಗಳು ನಮಗಿಂತ ಒಂದು ಹೆಜ್ಜೆ ಮುಂದಿದ್ದಾರೆ. ಆದ್ದರಿಂದ ನಾವು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಆರೋಪಿಗಳನ್ನು ಹಿಡಿಯಬೇಕು ಎಂದರು. ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್, ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಇದ್ದರು.