ಕಣ್ಣಿನ ಪೊರೆ ದೋಷವುಳ್ಳ 35 ಜನರಿಗೆ ಉಚಿತ ಶಸ್ತ್ರಚಿಕಿತ್ಸಾ ಭಾಗ್ಯ
ಕನ್ನಡಪ್ರಭ ವಾರ್ತೆ ಹಳಿಯಾಳಕಣ್ಣಿಲ್ಲದೇ ಜೀವನವೇ ಕತ್ತಲೆ, ಕಣ್ಣು ನಮಗೆ ಜಗತ್ತಿನ ಸೌಂದರ್ಯ, ಮಾಹಿತಿ, ಸಂವಹನ ನೀಡುವ ಅತ್ಯಗತ್ಯವಾದ ಇಂದ್ರೀಯವಾಗಿದೆ. ಅದಕ್ಕಾಗಿ ಕಣ್ಣಿನ ಆರೈಕೆ ಮತ್ತು ಸ್ವಚ್ಛತೆಯನ್ನು ನಿಯಮಿತವಾಗಿ ಮಾಡಿಕೊಳ್ಳುವುದು ಪ್ರತಿಯೊಬ್ಬರ ಜೀವನದ ಮಹತ್ವದ ಭಾಗವಾಗಿದೆ ಎಂದು ಹಳಿಯಾಳ ತಾಲೂಕು ಆಸ್ಪತ್ರೆಯ ನೇತ್ರ ತಜ್ಞ ಡಾ. ಸಲೀಂ ಕಿತ್ತೂರ ಹೇಳಿದರು.
ಪಟ್ಟಣದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಭಾಂಗಣದಲ್ಲಿ ಆಯೋಜಿಸಿದ ಉಚಿತ ಕಣ್ಣಿನ ಪೊರೆ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಕಣ್ಣಿನ ಪೊರೆ ಅಂಧತ್ವಕ್ಕೆ ಪ್ರಮುಖ ಕಾರಣವಾಗಿದ್ದರೂ ಸಮಯಕ್ಕೆ ಸರಿಯಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ಸಂಪೂರ್ಣವಾಗಿ ಗಣಮುಖರಾಗಬಹುದು ಎಂದು ತಿಳಿಸಿದರು.ಹಿರಿಯ ನಾಗರಿಕರು ದೃಷ್ಟಿ ಮಸಕಾಗುವುದು ಸೇರಿದಂತೆ ಯಾವುದೇ ಲಕ್ಷಣಗಳನ್ನು ನಿರ್ಲಕ್ಷಿಸದೇ ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸಿ ಕೊಳ್ಳಬೇಕೆಂದು ಸಲಹೆ ನೀಡಿದರು.
ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟಿ ಸಂಸ್ಥೆಯ ಯೋಜನಾ ಸಂಯೋಜಕ ವಿನಾಯಕ ಚವ್ಹಾಣ, ಹುಬ್ಬಳ್ಳಿಯ ಎಂ.ಎಂ. ಜೋಶಿ ನೇತ್ರ ಆಸ್ಪತ್ರೆಯ ಸಂಯೋಜಕ ವಿ.ಜೆ. ಕಟ್ಟಿ ಮಾತನಾಡಿದರು.
ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ವಿ.ಆರ್.ಡಿ ಟ್ರಸ್ಟ್, ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟಿ ಸಂಸ್ಥೆ, ಎಂ.ಎಂ. ಜೋಶಿ ನೇತ್ರ ಆಸ್ಪತ್ರೆ ಹುಬ್ಬಳ್ಳಿ, ಹಳಿಯಾಳ ತಾಲೂಕ ಆಸ್ಪತ್ರೆಯ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿತ್ತು.
ಶಿಬಿರದಲ್ಲಿ ಡಾ. ಕೇತಕಿ, ಡಾ.ಸಚಿನ್, ನೇತ್ರ ತಜ್ಞ ತಾಜುದ್ದೀನ ಬಳ್ಳಾರಿ, ಸವಿತಾ ಹಾಗೂ ಹಳಿಯಾಳ ತಾಲೂಕ ಆಶ್ಪತ್ರೆಯ ಆರೋಗ್ಯ ಶಿಕ್ಷಣಾಧಿಕಾರಿ ರೂಪಾ ತುರಮುರಿ ಇದ್ದರು. ಸಂಸ್ಥೆಯ ಕ್ಷೇತ್ರ ಮೇಲ್ವಿಚಾರಕ ವಿಷ್ಣು ಮಡಿವಾಳ, ಉಳವಯ್ಯಾ ಬೆಂಡಿಗೇರಿ ಕಾರ್ಯಕ್ರಮ ನಿರ್ವಹಿಸಿದರು.ಶಿಬಿರದಲ್ಲಿ 100ಕ್ಕಿಂತ ಹೆಚ್ಚು ಜನರು ತಪಾಸಣೆ ಮಾಡಿಸಿಕೊಂಡರು. ಕಣ್ಣಿನ ಪೊರೆ, ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಪ್ರಮಾಣ, ಕ್ಷಯರೋಗದ ಅಂಶಗಳ ತಪಾಸಣೆ ನಡೆಸಲಾಯಿತು. ತಪಾಸಣೆಯಲ್ಲಿ ಆಯ್ಕೆ ಮಾಡಿದ ಅರ್ಹ 35 ಜನರನ್ನು ಗುರುತಿಸಿ ಅವರನ್ನು ಹುಬ್ಬಳ್ಳಿಯ ಎಂ.ಎಂ. ಜೋಶಿ ನೇತ್ರ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರಚಿಕಿತ್ಸಾ ಶಿಬಿರ ನಡೆಸಲಾಯಿತು.