ಹುಬ್ಬಳ್ಳಿ:
ಎಲ್ಲರೂ ನಿದ್ದೆ ಮಂಪರ್‌ನಲ್ಲೇ ಇದ್ದೆವು. ಭಾರೀ ಶಬ್ದವೊಂದು ಕಿವಿಗೆ ಅಪ್ಪಳಿಸಿತು ಅಷ್ಟೇ. ಆ ಮೇಲೆ ಕಣ್ತೆರೆದಾಗ ಯಾರೋ ಇಬ್ಬರು ನಮ್ಮನ್ನು ವಾಹನದಿಂದ ಹೊರಗೆ ಎಳೆಯುತ್ತಿದ್ದರು. ಹೊರಗೆ ಬಂದು ನೋಡಿದರೆ ನಮ್ಮವರ ಹೆಣಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.!ಇದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಆರತಿಬೈಲ್ ಘಾಟ ಪ್ರದೇಶದಲ್ಲಿ ಗುರುವಾರ ನಸುಕಿನ ಜಾವ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಇಲ್ಲಿನ ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವರಾಜ ಮಡಿವಾಳರ ಅಪಘಾತದ ಘಟನೆ ವಿವರಿಸಿದ ಪರಿ. ಅಪಘಾತದ ಕ್ಷಣಗಳನ್ನು ನೆನಪಿಸಿಕೊಂಡ ಅವರು, ತಮ್ಮ ಸ್ನೇಹಿತರನ್ನು ಕಳೆದುಕೊಂಡಿದ್ದಕ್ಕೆ ಕಣ್ಣೀರಾದರು.
ಸ್ವಿಗ್ಗಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುವ ನಾವೆಲ್ಲರೂ ಧರ್ಮಸ್ಥಳ, ಕೊಡಚಾದ್ರಿ, ಚಿಕ್ಕಮಗಳೂರ ಸೇರಿದಂತೆ ಪ್ರವಾಸ ಸ್ಥಳಗಳ ವೀಕ್ಷಣೆಗೆ ಮೂರು ದಿನ ಯೋಜನೆ ರೂಪಿಸಿ ಹೊರಟಿದ್ದೇವು. ಅಷ್ಟರಲ್ಲಿ ಇಷ್ಟೆಲ್ಲ ಆಯ್ತು ಎನ್ನುವಾಗ ಆತನಲ್ಲಿ ದುಃಖವು ಮಡುಗಟ್ಟಿತ್ತು.ಇನ್ನು ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟ ಸಚಿನ ಹೆಬ್ಬಳ್ಳಿ ತಾಯಿ ಈರಮ್ಮ ದುಃಖದ ಕಟ್ಟೆ ಒಡೆದಿತ್ತು. ಸ್ನೇಹಿತರೆಲ್ಲ ಸೇರಿ ಪ್ರವಾಸಕ್ಕೆ ಹೋಗಿ ಬರ್ತೇವೆ ಅಂತ ಹೇಳಿ ಹೋಗಿದ್ದ. ರಾತ್ರಿ 11 ಗಂಟೆಗೆ ಮನೆಯಿಂದ ಹೋದಾವ ಬೆಳಗ್ಗೆ ಹೆಣಾ ಆಗಿ ಬಂದಾನ. ದುಬೈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇಲ್ಲಿಗೆ ಬಂದು 20 ದಿನ ಆಗಿತ್ತು. ಅಲ್ಲಿಯೇ ಉಳಿದಿದ್ದರ ಈ ಪರಿಸ್ಥಿತಿ ಬರುತ್ತಿರಲಿಲ್ಲವೇನೋ? ಇದ್ದೊಬ್ಬ ಮಗ ನಮ್ಮನ್ ಬಿಟ್ಟು ಹೋಗ್ಯಾನ್ರಿ.. ಎಂದು ಕಣ್ಣೀರು ಸುರಿಸಿದರು.
ನಗರದ ಕೆಎಂಸಿಆರ್‌ಐ ಆಸ್ಪತ್ರೆ ಎದುರು ಸಚಿನ ಹಾಗೂ ಮಂಜುನಾಥ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಆಸ್ಪತ್ರೆ ಎದುರು ಮೃತರ ಸ್ನೇಹಿತರು, ಸಂಬಂಧಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಇಬ್ಬರ ಸಾವು
ಅಪಘಾತದಲ್ಲಿ ಗಾಯಗೊಂಡ ನಾಲ್ವರನ್ನು ಹುಬ್ಬಳ್ಳಿಯ ಕೆಎಂಸಿಆರ್‌ಐ ಆಸ್ಪತ್ರೆಗೆ ರವಾನಿಸಲಾಗಿತ್ತು. ಈ ವೇಳೆ ಮಾರ್ಗ ಮಧ್ಯದಲ್ಲಿ ಮಂಜುನಾಥ ಚುಳಕಿ (32) ಮೃತಪಟ್ಟರೆ, ಸಚಿನ ಹೆಬ್ಬಳ್ಳಿ (26) ಚಿಕಿತ್ಸೆ ಫಲಿಸದೆ ಬೆಳಗ್ಗೆ 8 ಗಂಟೆಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಕೆಎಂಸಿಆರ್‌ಐ ಆಸ್ಪತ್ರೆಯ ನಿರ್ದೇಶಕ ಕೆ.ಎಫ್. ಕಮ್ಮಾರ ತಿಳಿಸಿದರು.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನಿಬ್ಬರು ಗಾಯಾಳುಗಳಲ್ಲಿ ಶಿವರಾಜ ಮಡಿವಾಳ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆರೋಗ್ಯವಾಗಿದ್ದಾರೆ. ಚೆನ್ನಬಸಪ್ಪ ಸಂಪಗಾಂವ ಅವರ ದೇಹದಲ್ಲಿನ ಮೂಳೆಗಳಿಗೆ ಪೆಟ್ಟಾಗಿದೆ. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.