ಹಾವೇರಿ: ನಗರದ ಹಳೆಯ ಪಿ.ಬಿ. ರಸ್ತೆಯಲ್ಲಿನ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಮೂರನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದರೂ, ಕಾರ್ಮಿಕ ಇಲಾಖೆ ಈ ವರೆಗೆ ಸ್ಪಂದಿಸಿಲ್ಲ. ಅದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಪರಿಶ್ರಮಿಕ ಕಟ್ಟಡ ಕಾರ್ಮಿಕರು ಮತ್ತು ಇತರ ನಿರ್ಮಾಣ ಹಾಗೂ ಅಸಂಘಟಿತ ಕಾರ್ಮಿಕ ಸಂಘದ ಜಿಲ್ಲಾ ಕಾರ್ಯದರ್ಶಿ ನಂದಾ ಕಳಸದ ಆಗ್ರಹಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು. 1ರಂದು ಹಳೆಯ ಪಿ.ಬಿ. ರಸ್ತೆಯಲ್ಲಿನ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ದೇವಿಹೊಸೂರಿನ ಶಂಕರಪ್ಪ ಬಸಪ್ಪ ಗುಳೇದ ಹಾಗೂ ಬಂಕಾಪುರದ ಮುಹ್ಮದ್ ಸೊಲ್ಲಾಪುರ ಅವರು ಕಬ್ಬಿಣದ ರಾಡುಗಳು ವಿದ್ಯುತ್ ತಂತಿಗೆ ತಗುಲಿ ಶಾರ್ಟ್ ಸರ್ಕ್ಯೂಟ್‌ ಸಂಭವಿಸಿದ ಪರಿಣಾಮ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಿದರು.

ಕಟ್ಟಡದಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಕಾರ್ಮಿಕರಿಂದ ಕೆಲಸ ಮಾಡಿಸಿರುವುದೇ ಅಪಘಾತಕ್ಕೆ ಕಾರಣವಾಗಿದೆ. ಘಟನೆ ನಡೆದು ಎಂಟು ದಿನಗಳಾದರೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಕಾರ್ಮಿಕ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಪೊಲೀಸರು ಸುಮೋಟೋ ಪ್ರಕರಣ ದಾಖಲಿಸದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ದೂರಿದರು.

ನಮ್ಮ ಸಂಘಟನೆಯ ಪದಾಧಿಕಾರಿಗಳು ಹುಬ್ಬಳ್ಳಿಯ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದು, ಒಬ್ಬ ಕಾರ್ಮಿಕ ಕೋಮಾ ಸ್ಥಿತಿಯಲ್ಲಿದ್ದು, ಮತ್ತೊಬ್ಬರ ಸ್ಥಿತಿಯೂ ಗಂಭೀರವಾಗಿದೆ. ಬಡ ಕುಟುಂಬಗಳಿಗೆ ಸೇರಿದ ಗಾಯಾಳುಗಳ ಚಿಕಿತ್ಸಾ ವೆಚ್ಚ ಭರಿಸುವುದು ಕಷ್ಟಕರವಾಗಿದ್ದರೂ, ನೆರವಿಗೆ ಬರಬೇಕಿದ್ದ ಕಾರ್ಮಿಕ ಇಲಾಖೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಘಟನೆಗೆ ಸಂಬಂಧಿಸಿದಂತೆ ಹೊಣೆಗಾರರ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸಿ, ನಿರ್ಲಕ್ಷ್ಯ ತೋರಿದ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಕಾರ್ಮಿಕರ ಹಿತ ಕಾಪಾಡುವ ಜನಪರ ಅಧಿಕಾರಿಗಳನ್ನು ನೇಮಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.


ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರಾದ ಅಜಯಕುಮಾರ ಹಡಪದ, ಸುಭಾನಿ ನದಾಫ, ಮೌಲಾಲಿ ಮುಲ್ಲಾನವರ, ಮಲ್ಲಪ್ಪ ನಾಗರೊಳ್ಳಿ ಹಾಗೂ ಪ್ರಕಾಶ ದಾನಪ್ಪನವರ ಉಪಸ್ಥಿತರಿದ್ದರು.