ಗದಗ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಜು. 11ರಂದು ಬೆಳಗ್ಗೆ 11ಕ್ಕೆ ಬೆಂಗಳೂರು ನಗರದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಅಭಿನಂದನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಎಲ್ಲ ತಾಲೂಕುಗಳಿಂದ 1200ಕ್ಕೂ ಅಧಿಕ ನೌಕರರು ತೆರಳಲಿದ್ದೇವೆ. ನೌಕರರು ಸಾರಿಗೆ ಬಸ್ ಹಾಗೂ ರೈಲಿನ ಮೂಲಕ ಕಾರ್ಯಕ್ರಮಕ್ಕೆ ಹೋಗಲಿದ್ದು, ಎಲ್ಲ ಖರ್ಚು- ವೆಚ್ಚವನ್ನು ರಾಜ್ಯ ಸಂಘವೇ ಭರಿಸಲಿದೆ. ಗದಗ ಜಿಲ್ಲೆಯಲ್ಲಿ ಶೇ. 90ಕ್ಕೂ ಹೆಚ್ಚು ಅಂಕ ಪಡೆದ 148 ವಿದ್ಯಾರ್ಥಿಗಳು ಅಂದು ಸನ್ಮಾನ ಸ್ವೀಕರಿಸಲಿದ್ದಾರೆ.ಸಮಾರಂಭದಲ್ಲಿ ಆದಿಚುಂಚನಗಿರಿಯ ನಿರ್ಮಲಾನಂದನಾಥ ಶ್ರೀಗಳು, ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಭಾಗವಹಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ 2026ನೇ ವರ್ಷದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿರುವ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಪುರಸ್ಕಾರಕ್ಕೆ ರಾಜ್ಯಾದ್ಯಂತ ಒಟ್ಟು 11000 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದರು.ಎನ್‌ಪಿಎಸ್ ಸಮಿತಿಯಿಂದ ತಕ್ಷಣವೇ ವರದಿ ಪಡೆದುಕೊಂಡು, ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ(ಒಪಿಎಸ್)ಯನ್ನು ಮರುಜಾರಿಗೊಳಿಸಬೇಕು ಮತ್ತು ಕೇಂದ್ರ ಸರ್ಕಾರಿ ನೌಕರರ ವೇತನ ಹಾಗೂ ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ವಿಸ್ತರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಪತ್ರ ಸಲ್ಲಿಸಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಿ.ಎಸ್. ತಳವಾರ, ಸಿದ್ದಪ್ಪ ಲಿಂಗದಾಳ, ಐ.ಎ. ಗಾಡಗೋಳಿ, ಶರಣು ಸಂಗದಾಳ, ಎಂ.ವೈ. ಮಲಕಶೆಟ್ಟಿ, ರಾಜು ಕಂಠಿಗೊಣ್ಣನವರ, ಸಂಜೀವಕುಮಾರ ಕುಂದಗೋಳ, ಎಂ.ಎಂ. ನಿಟ್ಟಾಲಿ ಸೇರಿದಂತೆ ಅನೇಕ ನೌಕರರ ಮುಖಂಡರು ಇದ್ದರು. ಜು. 11ರಂದು ನಡೆಯುವ ಸಮಾವೇಶಕ್ಕೆ ಹೆಚ್ಚಿನ ನೌಕರರು ಭಾಗವಹಿಸಿ
ಗದಗ: ಹಳೆ ಪಿಂಚಣಿ ಯೋಜನೆ(ಒಪಿಎಸ್) ಜಾರಿಗೊಳಿಸುವಂತೆ ಒತ್ತಾಯಿಸಲು ಹಾಗೂ ಮುಖ್ಯಮಂತ್ರಿಗಳ ನಮ್ಮಭಿಮಾನ ಸಮಾವೇಶದಲ್ಲಿ ಪಾಲ್ಗೊಳ್ಳಲು ಜು. 11ರಂದು ಬೆಂಗಳೂರಿನಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ಜಿಲ್ಲೆಯ ಆರೋಗ್ಯ ಇಲಾಖೆಯ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಸಿದ್ದಪ್ಪ ಲಿಂಗದಾಳ ತಿಳಿಸಿದರು.ಆರೋಗ್ಯ ಇಲಾಖೆಯ ವಿವಿಧ ವೃಂದದ ನೌಕರರ ಸಂಘದ ಪದಾಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳಾರಿ ಅವರ ನೇತೃತ್ವದಲ್ಲಿ ಜಿಲ್ಲೆಯಿಂದ ಬೆಂಗಳೂರಿಗೆ ತೆರಳುವ ನೌಕರರಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಜು. 10ರಂದೇ ಹೊರಡಲಿರುವ ನೌಕರರು ಸಂಘಟಕರಲ್ಲಿ ತಮ್ಮ ಹೆಸರನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಎಂದರು.ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಕೇಂದ್ರ ಸಂಘದ ಜಿಲ್ಲಾ ಶಾಖೆಯ ವತಿಯಿಂದ ಜು. 23ರಂದು ಆರೋಗ್ಯ ಇಲಾಖೆಯ ನೌಕರರ ಕಾರ್ಯಕ್ಷಮತೆ ವಿಚಾರಸಂಕಿರಣ, ಇತ್ತೀಚೆಗೆ ಪದೋನ್ನತಿ ಹೊಂದಿದ ಅಧಿಕಾರಿಗಳು, ನೌಕರರ ಅಭಿನಂದನೆ ಹಾಗೂ ವರ್ಗಾವಣೆಯಾಗಿ ಜಿಲ್ಲೆಗೆ ಬಂದ ನೌಕರರ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಜು. 19ರಂದು ಕರೆಯಲಾಗುವುದು ಎಂದರು.ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಅಜಯಕುಮಾರ್ ಕಲಾಲ್, ಡಾ. ರಾಜೇಂದ್ರ ಗಡಾದ ಮಾತನಾಡಿದರು. ವೈ.ಎನ್. ಕಡೇಮನಿ, ಸರೋಜಾ ಕಟ್ಟಿಮನಿ, ಬಿ.ಸಿ. ಹಿರೇಹಾಳ, ವಿವೇಕ ತಿರುಮಲ್ಲೆ, ವೈ.ವೈ. ಹಕ್ಕಿ, ಎಸ್.ಬಿ. ಗಡಾದ, ಬಸವರಾಜ ತಡಸಿ, ರಮೇಶ ಹರಹುಣಸಿ, ಲಿಂಗರಾಜ ನಾಶಿ, ಶ್ರೀನಿವಾಸ ಬಿದರಕುಂದಿ ಸೇರಿದಂತೆ ವಿವಿಧ ವೃಂದದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಆರೋಗ್ಯ ನಿರೀಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಡಿಗೇರ ನಿರೂಪಿಸಿದರು. ಬಸವರಾಜ ತಡಸಿ ಸ್ವಾಗತಿಸಿದರು. ಎಂ.ಎಸ್. ರಬ್ಬನಗೌಡ ವಂದಿಸಿದರು.