ಹಾವೇರಿ: ಹೃದಯ ಸಂಬಂಧಿ ಕಾಯಿಲೆಗಳಿಗೆ ಅತ್ಯಾಧುನಿಕ ಹಾಗೂ ತ್ವರಿತ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಹಾವೇರಿ ಜಿಲ್ಲೆಯ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಹೊಸದೊಂದು ಮೈಲಿಗಲ್ಲು ನಿರ್ಮಾಣವಾಗುತ್ತಿದ್ದು, ಜು. 12ರಂದು ಇಲ್ಲಿನ `ಸರ್ಜಿ ರೇಣುಕಾ ದೇವಧರ ಆಸ್ಪತ್ರೆ''''ಯಲ್ಲಿ ಜಿಲ್ಲೆಯ ಮೊಟ್ಟಮೊದಲ ಅತ್ಯಾಧುನಿಕ ಕ್ಯಾತ್‌ಲ್ಯಾಬ್ ಸೌಲಭ್ಯ ಲೋಕಾರ್ಪಣೆಗೊಳಿಸಲಾಗುವುದು ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಮಧು ಕೆ.ಆರ್. ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಹೃದಯಾಘಾತ ಸೇರಿದಂತೆ ವಿವಿಧ ಹೃದಯ ಕಾಯಿಲೆಗಳಿಗೆ ಜಿಲ್ಲೆಯಲ್ಲಿಯೇ ತ್ವರಿತ ಹಾಗೂ ಗುಣಮಟ್ಟದ ಚಿಕಿತ್ಸೆ ದೊರೆಯಲಿದ್ದು, ರೋಗಿಗಳು ಹೊರ ಜಿಲ್ಲೆಗಳ ಅವಲಂಬನೆಯಿಂದ ಮುಕ್ತರಾಗಲಿದ್ದಾರೆ. ಹೃದಯಾಘಾತ ಸಂಭವಿಸಿದ ಬಳಿಕ ಮೊದಲ ಒಂದು ಗಂಟೆಯನ್ನು ವೈದ್ಯಕೀಯ ಕ್ಷೇತ್ರದಲ್ಲಿ `ಗೋಲ್ಡನ್ ಅವರ್'''''''' ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲೇ ಆಂಜಿಯೋಗ್ರಾಮ್ ಅಥವಾ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ದೊರೆತರೆ ರೋಗಿಯ ಜೀವ ಉಳಿಯುವ ಸಾಧ್ಯತೆ ಶೇ. 90ರಷ್ಟಿರುತ್ತದೆ ಎಂದರು.

ಇಲ್ಲಿಯವರೆಗೆ ಹಾವೇರಿ ಜಿಲ್ಲೆಯಲ್ಲಿ ಕ್ಯಾತ್‌ಲ್ಯಾಬ್ ಸೌಲಭ್ಯ ಇಲ್ಲದ ಕಾರಣ ಹೃದಯಾಘಾತಕ್ಕೊಳಗಾದ ರೋಗಿಗಳನ್ನು ಹುಬ್ಬಳ್ಳಿ ಅಥವಾ ದಾವಣಗೆರೆಗೆ ಸಾಗಿಸಬೇಕಾಗುತ್ತಿತ್ತು. ಈ ವೇಳೆ ಸಂಚಾರದ ವಿಳಂಬದಿಂದ ಗೋಲ್ಡನ್ ಅವರ್‌ನಲ್ಲಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಜಿಲ್ಲೆಯಲ್ಲಿ ನೂರಾರು ಅಮೂಲ್ಯ ಜೀವಗಳು ಮಾರ್ಗಮಧ್ಯೆಯೇ ಅಕಾಲಿಕವಾಗಿ ಮೃತಪಟ್ಟ ಅನೇಕ ಹೃದಯವಿದ್ರಾವಕ ನಿದರ್ಶನಗಳಿವೆ. ಈ ಕೊರತೆಯನ್ನು ನೀಗಿಸಲು ಮತ್ತು ಹಾವೇರಿಯ ಜನತೆಗೆ ಸ್ಥಳೀಯವಾಗಿಯೇ ಅತ್ಯಂತ ಕಡಿಮೆ ವೆಚ್ಚದಲ್ಲಿ ಶ್ರೇಷ್ಠ ದರ್ಜೆಯ ಹೃದಯ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲು ಈ ಕ್ಯಾತ್‌ಲ್ಯಾಬ್ ಸೇವೆ ಆರಂಭಿಸುತ್ತಿದ್ದೇವೆ. ಈ ಹೊಸ ಕ್ಯಾತ್‌ಲ್ಯಾಬ್ ಆರಂಭದಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದರು.

ಬದಲಾದ ಜೀವನಶೈಲಿ, ಮಾನಸಿಕ ಒತ್ತಡ ಹಾಗೂ ಆಹಾರ ಪದ್ಧತಿಯಿಂದಾಗಿ ಇತ್ತೀಚಿನ ದಿನಗಳಲ್ಲಿ 25ರಿಂದ 35 ವರ್ಷದ ಯುವ ಜನತೆಯಲ್ಲಿಯೂ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಹೃದಯ ಚಿಕಿತ್ಸೆಯಲ್ಲಿ `ಟೈಮ್ ಈಸ್ ಮಸಲ್'''' ಎಂಬ ತತ್ವ ಅತ್ಯಂತ ಮಹತ್ವದ್ದಾಗಿದ್ದು, ಪ್ರತಿ ನಿಮಿಷದ ವಿಳಂಬವೂ ಹೃದಯ ಸ್ನಾಯುಗಳ ಜೀವಕೋಶಗಳ ನಾಶಕ್ಕೆ ಕಾರಣವಾಗುತ್ತದೆ ಎಂದು ವಿವರಿಸಿದರು.

ಆಸ್ಪತ್ರೆಯಲ್ಲಿ ಆರಂಭವಾಗುತ್ತಿರುವ ಕ್ಯಾತ್ ಲ್ಯಾಬ್ 24 ಗಂಟೆಗಳ ತುರ್ತು ಸೇವೆಗೆ ಸಜ್ಜಾಗಿದ್ದು, ಹೃದ್ರೋಗ ತಜ್ಞ ಡಾ. ದೀಪಕ್ ಕುಮಾರ್ ಅವರ ನೇತೃತ್ವದಲ್ಲಿ ಆಂಜಿಯೋಗ್ರಾಮ್ ಹಾಗೂ ಆಂಜಿಯೋಪ್ಲಾಸ್ಟಿ ಸೇರಿದಂತೆ ಅತ್ಯಾಧುನಿಕ ಹೃದಯ ಚಿಕಿತ್ಸೆಗಳು ಲಭ್ಯವಾಗಲಿವೆ ಎಂದು ತಿಳಿಸಿದರು.


ಎಲ್ಲಕ್ಕಿಂತ ಮುಖ್ಯವಾಗಿ `ಗೋಲ್ಡನ್ ಅವರ್''''ನಲ್ಲಿಯೇ ಜೀವ ಉಳಿಸುವ ಮಹತ್ತರ ಕಾರ್ಯ ನಮ್ಮ ಹಾವೇರಿಯಲ್ಲಿಯೇ ಸಾಧ್ಯವಾಗಲಿದೆ. ದೂರದ ಊರುಗಳಿಗೆ ಪ್ರಯಾಣಿಸುವಾಗ ಗೋಲ್ಡನ್ ಅವರ್ ಮೀರಿ ಸಂಭವಿಸುತ್ತಿದ್ದ ದುರಂತಗಳಿಗೆ ಈ ಕ್ಯಾತ್ ಲ್ಯಾಬ್ ಮುಕ್ತಿ ನೀಡಲಿದೆ. ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವುದು ನಮ್ಮ ಉದ್ದೇಶವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಘವಾಂಕ ಎಚ್., ಡಾ. ದೀಪಕ್ ಕುಮಾರ್, ಪ್ರವೀಣಕುಮಾರ್ ವಿ.ಸಿ. ಹಾಗೂ ಗುಡ್ಡಪ್ಪ ಅಂಚಿ ಉಪಸ್ಥಿತರಿದ್ದರು.