ಬಳ್ಳಾರಿ: ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷಗಳಿಲ್ಲದ, ದೋಷಮುಕ್ತ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರೂ ಆದ ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಹೇಳಿದರು.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಸ್ವೀಪ್ ಸಮಿತಿಯಿಂದ ನಗರದ ನಂದಿ ಪಿಯು ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಎಸ್‌ಐಆರ್ ವಿಶೇಷ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಮುಂಬರುವ ಚುನಾವಣೆಗಳಲ್ಲಿ ಯುವಕರ ಪಾತ್ರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ‘ವಿಶೇಷ ಸಮಗ್ರ ಪರಿಷ್ಕರಣೆ'''''''' ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅರ್ಹತೆ ಪಡೆಯಲಿರುವ ಹೊಸ ಯುವ ಮತದಾರರನ್ನು ಗುರುತಿಸಿ ಪಟ್ಟಿಗೆ ಸೇರಿಸುವುದು. ಹಿಂದೆ ನಡೆದಿರುವಂತೆ ಒಬ್ಬರೇ ವ್ಯಕ್ತಿ ಹಲವು ಬಾರಿ ಮತದಾನ ಮಾಡುವುದು ಅಥವಾ ಮೃತಪಟ್ಟವರ ಹೆಸರಿನಲ್ಲಿ ಮತದಾನವಾಗುವುದನ್ನು ತಡೆಯಲು ಹಳೆಯ ಮತದಾರರ ವಿವರಗಳನ್ನು ಕಟ್ಟುನಿಟ್ಟಾಗಿ ಮರುಪರಿಶೀಲಿಸಲಾಗುತ್ತದೆ ಎಂದರು.

ಸದ್ಯದಲ್ಲೇ ಮತದಾನದ ವಯಸ್ಸನ್ನು ತಲುಪಲಿರುವ ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಪ್ರತಿ ಕಾಲೇಜಿನಲ್ಲೂ ‘ಮತದಾರರ ಸಾಕ್ಷರತಾ ಕ್ಲಬ್'''''''' ಅನ್ನು ಸ್ಥಾಪಿಸಲಾಗಿದೆ. ರಾಜಕೀಯ ವಿದ್ಯಮಾನಗಳು ಮತ್ತು ಚುನಾವಣಾ ಪ್ರಕ್ರಿಯೆಗಳಿಂದ ಯುವಕರು ದೂರ ಉಳಿಯಬಾರದು, ಬದಲಿಗೆ ಪ್ರಜಾಪ್ರಭುತ್ವದ ಸಕ್ರಿಯ ಪಾಲುದಾರರಾಗಬೇಕು ಎಂಬುದು ಈ ಕ್ಲಬ್‌ನ ಉದ್ದೇಶವಾಗಿದೆ ಎಂದು ತಿಳಿಸಿದರು.


ಜುಲೈ 29 ಕೊನೆಯ ದಿನ:

ಈ ವಿಶೇಷ ಪರಿಷ್ಕರಣಾ ಪ್ರಕ್ರಿಯೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಲು ಜುಲೈ 29 ಕೊನೆಯ ದಿನವಾಗಿದೆ. ನಿಗದಿತ ಅವಧಿಯೊಳಗೆ ಸಾರ್ವಜನಿಕರು ಅಥವಾ ಅವರ ಪೋಷಕರು ಈ ಫಾರ್ಮ್ ನ್ನು ಸಲ್ಲಿಸದಿದ್ದರೆ, ಅವರ ಹೆಸರನ್ನು ಮತದಾರರ ಪಟ್ಟಿಯಿಂದಲೇ ಕೈಬಿಡುವ ಸಾಧ್ಯತೆ ಇದೆ. ಹೆಸರು ಪಟ್ಟಿಯಿಂದ ಹೊರಬಿದ್ದರೆ ಮುಂಬರುವ ಚುನಾವಣೆಗಳಲ್ಲಿ ಮತದಾನದ ಹಕ್ಕನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.

ಒಂದು ವೇಳೆ ಬಿಎಲ್‌ಒ ನಿಮ್ಮ ಮನೆಗೆ ಭೇಟಿ ನೀಡದಿದ್ದರೆ, ಅವರಿಗಾಗಿ ಕಾಯುವ ಅಗತ್ಯವಿಲ್ಲ. ಚುನಾವಣಾ ಆಯೋಗದ ಅಧಿಕೃತ ಮೊಬೈಲ್ ಆ್ಯಪ್ "ಇಸಿಐ ನೆಟ್ " ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಂಡು, ಆನ್‌ಲೈನ್ ಮೂಲಕವೇ ಈ ಫಾರ್ಮ್ ಅನ್ನು ಸುಲಭವಾಗಿ ಸಲ್ಲಿಸಬಹುದು ಎಂದು ಹೇಳಿದರು.

ಜಿಪಂ ಉಪಕಾರ್ಯದರ್ಶಿ ಶಶಿಕಾಂತ್ ಶಿವಪುರೆ ಮಾತನಾಡಿ, ದೇಶದ ಪ್ರತಿ ನಾಗರಿಕನಿಗೂ ಮತದಾನದ ಹಕ್ಕು ಅತ್ಯಂತ ಪವಿತ್ರವಾದದ್ದು. ಈ ನಿಟ್ಟಿನಲ್ಲಿ ಅರ್ಹ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ಜುಲೈ 29 ರಿಂದ ಫಾರ್ಮ್ ನಂಬರ್ 6 ವಿತರಣೆ ಆರಂಭವಾಗಲಿದೆ. ಸಾರ್ವಜನಿಕರು ಇದನ್ನು ಪಡೆದು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಭಾರತೀಯ ನಾಗರಿಕರಾಗಿ ನಮ್ಮ ಹಕ್ಕನ್ನು ಚಲಾಯಿಸಲು ಮತದಾರರ ಗುರುತಿನ ಚೀಟಿ ಅತ್ಯಗತ್ಯ. ಹಾಗಾಗಿ ಯಾವುದೇ ಕಾರಣಕ್ಕೂ ನಿಮ್ಮ ಕುಟುಂಬದ ಅರ್ಹ ಸದಸ್ಯರ ಹೆಸರುಗಳು ಮತದಾರರ ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ಎಚ್ಚರ ವಹಿಸಿ, ಜುಲೈ 29ರಿಂದ ಆರಂಭವಾಗುವ ಈ ಪ್ರಕ್ರಿಯೆಯ ಸದುಪಯೋಗ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.

ಜಿಲ್ಲಾ ಮಟ್ಟದ ಮಾಸ್ಟರ್ ತರಬೇತುದಾರರಾದ ಶಿವಲಿಂಗ ರೆಡ್ಡಿ ಹಾಗೂ ಅಕ್ಕಿ ಮಲ್ಲಿಕಾರ್ಜುನ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಎಸ್‌ಐಆರ್ ಪ್ರಕ್ರಿಯೆ ಕುರಿತು ಸವಿವರವಾದ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹನುಮಂತರಾವ್, ನೋಡಲ್ ಅಧಿಕಾರಿ ಕೆ.ನಾಗೀರೆಡ್ಡಿ, ನಂದಿ ಪಿಯು ಕಾಲೇಜಿನ ಪ್ರಾಂಶುಪಾಲರುಗಳಾದ ಜಗದೀಶ್ ಬಾಬು, ಅನಿತಾ ಸೇರಿದಂತೆ ಕಾಲೇಜಿನ ಬೋಧಕ- ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.