ಹೊಸಪೇಟೆ: ಕನ್ನಡ ನಾಡಿನ ಸಂಗೀತವು ಕೇವಲ ರಾಜ್ಯದ ಗಡಿಗಳಿಗೆ ಸೀಮಿತವಾಗದೆ, ತನ್ನ ಐತಿಹಾಸಿಕ ಹಿನ್ನೆಲೆ, ಸಾಂಸ್ಕೃತಿಕ ವೈಶಿಷ್ಟ್ಯ, ಸಮೃದ್ಧ ಪರಂಪರೆ ಮೂಲಕ ವಿಶ್ವವ್ಯಾಪಿಯಾಗಿ ಪ್ರಭಾವ ಬೀರಿದೆ. ಈ ಪರಂಪರೆಯನ್ನು ದಾಖಲಿಸುವ ಭಾರತದಲ್ಲೇ ಸಂಗೀತಕ್ಕಾಗಿ ಮೀಸಲಾದ ಪ್ರಥಮ ಕನ್ನಡ ಸಂಗೀತ ವಿಶ್ವಕೋಶ ಶೀಘ್ರದಲ್ಲೇ ಪ್ರಕಟವಾಗಲಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಹೇಳಿದರು.ಕನ್ನಡ ವಿಶ್ವವಿದ್ಯಾಲಯದ ಬೆಂಗಳೂರಿನ ಪ್ರಾದೇಶಿಕ ಕಚೇರಿ ಹಾಗೂ ಪುಸ್ತಕ ಮಾರಾಟ ಮಳಿಗೆಯಲ್ಲಿ ಗುರುವಾರ ನಡೆದ ಕನ್ನಡ ಸಂಗೀತ ವಿಶ್ವಕೋಶದ ಕರಡು ಪರಿಶೀಲನಾ ಮತ್ತು ಸಂಪಾದನ ಮಂಡಳಿಯ ಸಭೆಯಲ್ಲಿ ಅವರು ಮಾತನಾಡಿದರು.

ಕನ್ನಡದ ಐತಿಹಾಸಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಂಗೀತ ಪರಂಪರೆಯ ಮಾಹಿತಿಯನ್ನು ಸಮಗ್ರವಾಗಿ ಸಂಗ್ರಹಿಸಿ, ಪರಿಷ್ಕರಿಸಿ ವಿಶ್ವಕೋಶ ರೂಪದಲ್ಲಿ ಸಿದ್ಧಪಡಿಸಲಾಗಿದೆ. ಸಂಗೀತಕ್ಕೆ ಮೀಸಲಾದ ಇಂತಹ ವಿಶ್ವಕೋಶವು ಭಾರತದಲ್ಲೇ ಮೊದಲ ಬಾರಿಗೆ ಪ್ರಕಟವಾಗುತ್ತಿರುವುದು ಕನ್ನಡ ಭಾಷೆ ಹಾಗೂ ಸಂಗೀತ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಂಗೀತ ವಿಶ್ವಕೋಶದ ಮುಖ್ಯ ಸಂಪಾದಕ ಡಾ.ಆರ್.ಎಸ್. ನಂದಕುಮಾರ್ ವಿಶ್ವಕೋಶದ ಕರಡು ಪ್ರತಿಯನ್ನು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರಿಗೆ ಅಧಿಕೃತವಾಗಿ ಸಲ್ಲಿಸಿದರು.

ಸಭೆಯಲ್ಲಿ ಸಂಪಾದನಾ ಮಂಡಳಿ ಸದಸ್ಯರಾದ ಎಸ್.ವಿ. ಮಠಪತಿ, ಡಾ. ರೋಹಿಣಿ ಸುಬ್ಬರತ್ನ, ಡಾ. ನಾಗರಾಜ್‌ರಾವ್ ಹವಾಲ್ದಾರ್, ಡಾ. ಕೃಷ್ಣಮೂರ್ತಿ ಭಟ್ಟ, ಸಂಗೀತ ಮತ್ತು ನೃತ್ಯಕಲಾ ವಿಭಾಗದ ಮುಖ್ಯಸ್ಥ ಡಾ. ವೀರೇಶ ಬಡಿಗೇರ, ಪ್ರಸಾರಾಂಗದ ಪ್ರಕಟಣಾ ಸಹಾಯಕರಾದ ಡಾ. ಎಸ್. ಮೋಹನ್ ಇದ್ದರು.

ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಪರಮಶಿವಮೂರ್ತಿ ಅವರಿಗೆ ಸಂಗೀತ ವಿಶ್ವಕೋಶದ ಮುಖ್ಯ ಸಂಪಾದಕ ಡಾ.ಆರ್.ಎಸ್. ನಂದಕುಮಾರ್ ವಿಶ್ವಕೋಶದ ಕರಡು ಪ್ರತಿ ವಿತರಿಸಿದರು.