ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಅವಧೂತ ದತ್ತಪೀಠದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.14ರ ಬೆಳಗ್ಗೆ 9ಕ್ಕೆ ಹನುಮಾನ್ ಚಾಲೀಸ ಪಾರಾಯಣ, ಸಂಜೆ ಕನ್ನಡ ದಿವ್ಯ ನಾಮ ಸಂಕರ್ತಪನ ಆಯೋಜಿಸಲಾಗಿದೆ. ಸಾಮೂಹಿಕ ಪಾರಾಯಣಕ್ಕಾಗಿ ಸುಮಾರು 30 ಸಾವಿರ ಮಂದಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಸುಮಾರು 45 ಸಾವಿರ ಮಂದಿಗೆ ಪ್ರಸಾದದ ವ್ಯವಸ್ಥೆ ಮಾಡಿದ್ದು, ಭಾಗವಹಿಸಿದವರೆಲ್ಲರಿಗೂ ಹನುಮ ರಕ್ಷೆ ವಿತರಿಸಲಾಗುವುದು ಎಂದರು.
ಈ ವಿಶೇಷ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಒಗ್ಗೂಡಿ ಹನುಮಾನ್ ಚಾಲೀಸ ಪಾರಾಯಣ ಮಾಡಲಿದ್ದಾರೆ. ತುಳಸೀದಾಸರು ರಚಿಸಿರುವ ಹನುಮಾನ್ ಚಾಲೀಸ ಅತ್ಯಂತ ಪವಿತ್ರವಾದದ್ದು ಹಾಗೂ ಸುಂದರಕಾಂಡ ಮತ್ತು ಸಂಪೂರ್ಣ ರಾಮಾಯಣದ ಸಾರವನ್ನು ಒಳಗೊಂಡಿದೆ ಎಂದರು.ಈ ಹಿಂದೆ ತೆನಾಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷದಷ್ಟು ಭಕ್ತರು ಪಾಲ್ಗೊಂಡು ವಿಶ್ವ ದಾಖಲೆ ನಿರ್ಮಿಸಿದ್ದರು. ಹನುಮಾನ್ ಚಾಲೀಸ ಎಂದರೆ ಚಿಕ್ಕವರಿಂದ ದೊಡ್ಡವರವರೆಗೂ ಎಲ್ಲರೂ ಹಾಡಬಹುದಾದ ಸುಲಭ ಹಾಗೂ ಶಕ್ತಿಶಾಲಿ ಸ್ತೋತ್ರ. ಹನುಮಂತನು ರಕ್ಷಕನಾಗಿದ್ದು, ಕಷ್ಟದ ಸಮಯದಲ್ಲಿ ನಮ್ಮನ್ನು ಕಾಪಾಡುತ್ತಾನೆ. ಲೋಕ ಕಲ್ಯಾಣಕ್ಕಾಗಿ ಮತ್ತು ಜಗತ್ತಿನ ಒಳಿತಿಗಾಗಿ ಈ ಸಾಮೂಹಿಕ ಪ್ರಾರ್ಥನೆ ಆಯೋಜಿಸಲಾಗಿದೆ ಎಂದರು.
ಫೆ.15ರಂದು ಶಿವರಾತ್ರಿ ಹಬ್ಬವಿರುವುದು ಈ ಕಾರ್ಯಕ್ರಮದ ವಿಶೇಷತೆಯನ್ನು ಹೆಚ್ಚಿಸಿದೆ. ಹನುಮಂತನು ಶಿವನ ಅಂಶ ಹಾಗೂ ರಾಮನ ಪ್ರಿಯ ಭಕ್ತನಾಗಿದ್ದು, ಈ ಸಂದರ್ಭದಲ್ಲಿ ಹನುಮಾನ್ ಚಾಲೀಸ ಪಾರಾಯಣ ಮಾಡುವುದು ಅತ್ಯಂತ ಫಲಪ್ರದ ಎಂದರು.
ಫೆ.14 ದಿನದಂದೇ ಹನುಮಾನ್ ಚಾಲೀಸ ಪಾರಾಯಣ ಮಹಾಯಜ್ಞಕ್ಕೆ ಏಕೆ ಆದ್ಯತೆ ನೀಡಿದ್ದೇವೆ ಎಂದರೆ ಆ ದಿನ ಸೀತಾ- ರಾಮರು ಒಂದಾದ ದಿನ. ಹೀಗಾಗಿ, ಆ ದಿನವನ್ನು ಆಯ್ಕೆ ಮಾಡಲಾಗಿದೆ. ಹನುಮಾನ್ ಚಾಲೀಸ ಸಂದರ್ಭದಲ್ಲಿ ಪ್ರತಿಯೊಬ್ಬ ಭಕ್ತರಿಗೂ ಅಂದು ಪ್ರಸಾದ ವಿನಿಯೋಗವನ್ನು ಸಹ ಏರ್ಪಡಿಸಿದ್ದೇವೆ. ಈ ಮಹಾಯಜ್ಞಕ್ಕೆ ನಮ್ಮೊಂದಿಗೆ ಮೈಸೂರಿನ ಹಲವಾರು ಸಂಘ ಸಂಸ್ಥೆಗಳು ಸಹ ಕೈಜೋಡಿಸಿವೆ ಎಂದರು.
- ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಅವಧೂತ ದತ್ತಪೀಠ