
ಕನ್ನಡಪ್ರಭ ವಾರ್ತೆ, ತುಮಕೂರು
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿ,ಇರುವ ಅತಿ ಕಡಿಮೆ ಭೂಮಿಯನ್ನು ಬೇಡಿಕೆ ಇರುವ ಜನರಿಗೆ ಹಂಚಲು ಸರಕಾರಗಳು ಎಲ್ಲಾ ನಿಯಮಗಳನ್ನು ಗಾಳಿಗೆ ತೂರುತ್ತಿರುವ ಪರಿಣಾಮ ಸರಕಾರದ ಯೋಜನೆಗಳಿಗೂ ಭೂಮಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.ಹಾಗಾಗಿ ಭೂ ಬಳಕೆ ಮತ್ತು ಭೂ ಹೊದಿಕೆ ನಿಯಮ ಜಾರಿಗೆ ತಂದು, ಭೂಮಿ ಮಾಫಿಯಾ ಪಾಲಾಗದಂತೆ ತಡೆ ಹಿಡಿಯಬೇಕಿದೆ ಎಂದು ಹೇಳಿದರು.
ಸರ್ಕಾರದ ಮುಂದೆ ಬಗರ್‌ಹುಕುಂ ಸಾಗುವಳಿದಾರರ ಲಕ್ಷಾಂತರ ಅರ್ಜಿಗಳು ಬಾಕಿ ಉಳಿದಿವೆ. ಆದರೆ ಸರ್ಕಾರ ಮಾತ್ರ ರಸ್ತೆ, ಇನ್ನಿತರ ಯೋಜನೆಗಳ ಹೆಸರಿನಲ್ಲಿ ಪಟ್ಟಭದ್ರರಿಗೆ ಭೂಮಿ ನೀಡುತ್ತಾ, ಬಡವರನ್ನು ಕಡೆಗಣಿಸುತ್ತಿದೆ. ಜೊತೆಗೆ ರೈತರ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಂಡು ರೈತರನ್ನು ಬೀದಿಗೆ ತಳ್ಳುತ್ತಿದೆ. ಗ್ರಾಮಸಭೆಗಳನ್ನು ನಡೆಸದೆ, ರೈತರೊಂದಿಗೆ ಚರ್ಚಿಸದೆ ತನ್ನ ಮನಸ್ಸಿಗೆ ಬಂದಂತೆ ಭೂಮಿ ಹರಾಜು ಹಾಕಲು ಹೊರಟಿದೆ. ಸರ್ಕಾರದ ನೀತಿ ಹೀಗೆಯೇ ಮುಂದುವರಿದರೆ ರೈತರು ಒಗ್ಗೂಡಿ ಅಸಹಕಾರ ಚಳವಳಿ ನಡೆಸುವುದು ಅನಿವಾರ್ಯ ಎಂದು ಅವರು ಹೇಳಿದರು.ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ನಂದಿಹಳ್ಳಿ, ಮಲ್ಲಸಂದ್ರ, ವಸಂತ ನರಸಾಪುರ ಪ್ರಸ್ತಾಪಿತ ೪೪ ಕಿ.ಮಿ.ಗಳ ರಿಂಗ್ ರಸ್ತೆಗೆ ಸುಮಾರು 26 ಹಳ್ಳಿಗಳ 750ಕ್ಕೂ ಹೆಚ್ಚು ರೈತರ 765 ಎಕರೆ ಭೂಮಿ ವಶಪಡಿಸಿಕೊಳ್ಳಲು ಎನ್.ಎಚ್.ಎ.ಐ ಮುಂದಾಗಿದೆ. ಪ್ರಸ್ತಾಪಿತ ಭೂಮಿಯಲ್ಲಿ ಶೇ.70ರಷ್ಟು ಭೂಮಿಯಲ್ಲಿ ಅಡಿಕೆ, ತೆಂಗು, ಇನ್ನಿತರ ತೋಟಗಾರಿಕಾ ಬೆಳೆಗಳಿವೆ. ಆದರೆ ಪಹಣಿಯಲ್ಲಿ ಋಷ್ಕಿ ಎಂದು ತೋರಿಸಲಾಗಿದೆ. ಈ ಬಗ್ಗೆ ಹಲವು ಬಾರಿ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳು, ಶಾಸಕರಿಗೆ ಮನವಿ ಮಾಡಿದರೂ ಎನೂ ಪ್ರಯೋಜನವಾಗಿಲ್ಲ. ಸರ್ಕಾರ ಹೀಗೆಯೇ ಯೋಜನೆಗಳ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿ ವಶಪಡಿಸಿಕೊಳ್ಳತ್ತಲೇ ಮುಂದುವರಿದರೆ ಶೀಘ್ರ ಆಹಾರದ ಕೊರತೆ ಎದುರಾಗುವುದು ಖಂಡಿತ. ಅಲ್ಲದೆ ಜನ, ಜಾನುವಾರುಗಳಿಗೂ ತೀವ್ರ ತೊಂದರೆಯಾಗಲಿದೆ. ಹಾಗಾಗಿ ಇದರ ವಿರುದ್ಧ ಮತ್ತೊಂದು ಸುತ್ತಿನ ಹೋರಾಟ ರೂಪಿಸಲು ಫೆ.೮ರಂದು ಶೂಲದ ಆಂಜನೇಯಸ್ವಾಮೀ ದೇವಾಲಯದ ಬಳಿ ರೈತರ ಸಮಾವೇಶ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಪ್ರಸ್ತಾಪಿತ ಔಟರ್ ರಿಂಗ್ ರಸ್ತೆಗೆ ಪರ್ಯಾಯವಾಗಿ ಹಲವು ವರ್ಷಗಳ ಹಿಂದೆಯೇ ಗುಬ್ಬಿಯಿಂದ ದಾಬಸ್‌ಪೇಟೆಯವರೆ 100 ಅಡಿಗಳ ನಕಾಶೆ ರಸ್ತೆ ಇದೆ. ಅಲ್ಲದೆ ಹಾಲಿ ಇರುವ ರಿಂಗ್ ರಸ್ತೆಯನ್ನೇ ಆಗಲೀಕರಣ ಮಾಡಿ ಅಭಿವೃದ್ದಿ ಪಡಿಸಬಹುದಾಗಿದೆ. ಅದರ ಬಗ್ಗೆ ಯಾರು ಗಮನಹರಿಸುತ್ತಿಲ್ಲ. ಬದಲಾಗಿ ರಿಯಲ್ ಎಸ್ಟೇಟ್ ಕುಳಗಳಿಗೆ ಅನುಕೂಲವಾಗುವಂತೆ ರಸ್ತೆಯ ಅಲೈನ್ ಬದಲಾಯಿಸಿ, ರೈತರ ಫಲವತ್ತಾದ ಭೂಮಿ ಗುರಿಯಾಗಿಸಲಾಗಿದೆ. ಹಾಗಾಗಿ ಫೆ.8ರ ರೈತರ ಸಮಾವೇಶದಲ್ಲಿ ಚರ್ಚಿಸಿ, ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಗುವುದು. ಏಕತಾ ಪರಿಷತ್ತಿನ ಹಿರಿಯರಾದ ಪಿ.ವಿ. ರಾಜಗೋಪಾಲ್, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರು, ಶಾಸಕ ಬಿ.ಆರ್. ಪಾಟೀಲ್, ಸಹಜ ಬೇಸಾಯ ರಾಷ್ಟ್ರೀಯ ಸಮಿತಿ ಸದಸ್ಯ ಡಾ. ಎಚ್.ಮಂಜುನಾಥ್, ಚಿಂತಕ ಕೆ. ದೊರೈರಾಜು, ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಗೋವಿಂದರಾಜು, ಪ್ರಾಂತ ರೈತ ಸಂಘದ ಯಶವಂತ್, ಎಐಕೆಕೆಎಂ.ಎಸ್‌ನ ಸ್ವಾಮಿ, ಎಐಕೆಎಸ್‌ನ ಕಂಬೇಗೌಡ ಸೇರಿ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷರಾದ ಚಿಕ್ಕಬೋರೇಗೌಡ, ಎಐಕೆಎಸ್‌ನ ಕಂಬೇಗೌಡ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ. ಶಂಕರಪ್ಪ, ಸಿಐಟಿಯುನ ಎನ್.ಕೆ. ಸುಬ್ರಮಣ್ಯ, ರೈತರಾದ ಉದಯ ನಂದಿಹಳ್ಳಿ, ಸಿದ್ದಗಂಗಯ್ಯ, ಸುರೇಶ್, ರಾಜಶೇಖರ್, ನಿಂಗರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.