ಸಂಸ್ಕೃತಿ ಮತ್ತು ಕಲೆಯ ತವರೂರಾದ ಜಗಳೂರು ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ಇತಿಹಾಸ ಸೃಷ್ಟಿಸುವಂತಹ ಕಲಾ ಸಂಭ್ರಮಕ್ಕೆ ವೇದಿಕೆ ಸಿದ್ಧವಾಗಿದೆ. ಪಟ್ಟಣದ ಬಯಲು ರಂಗಮಂದಿರದ ಆವರಣದಲ್ಲಿ ಮೇ 30 ಮತ್ತು 31ರಂದು ಕರ್ನಾಟಕ ರಾಜ್ಯ ಕಲಾವಿದರ ಬೃಹತ್ ಸಾಂಸ್ಕೃತಿಕ ಶಕ್ತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಲಾವಿದರ ಒಕ್ಕೂಟದ ರಾಜ್ಯಾಧ್ಯಕ್ಷ ರಾ.ವೀರೇಶ ಪ್ರಸಾದ್ (ಗುಬ್ಬಿ ವೀರಣ್ಣ) ತಿಳಿಸಿದ್ದಾರೆ.
ಸಂಸ್ಕೃತಿ ಮತ್ತು ಕಲೆಯ ತವರೂರಾದ ಜಗಳೂರು ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ಇತಿಹಾಸ ಸೃಷ್ಟಿಸುವಂತಹ ಕಲಾ ಸಂಭ್ರಮಕ್ಕೆ ವೇದಿಕೆ ಸಿದ್ಧವಾಗಿದೆ. ಪಟ್ಟಣದ ಬಯಲು ರಂಗಮಂದಿರದ ಆವರಣದಲ್ಲಿ ಮೇ 30 ಮತ್ತು 31ರಂದು ಕರ್ನಾಟಕ ರಾಜ್ಯ ಕಲಾವಿದರ ಬೃಹತ್ ಸಾಂಸ್ಕೃತಿಕ ಶಕ್ತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಲಾವಿದರ ಒಕ್ಕೂಟದ ರಾಜ್ಯಾಧ್ಯಕ್ಷ ರಾ.ವೀರೇಶ ಪ್ರಸಾದ್ (ಗುಬ್ಬಿ ವೀರಣ್ಣ) ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಲಾವಿದರ ಒಕ್ಕೂಟದ ಸಹಯೋಗದಲ್ಲಿ ಸಮಾವೇಶ ನಡೆಯುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ 10 ಸಾವಿರಕ್ಕೂ ಹೆಚ್ಚು ಕಲಾವಿದರು ಹಾಗೂ ಕಲಾಭಿಮಾನಿಗಳು ಭಾಗವಹಿಸಲಿದ್ದಾರೆ ಎಂದರು.
ಉದ್ಘಾಟನೆ:
ಸಮಾವೇಶಕ್ಕೆ ಹೊಸಪೇಟೆ ಇಷ್ಟಿಗೇರಿ ಮಠದ ಮಾತೋಶ್ರೀ ಅನುರಾಧೇಶ್ವರಿ ಅಮ್ಮನವರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್. ತಂಗಡಿಗಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಬಿರುದು ಪ್ರದಾನ ಮಾಡಲಿದ್ದಾರೆ. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಪ್ರಶಸ್ತಿ ವಿತರಣೆ ಮಾಡಲಿದ್ದಾರೆ. ಜಗಳೂರು ಕ್ಷೇತ್ರ ಶಾಸಕ ಬಿ.ದೇವೇಂದ್ರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಹಾಗೂ ಚಿತ್ರನಟ ನಿಖಿಲ್ ಕುಮಾರಸ್ವಾಮಿ ಕಲಾವಿದರಿಗೆ ಬಿರುದು ಪ್ರದಾನ ಮಾಡಲಿದ್ದು, ಮಾಜಿ ಶಾಸಕ ಕೃಷ್ಣಾರೆಡ್ಡಿ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದರು.
21 ಸಾಧಕರಿಗೆ ರಾಜ್ಯಮಟ್ಟದ ಗೌರವ:
ಸಮಾವೇಶದ ಪ್ರಮುಖ ಆಕರ್ಷಣೆಯಾಗಿ ವಿವಿಧ ಕ್ಷೇತ್ರಗಳ 21 ಜನ ಸಾಧಕರಿಗೆ ರಾಜ್ಯಮಟ್ಟದ ''''ಕರ್ನಾಟಕ ಜನಪದ ಪದ್ಮಶ್ರೀ'''', ''''''''ಕರ್ನಾಟಕ ರಂಗ ಪದ್ಮಶ್ರೀ'''' ಹಾಗೂ ''''ಕರ್ನಾಟಕ ಚಿತ್ರ ಪದ್ಮಶ್ರೀ'''' ಬಿರುದುಗಳ ನೀಡಿ ಗೌರವಿಸಲಾಗುವುದು. ಅಲ್ಲದೇ, ಸಮಾವೇಶದಲ್ಲಿ ಭಾಗವಹಿಸುವ ಎಲ್ಲ ಕಲಾವಿದರು ಹಾಗೂ ಕಲಾ ತಂಡಗಳಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಗುವುದು ಎಂದು ಒಕ್ಕೂಟದ ಪ್ರಮುಖರು ತಿಳಿಸಿದರು.
30ರಂದು ಜನಪದ ಕಲಾ ಮೆರವಣಿಗೆ:
ಒಕ್ಕೂಟದ ಜಿಲ್ಲಾಧ್ಯಕ್ಷ ಮರೇನಹಳ್ಳಿ ಕುಮಾರ್ ಮಾತನಾಡಿ, ಮೇ 30ರಂದು ಬೆಳಗ್ಗೆ 10.30 ಗಂಟೆಗೆ ಪಟ್ಟಣದ ದಾವಣಗೆರೆ ರಸ್ತೆಯ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ''''ಜನಪದ ಕಲಾಯಾತ್ರೆ''''ಗೆ ಚಾಲನೆ ನೀಡಲಾಗುವುದು. ಭವ್ಯ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸುವ ಭಜನಾ ತಂಡ, ನಂದಿಧ್ವಜ, ಚಿಟ್ಟಿಮೇಳ ವೀರಗಾಸೆ, ಕಹಳೆ, ಮ್ಯಾಸಿಕ್ ಡೊಳ್ಳು ಕುಣಿತ, ಕಂಸಾಳೆ, ಸೋಮನ ಕುಣಿತ, ಅರೆವಾದ್ಯ ಹಾಗೂ ಡೊಳ್ಳು ಸೋಬಾನಪದ ಸೇರಿದಂತೆ ನೂರಾರು ಜನಪದ ಕಲಾತಂಡಗಳು ಭಾಗವಹಿಸಿ ಸಾಂಸ್ಕೃತಿಕ ವೈಭವ ಅನಾವರಣಗೊಳಿಸಲಿವೆ. ಮೆರವಣಿಗೆಯ ನಂತರ ವೇದಿಕೆಯಲ್ಲಿ ಕಲಾವಿದರ ಬಾವುಟದ ಧ್ವಜಾರೋಹಣ ನೆರವೇರಲಿದೆ.
ಅತಿಥಿಗಳ ಮಹಾಪೂರ:
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಎಚ್.ಪಿ. ರಾಜೇಶ್, ಚಲನಚಿತ್ರ ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್, ನಿರ್ದೇಶಕ ವಿಷ್ಣುಪ್ರಿಯ, ತುಮಕೂರು ಜಿ.ವಿ. ವಾಸುದೇವ್, ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್, ಹರಿಹರ ಶಾಸಕ ಬಿ.ಪಿ. ಹರೀಶ್, ಹೊನ್ನಾಳಿ ಶಾಸಕ ಶಾಂತನಗೌಡ, ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ಚನ್ನಗಿರಿ ಶಾಸಕ ಬಸವರಾಜ ಶಿವಗಂಗ, ದಾವಣಗೆರೆ ದಕ್ಷಿಣ ಶಾಸಕ ಸಮರ್ಥ್ ಸೇರಿದಂತೆ ಸಾಂಸ್ಕೃತಿಕ ಹಾಗೂ ರಾಜಕೀಯ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಲಾವಿದರ ಒಕ್ಕೂಟದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸುಮಾ, ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರತ್ನ, ರಾಜ್ಯ ಸಂಘಟನಾ ಕಾರ್ಯದರ್ಶಿ ವೃಷಭೇಂದ್ರ, ಜಿಲ್ಲಾ ಕಾರ್ಯದರ್ಶಿ ಬಸವರಾಜ್, ಶಿರಾ ತಾಲೂಕಾಧ್ಯಕ್ಷ ಬೊಮ್ಮೆಗೌಡ, ಮಹಿಳಾ ಘಟಕದ ಜಿಲ್ಲಾ ಕಾರ್ಯದರ್ಶಿ ಭಾರತಿ, ತಾಲೂಕಾಧ್ಯಕ್ಷೆ ಶಾರದಮ್ಮ, ಯುವ ಘಟಕದ ಜಿಲ್ಲಾಧ್ಯಕ್ಷ ಸಂದೀಪ್, ಪದಾಧಿಕಾರಿಗಳು ಉಪಸ್ಥಿತರಿದ್ದರು.
- - -
-28ಜೆ.ಜಿ.ಎಲ್.1:
ಜಗಳೂರು ಪಟ್ಟಣದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಲಾವಿದರ ಒಕ್ಕೂಟ ರಾಜ್ಯಾಧ್ಯಕ್ಷ ರಾ.ವೀರೇಶ ಪ್ರಸಾದ್ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.