ಮಂಗಳೂರು ವಿವಿ ಸಮಸ್ಯೆಗಳ ವಿರುದ್ಧ ವಿದ್ಯಾರ್ಥಿ ಸಮೂಹ ಬೃಹತ್‌ ಪ್ರತಿಭಟನೆ

KannadaprabhaNewsNetwork |  
Published : Nov 16, 2024, 12:30 AM IST
111 | Kannada Prabha

ಸಾರಾಂಶ

ಕೊಣಾಜೆ ಠಾಣೆ ಪೊಲೀಸರ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ. ಸಾವಿರಾರು ವಿದ್ಯಾರ್ಥಿಗಳು ನುಗ್ಗಿದರೂ ಐದಾರು ಪೊಲೀಸರಿಂದ ಭದ್ರತೆಯಿಂದ ಲೋಪ ನಡೆದಿದೆ. ಹೆಚ್ಚುವರಿ ಪೊಲೀಸ್ ಭದ್ರತೆ ನಿಯೋಜಿಸದೆ ಕೊಣಾಜೆ ಪೊಲೀಸರು ವೈಫಲ್ಯವೆಸಗಿದ್ದಾರೆ. ಪೊಲೀಸರ ಲಾಠಿ ತಾಗಿ ಗಾಜು ಒಡೆದಿರುವುದಾಗಿ ವಿದ್ಯಾರ್ಥಿಗಳು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಉಳ್ಳಾಲ

ಮಂಗಳೂರು ವಿಶ್ವ ವಿದ್ಯಾನಿಲಯದ ವಿರುದ್ಧ ವಿದ್ಯಾರ್ಥಿ ಸಮೂಹ ಸಿಡಿದೆದ್ದಿದೆ. ಅಂಕಪಟ್ಟಿಯ ಸಮಸ್ಯೆ, ಅವೈಜ್ಞಾನಿಕ ಕಾಲೇಜು ಶುಲ್ಕಗಳ ಹೆಚ್ಚಳ, ಪರೀಕ್ಷಾ ಶುಲ್ಕ ಹೆಚ್ಚಳ ಯುಯುಸಿಎಂಎಸ್‌ನಲ್ಲಿರುವ ಗೊಂದಲಗಳು ಮತ್ತು ವಿಶ್ವವಿದ್ಯಾನಿಲಯದಲ್ಲಿರುವ ಹಲವು ಸಮಸ್ಯೆಗಳನ್ನು ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ಕೊಣಾಜೆ ಮಂಗಳಗಂಗೋತ್ರಿಯ ಆಡಳಿತ ಕಚೇರಿ ಎದುರುಗಡೆ ಬೃಹತ್ ಪ್ರತಿಭಟನೆ ನಡೆಯಿತು.

ಜಿಲ್ಲೆಯ ವಿವಿಧ ಕಾಲೇಜಿನಿಂದ ಪ್ರತಿಭಟನೆಗೆ ಆಗಮಿಸಿದ ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು. ಬಸ್ ಮೂಲಕ ತಂಡೋಪತಂಡವಾಗಿ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ವಿವಿ ಆಡಳಿತ ಕಚೇರಿ ಬಳಿ ಬ್ಯಾರಿಕೇಡ್ ಹಾಕಿ ತಡೆಹಿಡಿಯಲಾಗಿತ್ತು. ಆರಂಭದಲ್ಲಿ ಕಚೇರಿ ಎದುರಿನ ರಸ್ತೆಯಲ್ಲಿ ಘೋಷಣೆಗಳನ್ನು ಕೂಗಿದರು. ಬಳಿಕ ಬ್ಯಾರಿಕೇಡ್ ತಳ್ಳಿ ಒಳ ನುಗ್ಗಿದ ಪ್ರತಿಭಟನಾಕಾರರು ಆಡಳಿತ ಕಚೇರಿಯ ಒಳಗೆ ನುಗ್ಗಲು ಯತ್ನಿಸಿದ್ದಾರೆ. ಈ ಸಂದರ್ಭ ವಿದ್ಯಾರ್ಥಿಗಳು ಒಳ ಹೋಗದಂತೆ ಪೊಲೀಸರು ತಡೆಯೊಡ್ಡಿದರು. ನೂಕಾಟ ತಳ್ಳಾಟದಿಂದ ವಿ.ವಿ ಆಡಳಿತ ಕಚೇರಿಯ ಪ್ರವೇಶ ದ್ವಾರದ ಗಾಜು ಪುಡಿಯಾಗಿದೆ, ಓರ್ವ ಮಹಿಳಾ ಪೊಲೀಸ್ ಪೇದಗೆ ಗಾಯವಾಗಿದೆ. ಪೊಲೀಸ್ ಸಿಬ್ಬಂದಿಯ ಕೈಗೆ ಗಾಜಿನ ತುಂಡು ತಗುಲಿ ಗಾಯವಾಗಿದೆ. ಇದೇ ವೇಳೆ ಓರ್ವ ವಿದ್ಯಾರ್ಥಿ ಕೈಗೂ ತಾಗಿದೆ.

ಉಪಕುಲಪತಿ ಅಸಮಾಧಾನ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವಿ.ವಿ. ಉಪಕುಲಪತಿ ಪಿ.ಎಲ್. ಧರ್ಮ ಆಕ್ರೋಶ ವ್ಯಕ್ತಪಡಿಸಿ, ಕಾಲೇಜಿನ ಸ್ವತ್ತಿಗೆ ಹಾನಿ ಎಸಗಿರೋದು ಒಳ್ಳೆಯ ನಡೆ ಅಲ್ಲ . ಇಂಥಹ ಪ್ರವೃತ್ತಿಯನ್ನು ನಾವು ಯಾವುದೇ ಕಾರಣಕ್ಕೆ ಸಹಿಸುವುದಿಲ್ಲ. ಶಾಂತಿಯುತ ಪ್ರತಿಭಟನೆ ಹೆಸರಲ್ಲಿ ಇಂಥದ್ದು ಮಾಡಬೇಡಿ ಅಂತ ಅಸಮಾಧಾನ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಮನವಿ ಸ್ವೀಕರಿಸಿದ ಉಪಕುಲಪತಿ ಬಳಿಕ ವಿದ್ಯಾರ್ಥಿಗಳಿಗೆ ವಿವಿ ಸಮಸ್ಯೆ ಬಗ್ಗೆ ವಿವರಣೆಯನ್ನು ನೀಡಿದರು. ಬಳಿಕ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿಸುವುದಾಗಿ ಹೇಳಿದ್ದಾರೆ. ಸಂಜೆಯೊಳಗೆ ನಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ವಿದ್ಯಾರ್ಥಿಗಳು ಎಚ್ಚರಿಸಿದರು. ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ಸಂಜೆಯೊಳಗೆ ನಿರ್ಧಾರ ಹೇಳುವುದಾಗಿ ತೆರಳಿದ ಉಪಕುಲಪತಿಗಳ ನಡೆಯನ್ನು ಒಪ್ಪದ ವಿದ್ಯಾರ್ಥಿಗಳು ಹೋರಾಟವನ್ನು ಮುಂದುವರಿಸಿದರು. ಆಗ ಎ.ಸಿ.ಪಿ ಧನ್ಯನಾಯಕ್ ಮಧ್ಯಪ್ರವೇಶಿಸಿದ್ದಾರೆ. ಕೊನೆಗೆ ಸಿಂಡಿಕೇಟ್ ಸದಸ್ಯರ ಜೊತೆಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪಿ.ಎಲ್ ಧರ್ಮ., ಇದೇ ಶನಿವಾರ ವಿ.ವಿ ರಿಜಿಸ್ಟ್ರಾರ್ ಅವರನ್ನು ಬೆಂಗಳೂರಿಗೆ ಕಳುಹಿಸಿಕೊಡುವ ಭರವಸೆಯನ್ನು ನೀಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಕೈ ಬಿಟ್ಟಿದ್ದಾರೆ.

ಕೊಣಾಜೆ ಠಾಣೆ ಪೊಲೀಸರ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ. ಸಾವಿರಾರು ವಿದ್ಯಾರ್ಥಿಗಳು ನುಗ್ಗಿದರೂ ಐದಾರು ಪೊಲೀಸರಿಂದ ಭದ್ರತೆಯಿಂದ ಲೋಪ ನಡೆದಿದೆ. ಹೆಚ್ಚುವರಿ ಪೊಲೀಸ್ ಭದ್ರತೆ ನಿಯೋಜಿಸದೆ ಕೊಣಾಜೆ ಪೊಲೀಸರು ವೈಫಲ್ಯವೆಸಗಿದ್ದಾರೆ. ಪೊಲೀಸರ ಲಾಠಿ ತಾಗಿ ಗಾಜು ಒಡೆದಿರುವುದಾಗಿ ವಿದ್ಯಾರ್ಥಿಗಳು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು