ಆಟಿಕೆ, ಸನ್ನೆ ಮೂಲಕ ಕನ್ನಡ ಕಲಿಸುವ ಮೇಸ್ಟ್ರು

KannadaprabhaNewsNetwork |  
Published : Nov 28, 2025, 02:06 AM IST
Kannada

ಸಾರಾಂಶ

ಕನ್ನಡ ಕಲಿಕೆ ಕಠಿಣವಾಗಿದ್ದ ಹೃದಯದಲ್ಲಿ ವಿನೂತನ, ಸರಳ-ಸುಲಭ ಶೈಲಿಯ ಕಲಿಕೆ ಮುಖಾಂತರ ಕನ್ನಡದ ಭಾಷಾ ಬೀಜವನ್ನು ಬಿತ್ತಿ ಸೈ ಎನಿಸಿಕೊಂಡಿದ್ದಾರೆ ನಿವೃತ್ತ ಶಿಕ್ಷಕ ಸೈಯದ್ ಗೌಸ್ ಮೊಹಿಯುದ್ದೀನ್ ಪೀರಜಾದೆ.

ರಾಮಕೃಷ್ಣ ದಾಸರಿ

 ರಾಯಚೂರು :  ಕನ್ನಡ ಕಲಿಕೆ ಕಠಿಣವಾಗಿದ್ದ ಹೃದಯದಲ್ಲಿ ವಿನೂತನ, ಸರಳ-ಸುಲಭ ಶೈಲಿಯ ಕಲಿಕೆ ಮುಖಾಂತರ ಕನ್ನಡದ ಭಾಷಾ ಬೀಜವನ್ನು ಬಿತ್ತಿ ಸೈ ಎನಿಸಿಕೊಂಡಿದ್ದಾರೆ ನಿವೃತ್ತ ಶಿಕ್ಷಕ ಸೈಯದ್ ಗೌಸ್ ಮೊಹಿಯುದ್ದೀನ್ ಪೀರಜಾದೆ.

ರಾಯಚೂರು ನಗರ ನಿವಾಸಿಯಾಗಿರುವ ಗೌಸ್ ಮೊಹಿಯುದ್ದೀನ್ ಅವರು ಅಪರೂಪದ ಕನ್ನಡ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸರ್ಕಾರಿ ಉರ್ದು ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ದುಡಿದು, ನಿವೃತ್ತಿಯ ಬಳಿಕವೂ ಕನ್ನಡ ಬಾರದವರಿಗೆ ಕನ್ನಡ ಭಾಷೆಯ ಕಲಿಕೆಯನ್ನು ಮುಂದುವರಿಸಿದ್ದಾರೆ. ತಾವೇ ತಯಾರಿಸಿದ ಆಟಿಕೆ (ಪೀಠೋಪಕರಣ), ಕಲಿಕಾ ಸಾಮಗ್ರಿ ಹಾಗೂ ಸನ್ನೆ ಬರಹ ಬೋಧನೆ ಮೂಲಕ ಕನ್ನಡವನ್ನು ಕಲಿಸುತ್ತಿದ್ದಾರೆ.

ಕನ್ನಡ ಕಲಿಯಲು ಆಸಕ್ತಿ ತೋರುವ ಇಂಗ್ಲೀಷ್, ಉರ್ದು ಭಾಷೆಯ ವಿದ್ಯಾರ್ಥಿಗಳು ಹಾಗೂ ಅನ್ಯ ಭಾಷಿಕರಿಗೆ ಸುಲಭವಾಗಿ ಕನ್ನಡ ಕಲಿಸುತ್ತಿದ್ದಾರೆ. ಇವರೇ ರೂಪಿಸಿದ ಕಲಿಕಾ ವಸ್ತುಗಳು, ಕಲಿಕಾ ಲಿಪಿಯಿಂದ ಕನ್ನಡವನ್ನು ಕೇವಲ ಒಂದೆರಡು ತಿಂಗಳಲ್ಲಿಯೇ ಕಲಿಯಬಹುದಾಗಿದೆ. ಹಿಂದಿ, ಉರ್ದು, ಆಂಗ್ಲ ಭಾಷೆಯಲ್ಲಿ ಅಭ್ಯಾಸ ಮಾಡಿ, ಕನ್ನಡ ಬಾರದೇ ಇರುವವರಿಗೆ ಕನ್ನಡವನ್ನು ಸರಳೀಕರಣಗೊಳಿಸಿ ಮನದಟ್ಟಾಗುವಂತೆ ವಿವಿಧ ರೂಪ ಹಾಗೂ ಹಂತದಲ್ಲಿ ಸುಲಭವಾಗಿ ಕಲಿಸುತ್ತಿದ್ದಾರೆ.

ಸೌದಿಯಲ್ಲೂ ಕನ್ನಡ ಬೋಧನೆ:

36 ವರ್ಷ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಇವರು ಕಬ್ಬಿಣದ ಕಡಲೆಯಂತೆ ಕಾಣುವ ಉರ್ದು ಮಕ್ಕಳಿಗೆ ಕನ್ನಡವನ್ನು ಕಲಿಸುತ್ತಿದ್ದಾರೆ. ನಿವೃತ್ತಿ ಹೊಂದಿ 10 ವರ್ಷ ಕಳೆದ ನಂತರವೂ ಗೌಸ್ ಮೆಸ್ಟ್ರು, ತಮ್ಮ ಕನ್ನಡ ಕಲಿಕೆಯ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಕರ್ನಾಟಕ ಸೇರಿ ದೇಶದ ವಿವಿಧ ರಾಜ್ಯಗಳಲ್ಲಿನ ಜನರಿಗೆ ಕನ್ನಡದ ಅಕ್ಷರ ಜ್ಞಾನ ನೀಡುತ್ತಿರುವ ಗೌಸ್ ಮೆಸ್ಟ್ರು, ಸುಮಾರು ಐದಾರು ಬಾರಿ ಸೌದಿ-ಅರೇಬಿಯಾಕ್ಕೆ ಹೋಗಿ ಒಂದೂವರೆ ತಿಂಗಳು ಅಲ್ಲಿಯೇ ಇದ್ದು, ಅಲ್ಲಿನವರಿಗೆ ಕನ್ನಡವನ್ನು ಕಲಿಸಿ ಬಂದಿರುವುದು ವಿಶೇಷ. ಹೀಗೆ ಕಳೆದ 46 ವರ್ಷದಲ್ಲಿ ಗೌಸ್ ಮೇಸ್ಟ್ರ ಕೈಯಲ್ಲಿ ಅಸಂಖ್ಯಾತರು ಕನ್ನಡ ಭಾಷೆಯನ್ನು ಬರೆಯುವುದು, ಓದುವುದು ಮತ್ತು ಮಾತನಾಡುವುದನ್ನು ಕಲಿತಿದ್ದಾರೆ.

ಆಟದ ಮೂಲಕ ಕನ್ನಡ ಬೋಧನೆ:

ಗೌಸ್ ಮೆಸ್ಟ್ರು ಚಿಕ್ಕವಯಸ್ಸಿನಲ್ಲಿದ್ದಾಗ ಬಡಿಗೆತನ ಕಲಿತಿದ್ದರು. ಇದನ್ನು ಕನ್ನಡ ಬೋಧನೆಗೆ ಬಳಸಿಕೊಳ್ಳುತ್ತಿದ್ದಾರೆ. ಅವರು ಉರ್ದು ಶಾಲೆಯಲ್ಲಿ ಕನ್ನಡ ಶಿಕ್ಷಕರಾದ ನಂತರ ಉರ್ದು, ಹಿಂದಿ ಭಾಷೆಯನ್ನಾಡುತ್ತಿದ್ದ ಮಕ್ಕಳು ಕನ್ನಡ ಕಲಿಯಲು ಅವಸ್ಥೆ ಅನುಭವಿಸುತ್ತಿರುವುದನ್ನು ಗಮನಿಸಿದರು. ತಾವೇ ಕನ್ನಡದ ಮೂಲಾಕ್ಷರಗಳು, ಕಾಗುಣಿತಾಕ್ಷರ ಮತ್ತು ಸಂಖ್ಯೆಗಳನ್ನು ಒಳಗೊಂಡ ಕಟ್ಟಿಗೆಯ ಪೀಠೋಪಕರಣಗಳನ್ನು ಚಕ್ರದ ಮಾದರಿಯಲ್ಲಿ ತಯಾರಿಸಿದರು. ಮಕ್ಕಳ ಗಮನ ಸೆಳೆಯುವ ಪದಗಳನ್ನು ರಚಿಸುವ ಪದ್ಧತಿಯನ್ನು ತಾವೇ ಕಂಡುಕೊಂಡರು. ಅಲ್ಲದೇ, ಫ್ಲ್ಯಾಶ್ ಕಾರ್ಡ್‌ಗಳ ನೆರವಿನೊಂದಿಗೆ ಕನ್ನಡ ಪದಗಳನ್ನು ಬರೆಯುವ ಮಹತ್ತರ ಕಲಿಕೆಯ ಕೌಶಲ್ಯವನ್ನು ಮೇಸ್ಟ್ರು ಕರಗತಮಾಡಿಕೊಂಡರು. ಇವುಗಳನ್ನು ಕನ್ನಡ ಭಾಷಾ ಕಲಿಕೆಗೆ ಬಳಸಿಕೊಳ್ಳುತ್ತಿದ್ದಾರೆ.

ಕನ್ನಡ ಕಲಿಯುವ ಮನಸ್ಸಿದ್ದವರಿಗೆ ತಮ್ಮದೇ ಆದ ಶೈಲಿಯಲ್ಲಿ ಗೌಸ್ ಮೆಸ್ಟ್ರು ಕನ್ನಡ ಬೋಧನೆ ಮಾಡುತ್ತಾರೆ. ಯಾರೇ ಇರಲಿ ಅವರ ಕಲಿಕಾ ಮಟ್ಟ, ಬುದ್ಧಿ, ಸಾಮರ್ಥ್ಯಗಳನ್ನು ಗಮನದಲ್ಲಿರಿಸಿಕೊಂಡು, ಮೂರು ಹಂತದಲ್ಲಿ ಕನ್ನಡವನ್ನು ಬೋಧಿಸುತ್ತಾರೆ. ಮೊದಲನೆಯದಾಗಿ ಮೂಲಾಕ್ಷರ ಹಾಗೂ ಅದರ ಪದಗಳನ್ನು ಕಲಿಸಿದರೆ, ಎರಡನೆಯದಾಗಿ ಬಳ್ಳಿ ಹಾಗೂ ಅದರ ಪದಗಳನ್ನು ಮತ್ತು ಮೂರನೆಯದಾಗಿ ಸಜಾತಿ ಮತ್ತು ವಿಜಾತಿ ಒತ್ತಕ್ಷರಗಳ ಪದಗಳನ್ನು ಕಲಿಸುತ್ತಾರೆ.

ಸನ್ನೆಗಳ ಮುಖಾಂತರ ಕಲಿಕೆ, ಪೀರಜಾದೆ ಅವರ ವಿಶೇಷತೆಗಳಲ್ಲಿ ಒಂದಾಗಿದೆ. ಇವರು ನಡೆಯುವುದು, ಹೆಜ್ಜೆ ಹಾಕುವುದು, ಸನ್ನೆ ತೋರಿದರೆ ಸಾಕು ಅದನ್ನು ಗಮನಿಸುವ ವಿದ್ಯಾರ್ಥಿಗಳು ಅದು ಯಾವ ಅಕ್ಷರ, ಯಾವ ಪದವೆಂದು ಹೇಳುತ್ತಾರೆ. ಹೀಗೆ ಮಕ್ಕಳಲ್ಲಿ ಕುತೂಹಲ ಮೂಡಿಸಿ, ಆಟದ ಮೂಲಕ ಕನ್ನಡ ಕಲಿಸುತ್ತಾರೆ.

ಕಟ್ಟಿಗೆಗಳಿಂದ ಕಲಿಕಾ ಸಾಮಗ್ರಿಗಳ ಜೊತೆಗೆ ಕಲಿ ಕನ್ನಡ ಎಂಬ ಹೆಸರಿನ ಅಂಕಲಿಪವನ್ನು ಸಹ ಸೈಯದ್ ಗೌಸ್ ಮೊಹಿಯುದ್ದೀನ್ ಪೀರಜಾದೆ ಅವರು ಬರೆದಿದ್ದು, ಈಗಾಗಲೇ 5 ಸಾವಿರ ಪ್ರತಿಗಳು ಮುದ್ರಣಗೊಂಡಿವೆ. ಇನ್ನು 2 ಸಾವಿರ ಪ್ರತಿಗಳನ್ನು ಮುದ್ರಿಸುತ್ತಿದ್ದಾರೆ. ಇವರ ಕನ್ನಡ ಸೇವೆಗೆ ಜಿಲ್ಲಾಡಳಿತದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಅಲ್ಲದೆ, ಸಂಘ-ಸಂಸ್ಥೆಗಳು ಹತ್ತಾರು ಪ್ರಶಸ್ತಿಗಳನ್ನು ನೀಡಿ, ಸನ್ಮಾನಿಸಿ, ಇವರನ್ನು ಗೌರವಿಸಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬಿಜೆಪಿ ಎಷ್ಟು ಕೇಸ್‌ ಸಿಬಿಐಗೆ ನೀಡಿದೆ? : ಸಿಎಂ
ರಾಷ್ಟ್ರಧ್ವಜ ತಯಾರಿಸ್ತಿ ದ್ದ ಕೈಗಳಲ್ಲೀಗ ಕೆಲಸವಿಲ್ಲ!