ಸಹಕಾರ ಸಹಾಯಕ ನಿಬಂಧಕ ಎಂ.ಎಸ್.ದಯಾನಂದ ಇಬ್ಬರ ಆಯ್ಕೆಯನ್ನು ಘೋಷಿಸಿದರು.
ಕಡೂರು ಪ್ರಾಥಮಿಕ ಸಹಕಾರ ಭೂ ಅಭಿವೃದ್ಧಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಕೆ.ಎಚ್.ರಂಗನಾಥ್ ಮತ್ತು ಉಪಾಧ್ಯಕ್ಷರಾಗಿ ರುದ್ರಮ್ಮ ಕಲ್ಲೇಶಪ್ಪ ಅವಿರೋಧವಾಗಿ ಆಯ್ಕೆಯಾದರು.
ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಂಗನಾಥ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ರುದ್ರಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದು, ಚುನಾವಣಾಧಿಕಾರಿಯಾಗಿದ್ದ ಚಿಕ್ಕಮಗಳೂರು ಸಹಕಾರ ಸಹಾಯಕ ನಿಬಂಧಕ ಎಂ.ಎಸ್.ದಯಾನಂದ ಇಬ್ಬರ ಆಯ್ಕೆಯನ್ನು ಘೋಷಿಸಿದರು. ನಂತರ ನಡೆದ ಅಭಿನಂದನಾ ಸಭೆಯಲ್ಲಿ ನೂತನ ಅಧ್ಯಕ್ಷ ಕೆ.ಎಚ್.ರಂಗನಾಥ್ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಸಹಕಾರ ಕ್ಷೇತ್ರಕ್ಕೆ ರಾಜಕಾರಣ ತರಬಾರದು. ಚುನಾವಣೆ ನಡೆಯುವವರೆಗೆ ನಾವು ಪ್ರತಿಸ್ಪರ್ಧಿಗಳು, ನಂತರ ಇಲ್ಲಿ ಪಕ್ಷ ರಾಜಕಾರಣ ಬೆರೆಸದೆ ರೈತ ಸಮುದಾಯದ ಅಭಿವೃದ್ದಿಗೆ ಕಂಕಣಬದ್ದರಾಗಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ಹಸ್ತಕ್ಷೇಪದಿಂದ ಚುನಾವಣೆಯು ಸೌಹಾರ್ಧದ ಬದಲು ಜಿದ್ದಾಜಿದ್ದಿಗೆ ಎಳೆದಿದೆ. ಇದನ್ನು ತಪ್ಪಿಸಲು ನಾವೆಲ್ಲರೂ ಅನ್ಯೋನ್ಯತೆಯಿಂದ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಮನವಿ ಮಾಡಿದರು. ನಿರ್ದೇಶಕ ಎಸ್.ವಿರೂಪಾಕ್ಷಪ್ಪ ಮಾತನಾಡಿ, ಮಾಜಿ ಶಾಸಕ ಮತ್ತು ಸಹಕಾರಿ ಧುರೀಣ ಬೆಳ್ಳಿಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ನಾವು 10 ಮಂದಿ ಎನ್ ಡಿ ಎ ಒಕ್ಕೂಟದ ಪರವಾಗಿ ಗೆಲುವು ಸಾಧಿಸಿದ್ದೇವೆ. ಅವರು ನಮಗೆ ನೀಡಿರುವ ಸಂದೇಶವೆಂದರೆ ಚುನಾವಣೆಯ ನಂತರ ಎಲ್ಲರೂ ಸಹಕಾರ ಕ್ಷೇತ್ರ ಬಲ ಪಡಿಸಲು ದುಡಿಯಬೇಕು. ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ ಅವರ ನಿರ್ದೇಶನ ಮತ್ತು ಮಾರ್ಗದರ್ಶನವನ್ನೂ ನಮ್ರತೆಯಿಂದ ಸ್ವೀಕರಿಸಿ, ಸಹಕಾರಿ ಬಂಧುಗಳಿಗೆ ಸೌಲಭ್ಯ ಒದಗಿಸಲು, ಬ್ಯಾಂಕ್ ವತಿಯಿಂದ ನೆರವು ನೀಡಲು ಮುಂದಾಗಬೇಕು ಎಂದು ತಿಳಿಸಿದ್ದಾರೆ. ಅವರ ಸಲಹೆಯನ್ನು ಪಾಲಿಸೋಣ ಎಂದರು. ನಿರ್ದೇಶಕ ಜಿಗಣೇಹಳ್ಳಿ ನೀಲಕಂಠಪ್ಪ ಮಾತನಾಡಿ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಅವರ ಸೇವಾ ಪರತೆಯೇ ನಮಗೆ ದಾರಿ ದೀಪವಾಗಿದೆ. ಸಹಕಾರಿ ಬ್ಯಾಂಕುಗಳ ಮೂಲಕ ಕ್ಷೇತ್ರದ 25ಸಾವಿರ ಕುಟುಂಬಗಳಿಗೆ ಶೂನ್ಯ ಬಡ್ಡಿದರದಲ್ಲಿ ರೂ.300 ಕೋಟಿಗೂ ಹೆಚ್ಚು ಸಾಲ ಸೌಲಭ್ಯ ಕಲ್ಪಿಸಿದ ಹೆಗ್ಗಳಿಕೆ ಅವರದ್ದು. ಪ್ರಾಥಮಿಕ ಸಹಕಾರ ಸಂಘಗಳ ಅಭಿವೃದ್ಧಿಗೂ ಅವರು ನೆರವಾಗಿದ್ದಾರೆ. ಅವರ ಸಲಹೆ, ಮಾರ್ಗದರ್ಶನದಂತೆ ಪಿಎ ಲ್ ಡಿ ಬ್ಯಾಂಕನ್ನು ಜಿಲ್ಲೆಯಲ್ಲಿಯೇ ಅತ್ಯುತ್ತಮ ಸಹಕಾರಿ ಸಂಸ್ಥೆಯಾಗಿ ರೂಪಿಸಲು ಶ್ರಮಿಸೋಣ ಎಂದು ಕರೆ ನೀಡಿದರು. ಚುನಾವಣಾ ಪ್ರಕ್ರಿಯೆಯಲ್ಲಿ ನಿರ್ದೇಶಕರಾದ ಎಚ್.ಎಂ.ರೇವಣ್ಣಯ್ಯ, ಪ್ರಕಾಶ ನಾಯ್ಕ, ಆನಂದ ನಾಯ್ಕ ,ಮಾಜಿ ಅಧ್ಯಕ್ಷ ಕಲ್ಲೇಶಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಎಚ್.ಪಿ.ಚನ್ನಬಸಪ್ಪ, ಮೋಹನನಾಯ್ಕ, ತಿಪ್ಪೇಶಪ್ಪ,ಕೋಮಲ, ಸಂತೋಷ್ ಪಿ.ಸಿ, ಸಂಜಯ್ ಕೆ.ಆರ್, ತಿಮ್ಮೇಗೌಡ, ನಾಮ ನಿರ್ದೇಶಿತ ಸದಸ್ಯ ಕೆ.ಎಸ್.ಕೃಷ್ಣಾನಾಯ್ಕ ಪಾಲ್ಗೊಂಡರು. ಈ ಸಂದರ್ಭದಲ್ಲಿ ಸವಿತಾ ರಮೇಶ್, ಮಂಜುಳಾ ಚಂದ್ರು, ಸುಧಾ ಉಮೇಶ್, ಶೆಟ್ಟಿಹಳ್ಳಿ ರಾಮಪ್ಪ, ಕೆ.ಎನ್.ಬೊಮ್ಮಣ್ಣ,ಕಂಸಾಗರ ರೇವಣ್ಣ, ಟಿ.ಆರ್.ಲಕ್ಕಪ್ಪ, ಕಾವೇರಿ ಲಕ್ಕಪ್ಪ, ಗಿರೀಶ್ (ವೈ.ಎಸ್.ವಿ,) ಬಿ.ಪಿ.ದೇವಾನಂದ್, ಬಳ್ಳೇಕೆರೆ ಶಶಿ, ಎ.ಮಣಿ ಮತ್ತಿತರರು ನೂತನ ಆಡಳಿತ ಮಂಡಳಿಯನ್ನು ಅಭಿನಂದಿಸಿದರು. 26ಕೆಕೆಡಿಯು4. ಕಡೂರು ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರಾಗಿ ಕೆ.ಎಚ್.ರಂಗನಾಥ್, ಉಪಾಧ್ಯಕ್ಷರಾಗಿ ರುದ್ರಮ್ಮ ಅವಿರೋಧವಾಗಿ ಆಯ್ಕೆಯಾದರು. ನೂತನ ನಿರ್ದೇಶಕರು ಇದ್ದರು.