ಬೈಕ್‌ ಟ್ಯಾಕ್ಸಿ ನಿಷೇಧವೇ ಸೂಕ್ತ : ಸಮಿತಿ

KannadaprabhaNewsNetwork |  
Published : Nov 28, 2025, 02:06 AM IST
Bike Taxi

ಸಾರಾಂಶ

ರಾಜ್ಯದಲ್ಲಿ ಬೈಕ್‌ ಟ್ಯಾಕ್ಸಿ ಸೇವೆ ಕಾನೂನು ಬದ್ಧಗೊಳಿಸಿದರೆ ಸಂಚಾರ ದಟ್ಟಣೆ, ರಸ್ತೆ ಅಪಘಾತ, ಮಹಿಳಾ ಸುರಕ್ಷತೆ ಸವಾಲು ಎದುರಾಗಲಿದೆ. ಹೀಗಾಗಿ ಬೈಕ್‌ ಟ್ಯಾಕ್ಸಿ ಸೇವೆಗೆ ಅನುಮತಿಸದಿರುವುದು ಉತ್ತಮ ಎಂದು ಸರ್ಕಾರ ರಚಿಸಿದ್ದ ಉನ್ನತಾಧಿಕಾರಿಗಳ ಸಮಿತಿ ಶಿಫಾರಸು ಮಾಡಿದೆ.

ಗಿರೀಶ್‌ ಗರಗ 

 ಬೆಂಗಳೂರು : ರಾಜ್ಯದಲ್ಲಿ ಬೈಕ್‌ ಟ್ಯಾಕ್ಸಿ ಸೇವೆ ಕಾನೂನು ಬದ್ಧಗೊಳಿಸಿದರೆ ಸಂಚಾರ ದಟ್ಟಣೆ, ರಸ್ತೆ ಅಪಘಾತ, ಮಹಿಳಾ ಸುರಕ್ಷತೆ ಸವಾಲು ಎದುರಾಗಲಿದೆ. ಹೀಗಾಗಿ ಬೈಕ್‌ ಟ್ಯಾಕ್ಸಿ ಸೇವೆಗೆ ಅನುಮತಿಸದಿರುವುದು ಉತ್ತಮ ಎಂದು ಸರ್ಕಾರ ರಚಿಸಿದ್ದ ಉನ್ನತಾಧಿಕಾರಿಗಳ ಸಮಿತಿ ಶಿಫಾರಸು ಮಾಡಿದೆ.ಬೈಕ್‌ ಟ್ಯಾಕ್ಸಿ ಸೇವೆ ಕಾನೂನುಬದ್ಧಗೊಳಿಸುವ ಸಂಬಂಧ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣ ವಿಚಾರಣೆ ಹಿನ್ನೆಲೆಯಲ್ಲಿ ವರದಿ ನೀಡಲು ಸರ್ಕಾರ ಸಾರಿಗೆ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರಿಗಳ ಸಮಿತಿ ರಚಿಸಿತ್ತು. 

ಸಮಿತಿಯು ಇದೀಗ ಬೈಕ್‌ ಟ್ಯಾಕ್ಸಿ ಸೇವೆಗೆ ಅನುಮತಿಸುವುದರಿಂದ ಸೃಷ್ಟಿಯಾಗುವ ಸಮಸ್ಯೆಗಳ ವಿವರವನ್ನೊಳಗೊಂಡ ವರದಿ ಸಿದ್ಧಪಡಿಸಿದೆ. ಅಲ್ಲದೆ, ಆ ವರದಿಯನ್ನು ಹೈಕೋರ್ಟ್‌ಗೂ ಸಲ್ಲಿಸಲಾಗಿದ್ದು, ಬೈಕ್‌ ಟ್ಯಾಕ್ಸಿ ಸೇವೆಗೆ ಅನುಮತಿಸಬಾರದು ಎಂದು ವರದಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. 

82.83 ಲಕ್ಷ ಬೈಕ್‌ಗಳು: 

ಬೆಂಗಳೂರು ನಗರದಲ್ಲಿ 2015ರಿಂದ 2025ರವರೆಗೆ ಶೇಕಡ 42 ಜನಸಂಖ್ಯೆ ಹೆಚ್ಚಾಗಿದೆ. ಅದೇ ಬೈಕ್‌ಗಳ ಸಂಖ್ಯೆ ಶೇ.98ರಷ್ಟು ಮತ್ತು ಕಾರುಗಳ ಸಂಖ್ಯೆ ಶೇ.79ರಷ್ಟು ಹೆಚ್ಚಳವಾಗಿದೆ. ಅದೇ ಸಮೂಹ ಸಾರಿಗೆಯಾದ ಬಿಎಂಟಿಸಿ ಬಸ್‌ ಸಂಖ್ಯೆ 2015ರಿಂದ 2025ರ ವೇಳೆ ಶೇ.14ರಷ್ಟು ಮಾತ್ರ ಹೆಚ್ಚಳವಾಗಿದೆ. ಸದ್ಯ ಬೆಂಗಳೂರಿನಲ್ಲಿ 82.83 ಲಕ್ಷ ಬೈಕ್‌ಗಳು, 23.83 ಲಕ್ಷ ಕಾರು ಸೇರಿ ಒಟ್ಟು 1.06 ಕೋಟಿ ಬೈಕ್‌ ಮತ್ತು ಕಾರುಗಳಿದ್ದು, ಇವುಗಳಿಂದಾಗಿ ಸಂಚಾರ ದಟ್ಟಣೆ ಹೆಚ್ಚುವಂತಾಗಿದೆ.ಒಂದು ವೇಳೆ ಬೈಕ್‌ ಟ್ಯಾಕ್ಸಿಗಳಿಗೆ ಅನುಮತಿಸಿದರೆ ನಗರದಲ್ಲಿ ಬೈಕ್‌ಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುವ ಸಾಧ್ಯತೆಗಳಿವೆ. 

ಅವುಗಳಿಂದಾಗಿ ನಗರದ ಸಂಚಾರ ದಟ್ಟಣೆ ಸಮಸ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿವೆ. ಜತೆಗೆ ಮಾಲಿನ್ಯ ಪ್ರಮಾಣದಲ್ಲೂ ಏರಿಕೆಯಾಗಿದೆ. ಹೀಗೆ ಬೈಕ್‌ ಟ್ಯಾಕ್ಸಿಗೆ ಅನುಮತಿಸುವ ಬದಲು ಜನ ಸಮೂಹ ಸಾರಿಗೆಯಾದ ಬಿಎಂಟಿಸಿ ಬಳಕೆಗೆ ಹೆಚ್ಚಿನ ಒಲವು ತೋರಬೇಕು. ಒಂದು ಬಸ್‌ ಸಂಚರಿಸುವ ಜಾಗದಲ್ಲಿ 30 ಬೈಕ್‌ಗಳು ಸಂಚರಿಸುವಂತಾಗಲಿದೆ. ಅದರಿಂದ ಸಂಚಾರ ದಟ್ಟಣೆ ಕಡಿಮೆ ಆಗುವುದಲ್ಲದೆ, ಮಾಲಿನ್ಯ ಪ್ರಮಾಣವೂ ಇಳಿಕೆಯಾಗಲಿದೆ ಎಂದು ಸಮಿತಿ ವರದಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದೆ. 

2 ಕಿ.ಮೀ.ಗೆ ₹48 ಪ್ರಯಾಣ ಶುಲ್ಕ : 

ಬೈಕ್‌ ಟ್ಯಾಕ್ಸಿ ಸೇವೆ ಸಮೂಹ ಸಾರಿಗೆಗಿಂತ ದುಬಾರಿ.  ಬೈಕ್‌ ಟ್ಯಾಕ್ಸಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ 2 ಕಿ.ಮೀ.ಗೆ ₹48 ಪ್ರಯಾಣ ಶುಲ್ಕ ವಿಧಿಸಲಾಗುತ್ತದೆ. ಅದೇ ಬಿಎಂಟಿಸಿ ಬಸ್‌ನಲ್ಲಿ 2 ಕಿ.ಮೀ.ಗೆ ₹6 ವಿಧಿಸಿದರೆ, 25ರಿಂದ 30 ಕಿ.ಮೀ. ಪ್ರಯಾಣಕ್ಕೆ ₹32 ಪ್ರಯಾಣ ದರ ಪಡೆಯಲಾಗುತ್ತದೆ. ಬಿಎಂಟಿಸಿ ಬಸ್‌ಗೆ ಹೋಲಿಸಿದರೆ ಬೈಕ್‌ ಟ್ಯಾಕ್ಸಿ ದುಬಾರಿ. ಅಲ್ಲದೆ, ಬಸ್‌ನಲ್ಲಿ ಸರಾಸರಿ 30ರಿಂದ 40 ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. 

ಅಸುರಕ್ಷಿತ, ಪರಿಸರಕ್ಕೆ ಹಾನಿ:

ಬೈಕ್‌ ಟ್ಯಾಕ್ಸಿಗಳು ಅಸುರಕ್ಷಿತ ಪ್ರಯಾಣಕ್ಕೆ ನಾಂದಿ ಹಾಡುವುದಲ್ಲದೆ, ಪರಿಸರಕ್ಕೆ ಹಾನಿಯನ್ನುಂಟು ಮಾಡುತ್ತವೆ. ಈ ಹಿಂದೆ ಸಾರಿಗೆ ಇಲಾಖೆ ಎಲೆಕ್ಟ್ರಿಕ್‌ ಬೈಕ್‌ ಟ್ಯಾಕ್ಸಿ ನಿಯಮ ರೂಪಿಸಲಾಗಿತ್ತು. ಅದಾದ ನಂತರ ಎಲೆಕ್ಟ್ರಿಕ್‌ ಬೈಕ್‌ಗಳ ಮೂಲಕ ಟ್ಯಾಕ್ಸಿ ಸೇವೆ ನೀಡುವವರಿಂದ ಪ್ರಯಾಣಿಕರ ಮೇಲೆ ಅದರಲ್ಲೂ ಮಹಿಳಾ ಪ್ರಯಾಣಿಕರ ಮೇಲೆ ಕಿರುಕುಳ ಹೆಚ್ಚುವಂತಾಗಿತ್ತು. ಇದನ್ನೂ ಒಂದು ಕಾರಣವಾಗಿಟ್ಟುಕೊಂಡು ಎಲೆಕ್ಟ್ರಿಕ್‌ ಬೈಕ್‌ ಟ್ಯಾಕ್ಸಿ ನಿಯಮವನ್ನೇ ರದ್ದು ಮಾಡಲಾಯಿತು.ಈಗಲೂ ಬೈಕ್‌ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಿದರೆ, ಮಹಿಳಾ ಪ್ರಯಾಣಿಕರ ಮೇಲಿನ ದೌರ್ಜನ್ಯ ಹೆಚ್ಚುವ ಸಾಧ್ಯತೆಗಳಿರುತ್ತವೆ. 

ಅಲ್ಲದೆ, ಕೆಲ ಬೈಕ್‌ಗಳಲ್ಲಿ ವಿಮೆ ಇಲ್ಲದಿದ್ದರೂ ಸೇವೆ ನೀಡುವುದರಿಂದ ಅಪಘಾತದ ಸಂದರ್ಭದಲ್ಲಿ ವಿಮಾ ಮೊತ್ತ ದೊರೆಯದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅದರಿಂದ ಬೈಕ್‌ ಟ್ಯಾಕ್ಸಿ ಚಾಲಕರಿಗಿಂತ ಪ್ರಯಾಣಿಕರಿಗೆ ಹೆಚ್ಚಿನ ಸಮಸ್ಯೆಯಾಗುತ್ತದೆ.ಸದಸ್ಯರ ಒಮ್ಮತದ ನಿರ್ಧಾರ:ಬೈಕ್‌ ಟ್ಯಾಕ್ಸಿಯನ್ನು ಕಾನೂನು ಬದ್ಧಗೊಳಿಸಬಾರದು ಎಂದು ಉನ್ನತಾಧಿಕಾರಿ ಸಮಿತಿಯ ಎಲ್ಲ ಸದಸ್ಯರು ಒಮ್ಮತದಿಂದ ತಿಳಿಸಿದ್ದಾರೆ. 

ಈ ಬಗ್ಗೆ ವರದಿಯಲ್ಲೂ ತಿಳಿಸಲಾಗಿದ್ದು, ಮುಂಬರುವ ಅಪಾಯಗಳನ್ನು ಮನಗಂಡು, ಅಧ್ಯಯನ ನಡೆಸಿರುವ ಕಾರಣದಿಂದಾಗಿ ಎಲ್ಲ ಸದಸ್ಯರೂ ಬೈಕ್‌ ಟ್ಯಾಕ್ಸಿ ನಿಷೇಧ ಮುಂದುವರಿಸುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 ಸಮಿತಿಯಲ್ಲಿದ್ದ ಸದಸ್ಯರುಸಾರಿಗೆ ಇಲಾಖೆ ಕಾರ್ಯದರ್ಶಿ ಅವರು ಅಧ್ಯಕ್ಷರಾಗಿ, ನಗರ ಭೂಸಾರಿಗೆ ನಿರ್ದೇಶನಾಲಯದ ಆಯುಕ್ತರು, ಕಾರ್ಮಿಕ ಇಲಾಖೆ ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು, ಸಂಚಾರ ಪೊಲೀಸ್‌ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ, ಕಾನೂನು ಮತ್ತು ಸುವ್ಯವಸ್ಥೆಯ ಜಂಟಿ ಪೊಲೀಸ್‌ ಆಯುಕ್ತ, ಬಿಎಂಆರ್‌ಸಿಎಲ್‌ ಹಿರಿಯ ಪ್ರತಿನಿಧಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪ್ರತಿನಿಧಿ, ರಾಜ್ಯ ಸಾರಿಗೆ ಪ್ರಾಧಿಕಾರದ ಹೆಚ್ಚುವರಿ ಆಯುಕ್ತರು ಸದಸ್ಯರಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ