ರೋಗಿಗಳಿಗೆ ನೆರವಾಗಲು ಔಷಧ ಮಳಿಗೆ ಆರಂಭ

KannadaprabhaNewsNetwork |  
Published : Dec 29, 2023, 01:30 AM IST
ಶ್ರೀ ಸಿದ್ದೇಶ್ವರ ೨೪ ಗಂಟೆ ಔಷಧ ಮಳಿಗೆಯನ್ನು ವಿಜಯಪುರ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಮಂಗಳವಾರ ಉದ್ಘಾಟಿಸಿದರು. | Kannada Prabha

ಸಾರಾಂಶ

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶ್ರೀ ಸಿದ್ದೇಶ್ವರ 24 ಗಂಟೆ ಔಷಧ ಮಳಿಗೆ ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ಮೂರು ವರ್ಷಗಳ ಹಿಂದೆ ಸಿದ್ದೇಶ್ವರ ಲೋಕ ಕಲ್ಯಾಣ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳ ಹೆಸರು ಅಜರಾಮರವಾಗಿಸುವ ಮೂಲಕ ಬಡವರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಶ್ರೀಗಳ ಹೆಸರಲ್ಲಿ ಜೆಎಸ್ಎಸ್ ಸಂಸ್ಥೆ ಅಸ್ತಿತ್ವಕ್ಕೆ ತರಲಾಗಿದೆಯೇ ಹೊರತು ಹಣ ಗಳಿಸಲು ಅಲ್ಲ. ತುರ್ತು ಸಂದರ್ಭದಲ್ಲಿ ವೈದ್ಯಕೀಯ ಸೇವೆಗೆ ನೆರವಾಗಲು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ದಿನದ 24 ಗಂಟೆ ಔಷಧ ಮಳಿಗೆ ತೆರೆಯಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶ್ರೀ ಸಿದ್ದೇಶ್ವರ 24 ಗಂಟೆ ಔಷಧ ಮಳಿಗೆ ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ಮೂರು ವರ್ಷಗಳ ಹಿಂದೆ ಸಿದ್ದೇಶ್ವರ ಲೋಕ ಕಲ್ಯಾಣ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಲಾಗಿದೆ. 17 ವರ್ಷಗಳ ಹಿಂದೆ ಸಿದ್ಧಶ್ರೀ ಸೌಹಾರ್ದ ಸಂಘ ತೆರೆಯುವ ಮೂಲಕ ಸಾವಿರಾರು ಬಡ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಸಾಲಸೌಲಭ್ಯ ಒದಗಿಸಿ ಆರ್ಥಿಕವಾಗಿ ಚೈತನ್ಯ ತುಂಬುವಲ್ಲಿ ಯಶಸ್ವಿಯಾಗಿರುವ ಪರಿಣಾಮ ಇಂದು ರಾಜ್ಯದಲ್ಲಿ ಸುಮಾರು 160ಕ್ಕೂ ಹೆಚ್ಚು ಸಂಸ್ಥೆ ತೆರದು ಸುಮಾರು ₹ 3 ಸಾವಿರ ಕೋಟಿ ಠೇವಣಿ ಸಂಗ್ರಹಿಸಿ ಸಾವಿರಾರು ಕೋಟಿ ವಹಿವಾಟು ಹೊಂದಿದ ರಾಜ್ಯದ ಪ್ರಮುಖ ಸಹಕಾರಿ ಸಂಸ್ಥೆಗಳಲ್ಲಿ ಒಂದಾಗಿದೆ. ಮುದ್ದೇಬಿಹಾಳ ಸಿದ್ಧಸಿರಿ ಶಾಖೆಯಿಂದಲೇ ಸುಮಾರು ₹ 160 ಕೋಟಿ ವಹಿವಾಟು ಹೊಂದಿದೆ. ಇದಕ್ಕೆ ಆಡಳಿತ ಮಂಡಳಿಯ ಸದಸ್ಯರ ಶ್ರಮ, ವಿಶ್ವಾಸ ಸಾಕ್ಷಿಯಾಗಿದೆ. ದ್ರಾಕ್ಷಿ ಬೆಳೆಗಾರರ ರಕ್ಷಣೆಗಾಗಿ ವಿಜಯಪುರದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಿಸಲಾಗಿದೆ. ಚಿಂಚೋಳ್ಳಿಯಲ್ಲಿ ಸುಮಾರು ₹ 750 ಕೋಟಿ ವೆಚ್ಚದಲ್ಲಿ ಸಿದ್ಧಸಿರಿ ಎಥಿನಾಲ್ ಮತ್ತು ಪವರ್ ಹಾಗೂ ಸಕ್ಕರೆ ಕಾರ್ಖಾನೆ ಸ್ಥಾಪಿಸಲಾಗಿದೆ. ಜೊತೆಗೆ ಸಿದ್ಧಸಿರಿ ಸಂಸ್ಥೆಯ ಷೇರುದಾರರಿಗೆ ಶೇ.25ರಷ್ಟು ಡಿವಿಡೆಂಟ್‌ ವಿತರಿಸಲಾಗಿದೆ ಎಂದರು.

ವಿಜಯಪುರ ರಾಷ್ಟ್ರೀಯ ಹೆದ್ದಾರಿ ಬಳಿ ವಿಶಾಲ ಮೈದಾನದಲ್ಲಿ 108 ಹಾಸಿಗೆಯ ಜೆಎಸ್ಎಸ್ ಆಸ್ಪತ್ರೆ ತೆರೆದು ಬಡವರ ಹಾಗೂ ಹಿಂದುಳಿದವರ ಆರೋಗ್ಯ ರಕ್ಷಣೆಯ ಸೇವೆ ಮಾಡುವ ಉದ್ದೇಶ ಹೊಂದಿದೆ. ಕಿಡ್ನಿ ಕಸಿ ಜೋಡಣಾ ಘಟಕ ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಕ್ಯಾನ್ಸರ್ ಆಸ್ಪತ್ರೆ ತೆರೆಯಲು ಸಿದ್ಧತೆ ಕೈಗೊಳ್ಳಲಾಗಿದೆ ಎಂದರು.

ಉಪ್ಪಿನ ಬೆಟಗೇರಿ ಶ್ರೀ ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು, ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಗಣ್ಯ ಉದ್ಯಮಿ ಬಸವರಾಜ ಮೋಟಗಿ, ವಕೀಲ ಎಂ.ಎಸ್. ನಾವದಗಿ, ಡಾ.ದಲಿಚಂದ ಓಸ್ವಾಲ್, ಜೆ.ಎಸ್.ಎಸ್ ಆಸ್ಪತ್ರೆಯ ಸಿಇಒ ಡಾ, ಶರಣ ಎಸ್. ಮಳಖೇಡ, ಡಾ.ಎಸ್. ಬಿ. ನಾಗೂರ, ಬಾಲಾಜಿ ಶುಗರ್ಸ್‌ ಉಪಾಧ್ಯಕ್ಷ ರಾಹುಲ್‌ ಪಾಟೀಲ, ಎಂ.ಬಿ. ನಾವದಗಿ, ಕರ್ನಾಟಕ ಕೋ ಆಪ್ ಬ್ಯಾಂಕಿನ ಅಧ್ಯಕ್ಷ ಸತೀಶ ಓಸ್ವಾಲ್, ಸುರೇಶಗೌಡ ಪಾಟೀಲ, ಸಿದ್ದು ಹೆಬ್ಬಾಳ, ದೇವೇಂದ್ರ ವಾಲಿಕಾರ ಸೇರಿದಂತೆ ಮತ್ತಿತರರು ಇದ್ದರು.----ಕೋಟ್..

ವಿಜಯಪುರ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಕೇವಲ ರಾಜಕಾರಣಿಯಾಗಿಲ್ಲ. ತಾಯಿ ಹೃದಯ ಹೊಂದಿರುವ ಬಡವರ, ದೀನ ದಲಿತರ ಆಶಾಕಿರಣರಾಗಿದ್ದಾರೆ. ನಿಜವಾದ ಸಾಮಾಜಿಕ ಕಳಕಳಿ ಹೊಂದಿದ್ದಾರೆ. ಶಿಕ್ಷಣ, ಸಹಕಾರ ಸೇರಿದಂತೆ ಔದ್ಯೋಗಿಕ ಕ್ರಾಂತಿ ಮಾಡಿದ ಕೀರ್ತಿ ಬಸನನಗೌಡ ಪಾಟೀಲರಿಗೆ ಸಲ್ಲುತ್ತದೆ. ಮಾಜಿ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರು ಸಹ ಸರಳ ಸಜ್ಜನಿಕೆ ವ್ಯಕ್ತಿತ್ವ ಹೊಂದಿದ ಜನಸೇವಕರಾಗಿದ್ದಾರೆ. ಇವರಿಬ್ಬರ ಜೋಡಿ ಅತ್ಯಂತ ಪವಿತ್ರ ಕಾರ್ಯ ಮಾಡುತ್ತಿದೆ. ಈ ಜೋಡಿಗೆ ಇನ್ನಷ್ಟು ಸಾಮಾಜಿಕ ಸೇವೆ ಸಲ್ಲಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸೋಣ.

-ಡಾ.ಚನ್ನವೀರದೇವರು ಕುಂಟೋಜಿ ಹಿರೇಮಠ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!