ಪಾಲಿಕೆ ಸಾಮಾನ್ಯ ಸಭೆಯ ಸ್ವಾರಸ್ಯಕರ ಪ್ರಸಂಗಗಳು

KannadaprabhaNewsNetwork | Published : Dec 29, 2023 1:30 AM

ಸಾರಾಂಶ

ಹಳ್ಯಾಗ ಹಂದಿ ಕಾಟ, ಸಿಟ್ಯಾಗ ನಾಯಿ ಕಾಟ ಅನ್ನೋವ್ಹಂಗ ಆಗ್ಯದಲ್ರಿ, ಪಾಲಿಕೆ ಅಧಿಕಾರಿಗಳು ಯಾಕ ಹೀಂಗ ಕುಂತೀರಿ, ಸದಸ್ಯರು ಜನರ ಗೋಳಾಟವನ್ನೇ ಹೇಳುತ್ತಿದ್ದಾರೆ. ತಕ್ಷಣ ಕೆಲಸಕ್ಕೆ ಮುಂದಾಗಿರಿ, ನಾಯಿಗಳ ಹಾವಳಿ ತಪ್ಪಿಸಲು ಕ್ರಮಕ್ಕೆ ಮುಂದಾಗ್ರಿ

ಹಳ್ಯಾಗ ಹಂದಿ ಕಾಟ, ಸಿಟ್ಯಾಗ ನಾಯಿ ಕಾಟ: ಶಾಸಕ ಅಲ್ಲಂಪ್ರಭು ಪಾಟೀಲ

ಕಲಬುರಗಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅನೇಕ ಸ್ವಾರಸ್ಯಕರ ಚರ್ಚೆಗಳು ನಡೆದವು. ಪ್ರತಿಭಟನೆ, ವಾಗ್ವಾದಗಳ ನಂತರ 45 ನಿಮಿಷ ವಿಳಂಬವಾಗಿ ಆರಂಭವಾದ ಸಭೆಯಲ್ಲಿ ಆರಂಭದಲ್ಲೇ ಅಜೆಂಡಾಗಳನ್ನೆಲ್ಲ ಬದಿಗೊತ್ತಿ ನಾಯಿಕಾಟದ ವಿಚಾರವನ್ನೇ ಪ್ರಧಾನವಾಗಿ ಚರ್ಚಿಸಲಾಯ್ತು.

ಶಾಸಕ ಅಲ್ಲಂಪ್ರಭು ಪಾಟೀಲರು ಮಾತನಾಡಿ, ಹಳ್ಯಾಗ ಹಂದಿ ಕಾಟ, ಸಿಟ್ಯಾಗ ನಾಯಿ ಕಾಟ ಅನ್ನೋವ್ಹಂಗ ಆಗ್ಯದಲ್ರಿ, ಪಾಲಿಕೆ ಅಧಿಕಾರಿಗಳು ಯಾಕ ಹೀಂಗ ಕುಂತೀರಿ, ಸದಸ್ಯರು ಜನರ ಗೋಳಾಟವನ್ನೇ ಹೇಳುತ್ತಿದ್ದಾರೆ. ತಕ್ಷಣ ಕೆಲಸಕ್ಕೆ ಮುಂದಾಗಿರಿ, ನಾಯಿಗಳ ಹಾವಳಿ ತಪ್ಪಿಸಲು ಕ್ರಮಕ್ಕೆ ಮುಂದಾಗ್ರಿ ಎಂದು ಪಾಲಿಕೆಯ ಆಯುಕ್ತ ಭುವನೇಶ ಪಾಟೀಲ್‌, ಮತ್ತವರ ತಂಡಕ್ಕೆ ಸಲಹೆ ನೀಡಿದರು.

ಕಾರ್ಪೋರೇಷನ್‌ ಆಫೀಸರ್‌ ಜೀವಂತ ಇದ್ದೀರಾ?: ಎಂಎಲ್‌ಸಿ ತಿಪ್ಪಣ್ಣ ಕಮಕನೂರ್‌

ಎಂಎಲ್‌ಸಿ ತಿಪ್ಪಣ್ಣ ಕಮಕನೂರ್‌ ಅವರು, ಪಾಲಿಕೆಯ ಸಾಮಾನ್ಯ ಸಭೆಯ ಘನತೆಯನ್ನು ವಿವರಿಸುತ್ತಲೇ ಅಧಿಕಾರಿಗಳು ಇಲ್ಲಿ ನಿಷ್ಕ್ರೀಯರಾಗಿದ್ದಾರೆಂದು ಬಲವಾದ ಶಂಕೆ ಹೊರಹಾಕಿದರು. ನೀವು ನೋಡಿದ್ರ ಹೀಂಗ ಜೋಲು ಮೋರೆಯಲ್ಲಿದ್ದರೆ ಹೇಗೆ? ಸದಸ್ಯರು ಸಮಸ್ಯೆ ಎತ್ತಿದ್ದಾರೆ. ಪರಿಹಾರೋಪಾಯ ಹೇಳಿ ಎಂದು ಮಾತಿನಲ್ಲೇ ತಿವಿದರು. ಅಲ್ರಿ ಕಮೀಷ್ನರ್‌ ಸಾಹೇಬ್ರ ಈ ಅಧಿಕಾರಿಗಳು ಯಾನರ ಕೆಲ್ಸಾ ಮಾಡ್ತಾರಾ? ಎಂದು ಶಂಕೆ ವ್ಯಕ್ತಪಡಿಸಿದಾಗ ಸಭೆಯಲ್ಲಿ ನಗೆ ಮೂಡಿತ್ತು. ಕಲಬುರಗಿಯೊಳಗ ಎಲ್ಲಾ ಸವಲತ್ತದ, ಕೆಲಸ ಮಾಡಬೇಕು ಅನ್ನೋ ಅಧಿಕಾರಿಗಳ ವರ್ಗ ಕಮ್ಮಿ ಅದ ಎಂದು ಎಂಎಲ್‌ಸಿ ಕಮಕನೂರ್‌ ವಿಷಾದಿಸಿದರು.

ಕುರ್ಚಿಗಾಗಿ ಜೆಡಿಎಸ್‌ ಕಾರ್ಪೋರೇಟರ್‌ ಕದನ!:

ಸಭೆಯಲ್ಲಿ ಜೆಡಿಎಸ್‌ ಕಾರ್ಪೋರೇಟರ್‌ ಒಬ್ಬರು ತಮ್ಮೆಲ್ಲ ದಾಖಲೆಗಳನ್ನು, ಕಡತಗಳನ್ನು ಸಭಾಂಗಣದ 2ನೇ ಸಾಲಿನಲ್ಲಿಟ್ಟು ಹೊರಗೆ ಹೋಗಿ ಬರೋದ್ರೊಳಗೇ ತಮ್ಮ ಕುರ್ಚಿ ಬದಲಾಗಿದೆ ಎಂದು ತಕರಾರು ತೆಗೆದು ಸದನದ ಬಾವಿಗಿಳಿದು ಧರಣಿ ಮಾಡಿ ರಂಪಾಟ ಮಾಡಿದ ಪ್ರಸಂಗ ನಡೆಯಿತು. ಹೀಗೆ ರಂಪಾಟ ಸಾಗಿದಾಗ ಸಭೆಯಲ್ಲಿ ಎಲ್ಲರು ದಂಗಾದರಾದರೂ ಕುರ್ಚಿ ಅದಲು ಬದಲಿಗೆ ತಾವೇ ಕಾರಣವೆಂದು ಕಾಂಗ್ರೆಸ್‌ ಪಾಲಿಕೆ ಸದಸ್ಯೆ ಲತಾ ರಾಠೋಡ ಒಪ್ಪಿಕೊಂಡು ಕ್ಷಮೆ ಯಾಸಚಿಸಿದರೂ ಸಹ ಕೋಪದಲ್ಲಿದ್ದ ಜೆಡಿಎಸ್‌ ಪಾಲಿಕೆ ಸದಸ್ಯ ಇದೆಲ್ಲ ನಡೆಯೋದಿಲ್ಲ, ಸಭಾಂಗಣದಲ್ಲಿನ ಮೂರನೇ ಸಾಲೇ (ಥರ್ಡ್‌ ರೋ) ನನಗೇ ಬೇಕಿತ್ತು. ಇದನ್ನ ಬಿಟ್ಟು ನನ್ನ ದಾಖಲೆ, ಕಡತಗಳ ಕೈಚೀಲ ಎತ್ತಿ ಬೇರೆಡೆ ಇಡಲಾಗಿದೆ ಎಂದು ಅಸಮಾಧಾನ ಮುಂದುವರಿಸಿದಾಗ ಉಳಿದೆಲ್ಲ ಸದಸ್ಯರು ಶ್ವಾನ ಸಮಸ್ಯೆ, ನೀರಿನ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿರುವಾಗ ಇದೇನಿದು ಕುರ್ಚಿ ಕದನವೆಂದು ಕೋಪಗೊಂಡಾಗ ಜೆಡಿಎಸ್‌ ಸದಸ್ಯ ಸಭಾಂಗಣದಲ್ಲಿ ಶಾಸಕರ ಕುರ್ಚಿಗಳಿದ್ದ ಸಾಲಿನಲ್ಲಿ ಕುಳಿತಾಗ ಕದನ ಶಮನವಾಯ್ತು.

ಕಮಕನೂರ್‌ ಸೋಲು- ಗೆಲುವಿನ ಲೆಕ್ಕಕ್ಕೆ ಬಿಜೆಪಿ ಸದಸ್ಯ ಟಕ್ಕರ್‌:

ಸಭೆಯಲ್ಲಿ ಮಾತಿಗಿಳಿದ ಎಂಎಲ್‌ಸಿ ತಿಪ್ಪಣ್ಣ ಕಮಕನೂರ್‌ ಮಾತ್‌ ಮಾತಲ್ಲೇ ತಮಗೆ ಪರಿಚಯಸ್ಥ ಹಲವು ಬಿಜೆಪಿ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತ ನಗರದಲ್ಲಿ ಬಿಜೆಪಿ ಅಸೆಂಬ್ಲಿ ಚುನಾವಣೆ ಸೋತಿತು, ಬಿಜೆಪಿ ಕೆಲಸ ಮಾಡಿದ್ದರೆ ಗೆಲ್ಲುತ್ತಿತ್ತು ಎಂದು ಛೇಡಿಸಿದಾಗ ಇದಕ್ಕೆ ಕೆರಳಿದ ಬಿಜೆಪಿ ಸದಸ್ಯ ಹೊನ್ನಳ್ಳಿ ಸೋಲು- ಗೆಲುವಿನ ಲೆಕ್ಕ ಈಗ ಬೇಡ. ನೀವು ಸಮಸ್ಯೆ ಮಾತನಾಡಿರೆಂದು ಹೇಳಿದಾಗ ಕಮಕನೂರ್‌ ವಿಷಯ ಅಲ್ಲಿಗೇ ಬಿಟ್ಟು ನಗರಾಭಿವೃದ್ಧಿಯತ್ತ ಹೊರಳಿದರು.

ಮೈಕ್‌ ಕಿತ್ತು ಬಿಸಾಕಿದ ಶಿರವಾಳ:

ಪಾಲಿಕೆಯ ಕಾಂಗ್ರೆಸ್‌ ಸದಸ್ಯ ಸಚಿನ್‌ ಶಿರವಾಳ ತಾವು ಮಾತನಾಡುವಾಗ ಮೈಕ್‌ ಪದೇ ಪದೇ ಜೋರಾಗಿ ಶಿಳ್ಳು ಹಾಕಿದ್ದಕ್ಕೆ ಸಿಡಿಮಿಗೊಂಡು ತಮ್ಮ ಮುಂದಿನ ಮೇಜಿನ ಮೇಲಿದ್ದ ಮೈಕ್‌ ಸೆಟ್‌ ಸಿಟ್ಟಿನಿಂದ ಕಿತ್ತು ಬಿಸಾಕಿದರು. ಮೈಕನ್ನೇ ಸರಿಪಡಿಸದವರು ನಗರವನ್ನ ಹೇಗೆ ಸರಿಪಡಿಸುತತೀರಿ? ನಾಯಿ ಕಾಯ ಅದ್ಹೇಗೆ ತಪ್ಪಿಸುತ್ತೀರಿ ಎಂದು ಕೋಪಾವೇಶದಲ್ಲಿ ಕಿರುಚಾಡಿದರು. 2 ಸಭೆಗಳಿಂದಲೂ ತಾವು ಮೈಕ್‌ ಸರಿಪಡಿಸಿ ಎಂದು ಹೇಳಿದರೂ ಪಾಲಿಕೆಯವರು ತಮ್ಮ ಮಾತಿಗೆ ಕಿಮ್ಮತ್ತೇ ಕೊಡುತ್ತಿಲ್ಲವೆಂದು ಸಚೀನ್‌ ಶಿರವಾಳ ಸಿಡಿಮಿಗೊಂಡಾಗ ಸಭೆಯಲ್ಲಿ ಕೆಲಕಾಲ ಮೌನ ಆವರಿಸಿತ್ತು. ಕಿತ್ತು ಬಿಸಾಕಲ್ಪಟ್ಟರೂ ಸಭೆ ಮುಗಿಯೋವರೆಗೂ ಮೈಕ್‌ ಅರಚಾಟ ಹಾಗೇ ಸಾಗಿತ್ತು.

Share this article