ಬೆಂಗಳೂರು ದಕ್ಷಿಣ ಜಿಲ್ಲೆ ವ್ಯಾಪ್ತಿಯ ಬಿಡದಿಯಲ್ಲಿ ರೈತರ ಭೂಮಿ ಸ್ವಾಧೀನಪಡಿಸಿಕೊಂಡು ದೇಶದ ಮೊದಲ ಎಐ ಸಿಟಿಗೆ ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ದೋಸ್ತಿಗಳಾದ ಬಿಜೆಪಿ ಮತ್ತು ಜೆಡಿಎಸ್‌ ಸಮರ ಸಾರಿವೆ.

ಬೆಂಗಳೂರು :  ಬೆಂಗಳೂರು ದಕ್ಷಿಣ ಜಿಲ್ಲೆ ವ್ಯಾಪ್ತಿಯ ಬಿಡದಿಯಲ್ಲಿ ರೈತರ ಭೂಮಿ ಸ್ವಾಧೀನಪಡಿಸಿಕೊಂಡು ದೇಶದ ಮೊದಲ ಎಐ ಸಿಟಿಗೆ ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ದೋಸ್ತಿಗಳಾದ ಬಿಜೆಪಿ ಮತ್ತು ಜೆಡಿಎಸ್‌ ಸಮರ ಸಾರಿವೆ.

ಒಂದೆಡೆ, ಫಲವತ್ತಾದ ರೈತರ ಭೂಮಿ ಸ್ವಾಧೀನ ವಿರುದ್ಧ ಜೂ.21ರಂದು ಯೋಜನೆ ವ್ಯಾಪ್ತಿಯ 26 ಹಳ್ಳಿಗಳಲ್ಲಿ ಪಾದಯಾತ್ರೆ ಮಾಡುವುದಾಗಿ ಜೆಡಿಎಸ್‌ ಘೋಷಿಸಿದ್ದರೆ, ಮತ್ತೊಂದೆಡೆ ಭೂಸ್ವಾಧೀನ ರದ್ದುಪಡಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಿ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಜೆಡಿಎಸ್‌ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಪತ್ರ ಬರೆದು ಒತ್ತಾಯಿಸಿದ್ದಾರೆ.

‘ಬಿಡದಿಯಲ್ಲಿ ಗ್ರೇಟರ್‌ ಬೆಂಗಳೂರು ಸಮಗ್ರ ಟೌನ್‌ಶಿಪ್‌ (ಜಿಬಿಐಟಿ) ಯೋಜನೆ ಹೆಸರಿನಲ್ಲಿ ರೈತರ ಹಿತಾಸಕ್ತಿಗೆ ವಿರುದ್ಧವಾಗಿ ಹೊರಡಿಸಿರುವ ಭೂಸ್ವಾಧೀನದ ಅಂತಿಮ ಅಧಿಸೂಚನೆ ಸಂಬಂಧ ತಾವು ತಕ್ಷಣ ಮಧ್ಯಪ್ರವೇಶಿಸಿ ಈ ಅಧಿಸೂಚನೆ ಹಿಂಪಡೆಯಲು ಸರ್ಕಾರಕ್ಕೆ ಸೂಚಿಸಬೇಕು’ ಎಂದು ಉಭಯ ನಾಯಕರು ಪತ್ರದಲ್ಲಿ ರಾಹುಲ್‌ ಗಾಂಧಿ ಅವರನ್ನು ಒತ್ತಾಯಿಸಿದ್ದಾರೆ.

ಕರ್ನಾಟಕದ ಕಾಂಗ್ರೆಸ್‌ ಸರ್ಕಾರದ ನಿಮ್ಮ ಮುಖ್ಯಮಂತ್ರಿ ನಾಡಿನ ಅನ್ನದಾತ ರೈತರ ಹಿತ ನಿರ್ಲಕ್ಷಿಸುತ್ತಿದ್ದಾರೆ. ಗ್ರೇಟರ್‌ ಬೆಂಗಳೂರು ಸಮಗ್ರ ಟೌನ್‌ಶಿಪ್‌(ಜಿಬಿಐಟಿ) ಯೋಜನೆ ಹೆಸರಿನಲ್ಲಿ ಬಿಡದಿಯಲ್ಲಿ ಈ ಸರ್ಕಾರಿ ಭೂಕಬಳಿಕೆ ಬಗ್ಗೆ ನಿಮ್ಮ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಿ ಎಂದೂ ಅವರು ಒತ್ತಾಯಿಸಿದ್ದಾರೆ.

ಮಣ್ಣಿನ ಮಕ್ಕಳ ವಿರುದ್ಧದ ಯುದ್ಧ:

ರೈತರ ವಿರೋಧದ ನಡುವೆಯೂ ನಿಮ್ಮ ಮುಖ್ಯಮಂತ್ರಿ ಹೊರಡಿಸಿರುವ ಭೂಸ್ವಾಧೀನದ ಅಂತಿಮ ಅಧಿಸೂಚನೆ ರಾಷ್ಟ್ರವನ್ನು ಪೋಷಿಸುವ ಮಣ್ಣಿನ ಮಕ್ಕಳ ಮೇಲಿನ ನೇರ ಯುದ್ಧವಾಗಿದೆ. ರಿಯಲ್‌ ಎಸ್ಟೇಟ್‌ ವ್ಯವಹಾರಕ್ಕಾಗಿ ಈ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳಲಾಗುತ್ತಿದೆ. ಈ ಭೂಸ್ವಾಧೀನವು ಬಡವರ ಮೇಲಿನ ದಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಯೋಜನೆಯ ಬಲಿಪಶುಗಳಲ್ಲಿ ಬಹುಪಾಲು ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದವರು. ಈ ಕಾರ್ಪೊರೇಟ್ ವಿಸ್ತರಣೆ ನಿಲ್ಲಿಸದಿದ್ದಲ್ಲಿ ಸಾವಿರಾರು ಕುಟುಂಬಗಳು ಶಾಶ್ವತವಾಗಿ ಬೀದಿಗೆ ಬೀಳಲಿವೆ. ಹೀಗಾಗಿ ತಾವು ಈ ಬಡ ರೈತರ ಜೊತೆಗೆ ನಿಲ್ಲಿಸಬೇಕು. ಭೂಸ್ವಾಧೀನ ಸಂಬಂಧ ಹೊರಡಿಸಿರುವ ಅಂತಿಮ ಅಧಿಸೂಚನೆ ತಕ್ಷಣ ಹಿಂಪಡೆದು ಯೋಜನೆ ನಿಲ್ಲಿಸಬೇಕು ಎಂದು ವಿಜಯೇಂದ್ರ ಹಾಗೂ ನಿಖಿಲ್‌ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಏನಿದು ಬಿಡದಿ ಟೌನ್‌ಶಿಪ್‌

ಬೆಂಗಳೂರಿನ ಜನದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ, ರಾಜಧಾನಿಯಿಂದ 40 ಕಿ.ಮೀ ದೂರದ ಬಿಡದಿ ವ್ಯಾಪ್ತಿಯ 9000 ಎಕರೆ ಪ್ರದೇಶದಲ್ಲಿ 20000 ಕೋಟಿ ರು. ವೆಚ್ಚದ ಭವಿಷ್ಯದ ಸ್ಮಾರ್ಟ್‌ಸಿಟಿ ನಿರ್ಮಾಣಕ್ಕೆ ಮುಂದಾಗಿದೆ. ಈ ಕುರಿತು ಮೊದಲ ಹಂತದ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದೆ. ಆದರೆ ಕೃಷಿ ಫಲವತ್ತಾದ ಭೂಮಿ ಹಸ್ತಾಂತರಕ್ಕೆ ಕೆಲ ರೈತರು ಒಪ್ಪಿದ್ದರೆ, ಇನ್ನು ಕೆಲ ರೈತರು ವಿರೋಧಿಸುತ್ತಿದ್ದಾರೆ.

ರೈತರ ಕೈ ಬಿಡಲ್ಲ

ಬಿಡದಿ ಟೌನ್‌ಶಿಪ್‌ ಯೋಜನೆಯಲ್ಲಿ ನಾಡಿನ ಹಿತಾಸಕ್ತಿ ಅಡಗಿಲ್ಲ. ಭೂ ಮಾಫಿಯ, ಭೂ ಲೂಟಿಕೋರರಿಗೆ ಲಾಭ ಮಾಡಿಕೊಡಲು ಇದನ್ನು ರೂಪಿಸಲಾಗಿದೆ. ಯಾವುದೇ ಕಾರಣಕ್ಕೂ ರೈತರ ಭೂಮಿ ಕೊಳ್ಳೆ ಹೊಡೆಯಲು ಬಿಡುವುದಿಲ್ಲ. ನಮ್ಮ ಪಕ್ಷ ರೈತರ ಪರವಾಗಿ ನಿಲ್ಲುತ್ತದೆ. ಅವರ ಜತೆ ನಿಂತು ಕಾನೂನು ಹೋರಾಟ ನಡೆಸುತ್ತದೆ.

ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ