ಹಳಿಯಾಳ: ಪ್ರಸಕ್ತ ಸಾಲಿಗೆ ಕಬ್ಬಿಗೆ ದರವನ್ನು ನಿಗದಿಪಡಿಸಲು ಶನಿವಾರ ನಡೆದ ಕಬ್ಬು ಬೆಳೆಗಾರರ ಹಾಗೂ ಕಾರ್ಖಾನೆ ಆಡಳಿತ ಮಂಡಳಿಯವರ ಸಭೆಯು ಯಾವುದೇ ತೀರ್ಮಾನಕ್ಕೆ ಬರದೇ ವಿಫಲವಾಗಿದೆ.
ಅಕ್ಕಪಕ್ಕದ ಕಾರ್ಖಾನೆಯವರು ನೀಡುವ ದರಕ್ಕಿಂತ ಹಳಿಯಾಳದ ಕಾರ್ಖಾನೆಯವರು ಅತ್ಯಂತ ಕಡಿಮೆ ದರವನ್ನು ನೀಡುತ್ತಿದ್ದು, ಕಬ್ಬು ಕಟಾವು ಮತ್ತು ಸಾಗಾಟ ದರ ಆಕರಣೆಯಲ್ಲೂ ಶೋಷಿಸುತ್ತಿದ್ದಾರೆ ಎಂದರು.ಅಹವಾಲು ಆಲಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರು, ಕಬ್ಬು ಕಟಾವು ಮತ್ತು ಸಾಗಾಟ ದರವನ್ನು ಆಯಾ ಪ್ರದೇಶವಾರು ನಿಗದಿಪಡಿಸಲು ಸಮಿತಿಯನ್ನು ರಚಿಸಿ ಸಮೀಕ್ಷೆ ಮಾಡಲಾಗುವುದು. ಅಲ್ಲದೇ ಕಬ್ಬ ಬೆಳೆಗಾರರ ಮಂಡಿಸಿದ ವಿವಿಧ ಬೇಡಿಕೆಗಳನ್ನು ಪರಿಶೀಲಿಸಿ ನ್ಯಾಯವನ್ನು ನೀಡಲಾಗುವುದು ಎಂದರು.ಅಳೆದು ತೂಗಿ ದರ: ಕಾರ್ಖಾನೆಯ ಪರವಾಗಿ ಮಾತನಾಡಿದ ಕಬ್ಬು ವಿಭಾಗದ ಮುಖ್ಯಸ್ಥ ರಮೇಶ ರೆಡ್ಡಿ ಅವರು, ಸರ್ಕಾರ ನಿಗದಿಪಡಿಸದಂತೆ ಎಫ್ಆರ್‌ಪಿ ದರ ಪ್ರತಿ ಟನ್‌ಗೆ ₹3685ಗಳಿದ್ದು, ಈ ಬಾರಿ ಕಬ್ಬು ಕಟಾವು ಮತ್ತು ಸಾಗಾಟದ ದರವು ಹೆಚ್ಚಾಗಿದೆ. ಮಹಾರಾಷ್ಟ್ರದ ದರವನ್ನು ಹೆಚ್ಚಿಸಲಾಗಿದೆ. ಆದರೆ ನಮ್ಮ ಕಾರ್ಖಾನೆಯವರು ಕಬ್ಬು ಕಟಾವು ಮತ್ತು ಸಾಗಾಟದ ಹೆಚ್ಚಿನ ಹೊರೆಯನ್ನು ರೈತರ ಮೇಲೆ ಹೊರಿಸದೇ ಕಬ್ಬು ಕಟಾವು ಮತ್ತು ಸಾಗಾಟದ ದರ ಪ್ರತಿ ಟನ್ ಕಬ್ಬಿಗೆ ₹750 ನಿಗದಿಪಡಿಸಿ, ಈ ಪ್ರತಿ ಟನ ಕಬ್ಬಿಗೆ ₹2950 ನೀಡಲು ತೀರ್ಮಾನಿಸಿದ್ದೇವೆ ಎಂದರು.ದರ ತಿರಸ್ಕಾರ: ಕಬ್ಬಿನ ದರ ಕೇಳಿ ತೀವ್ರ ಆಕ್ರೋಶಿತಗೊಂಡ ಕಬ್ಬು ಬೆಳೆಗಾರರು ನೆರೆಯ ಖಾನಾಪುರದಲ್ಲಿ ಕಳೆದ ವರ್ಷ ಪ್ರತಿ ಟನ್ ಕಬ್ಬಿಗೆ ₹3050 ನೀಡಲಾಗಿದೆ. ಇಐಡಿ ಕಾರ್ಖಾನೆಯ ದರ ಯೋಗ್ಯವಾಗಿಲ್ಲ ಎಂದು ಆಕ್ಷೇಪಿಸಿ ಇನ್ನೂ ಹೆಚ್ಚಿನ ದರ ನೀಡುವಂತೆ ಪಟ್ಟು ಹಿಡಿದರು. ಈ ಹಿನ್ನೆಲೆ ಕಾರ್ಖಾನೆಯ ಆಡಳಿತ ಮಂಡಳಿಯ ವ್ಯವಸ್ಥಾಪಕ ಮುಖ್ಯಸ್ಥ ಬಾಲಾಜಿಯವರು ತಮ್ಮ ಕೇಂದ್ರ ಕಚೇರಿಯನ್ನು ಸಂಪರ್ಕಿಸಿ ಅರ್ಧ ಗಂಟೆಯ ನಂತರ ಬಂದು ತಮ್ಮ ತೀರ್ಮಾನವನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾಧಿಕಾರಿಗಳು ಪ್ರತಿ ಟನ್ ಕಬ್ಬಿಗೆ ಕಾಖಾನೆಯವರು ₹2975 ನೀಡಲು ಮುಂದಾಗಿದ್ದಾರೆಂದು ಘೋಷಿಸಿದರು. ಈ ತೀರ್ಮಾನಕ್ಕೆ ಕಬ್ಬು ಬೆಳೆಗಾರರು ಅಸಮಾಧಾನ ವ್ಯಕ್ತಪಡಿಸಿ, ದರವನ್ನು ತಿರಸ್ಕರಿಸುವುದಾಗಿ ಹೇಳಿದರು. ಸಭೆಯಲ್ಲಿ ಅಪರ್ ಜಿಲ್ಲಾಧಿಕಾರಿ ಸಾಜೀದ ಮುಲ್ಲಾ, ಹೆಚ್ಚುವರಿ ಎಸಿ ಜಗದೀಶ್, ಕಾರವಾರ ಎಸಿ ಕನಿಷ್ಕ, ಧಾರವಾಡ ಎಸಿ ಶಾಲಮಾ ಹುಸೇನ್, ಧಾರವಾಡ ಮತ್ತು ಉತ್ತರಕನ್ನಡ ಪ್ರಮುಖ ಅಧಿಕಾರಿಗಳು ಇದ್ದರು.