ಕನ್ನಡಪ್ರಭ ವಾರ್ತೆ ಮಂಗಳೂರು
ಇದು ನಿಜವಾಗಿ ನಡೆದ ಘಟನೆಯಲ್ಲ, ಭಾರತೀಯ ಕರಾವಳಿ ರಕ್ಷಣಾ ಪಡೆಯ 48ನೇ ಸಂಸ್ಥಾಪನಾ ದಿನದ ಅಂಗವಾಗಿ ಶುಕ್ರವಾರ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಉಪಸ್ಥಿತಿಯಲ್ಲಿ ನಡೆದ ಅಣಕು ಕಾರ್ಯಾಚರಣೆಯ ಸನ್ನಿವೇಶ.
ನವಮಂಗಳೂರು ಬಂದರಿನಿಂದ 40 ನಾಟಿಕಲ್ ಮೈಲ್ ದೂರದ ಆಳ ಸಮುದ್ರದಲ್ಲಿ ಈ ಅಣಕು ಕಾರ್ಯಾಚರಣೆ ನಡೆಸಲಾಯಿತು.ಸಮುದ್ರದಲ್ಲಿ ತುರ್ತು ಸಂದರ್ಭಗಳಲ್ಲಿ ಯಾವ ರೀತಿ ಕಾರ್ಯಾಚರಿಸಲಾಗುತ್ತಿದೆ ಎಂಬುದನ್ನು ತಟರಕ್ಷಣಾ ಪಡೆ ಸಿಬ್ಬಂದಿ ಪ್ರದರ್ಶಿಸಿದರು.
ಕೋಸ್ಟ್‌ಗಾರ್ಡ್‌ನ ವಿಕ್ರಂ ನೌಕೆಯಲ್ಲಿ ರಾಜ್ಯಪಾಲರು, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಸಿಇಒ ಡಾ.ಆನಂದ್, ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್, ಜಿಲ್ಲಾ ಎಸ್ಪಿ ರಿಷ್ಯಂತ್ ಹಾಗೂ ಮಾಧ್ಯಮ ಪ್ರತಿನಿಧಿಗಳಿದ್ದರು. ಇನ್ನೊಂದು ನೌಕೆಯನಲ್ಲಿ ಆಹ್ವಾನಿತ ಸಾರ್ವಜನಿಕರು ನೌಕಾ ಪಡೆಯ ಸಿಬ್ಬಂದಿಯ ವೈವಿಧ್ಯಮಯ, ಮೈ ನವಿರೇಳಿಸುವ ಅಣಕು ಕಾರ್ಯಾಚರಣೆ ವೀಕ್ಷಿಸಿದರು.
ತುರ್ತು ಸಂದರ್ಭದಲ್ಲಿ ರಕ್ಷಣಾ ಪಡೆಯ ನೌಕೆಯಿಂದ ಸಣ್ಣ ಬೋಟನ್ನು ಸಮುದ್ರಕ್ಕೆ ಇಳಿಸಿ, ಆ ಬೋಟ್‌ಗಳು ಸಮರೋಪಾದಿಯಲ್ಲಿ ಧಾವಿಸಿ ಸಂತ್ರಸ್ತರ ರಕ್ಷಣೆ ಮಾಡುವ ಕಸರತ್ತು, ಸಮುದ್ರದ ನಡುವೆ ಯಾವುದಾದರೂ ಬೋಟ್ ಅವಘಡಕ್ಕೀಡಾಗಿ ಅಗ್ನಿ ಅನಾಹುತ ಸಂಭವಿಸಿದರೆ ರಕ್ಷಣಾ ಪಡೆಯ ನೌಕೆಯಿಂದ ಅಗ್ನಿ ನಂದಿಸುವ ಕಾರ್ಯಾಚರಣೆ ಪ್ರದರ್ಶಿಸಲಾಯಿತು. ಡಾರ್ನಿಯರ್ ವಿಮಾನಗಳು ಹಾಗೂ ಎರಡು ಹೆಲಿಕಾಪ್ಟರ್‌ಗಳ ಗಸ್ತು ಕಾರ್ಯಾಚರಣೆಯೂ ನಡೆಯಿತು. ಸುಮಾರು ಮೂರು ಗಂಟೆ ಕಾಲ ನಡೆದ ಕಾರ್ಯಾಚರಣೆಯ ಕೊನೆಗೆ ತಟರಕ್ಷಣಾ ಪಡೆಯ ನೌಕೆಗಳು ರಾಜ್ಯಪಾಲರಿಗೆ ಗೌರವ ಸೆಲ್ಯೂಟ್ ನೀಡಿ ನಿರ್ಗಮಿಸಿದವು. ಇದಕ್ಕೂ ಮೊದಲು ಕೋಸ್ಟ್‌ಗಾರ್ಡ್ ವಿಕ್ರಂ ನೌಕೆಗೆ ಆಗಮಿಸಿದ ರಾಜ್ಯಪಾಲರಿಗೆ ಗೌರವ ವಂದನೆ ಸಲ್ಲಿಸಲಾಯಿತು.
ಕೋಸ್ಟ್‌ಗಾರ್ಡ್ ಸಾಹಸಮಯ ಅನುಭವ
ಮಳೆಗಾಲದ ಸಂದರ್ಭ ಕೋಸ್ಟ್‌ಗಾರ್ಡ್‌ನ ಹಡಗಿನಲ್ಲಿ ಕಾರ್ಯಾಚರಣೆಯಲ್ಲಿರುವುದು ವಿಶೇಷ ಅನುಭವ ನೀಡಿದೆ. ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಕೋಸ್ಟ್‌ಗಾರ್ಡ್‌ನ ಸಿಬ್ಬಂದಿ ಆಗಿರುವುದಕ್ಕೆ ಹೆಮ್ಮೆ ಇದೆ ಎನ್ನುತ್ತಾರೆ ಒಡಿಶಾ ಮೂಲದ ಸಿಬ್ಬಂದಿ.ಅಭಿಪ್ರಾಯ ಹಂಚಿಕೊಂಡ ಪಂಜಾಬ್‌ನ ಅಮಿತ್ ಶರ್ಮಾ, ಕೋಸ್ಟ್‌ಗಾರ್ಡ್‌ನ ಈ ಅದ್ಭುತ ಸಾಹಸಮಯ ಕವಾಯತು ನೋಡುವ ಮೊದಲ ಅವಕಾಶ ನನ್ನದಾಯಿತು. ದೇಶದ ಕಡಲು ರಕ್ಷಣೆಯಲ್ಲಿ ಕೋಸ್ಟ್‌ಗಾರ್ಡ್ ಪಾತ್ರ ಬಹುಮುಖ್ಯವಾಗಿದ್ದು, ನಮ್ಮ ಕೋಸ್ಟ್‌ಗಾರ್ಡ್ ನಮ್ಮ ಹೆಮ್ಮೆ ಎಂದು ಸಂತಸ ವ್ಯಕ್ತಪಡಿಸಿದರು.