ಸತ್ಪುರುಷರನ್ನು ಸಮಾಜಕ್ಕೆ ನೀಡಿದ ಗಾಣಿಗ ಸಮಾಜ

KannadaprabhaNewsNetwork |  
Published : May 21, 2024, 12:30 AM IST
ಗಾಣಿಗ ಸಮಾಜದಿಂದ ಗುರುವಂದನಾ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಉದ್ಘಾಟನೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರಗಾಣಿಗ ಸಮಾಜದವರು ಆಡಳಿತ, ರಾಜಕಾರಣ ಯಾವುದೇ ಕ್ಷೇತ್ರದಲ್ಲಿದ್ದರೂ ಸತ್ಯ, ಧರ್ಮಕ್ಕೆ ಪ್ರಾಶಸ್ತ್ಯ ನೀಡಿ ಕರ್ತವ್ಯ ನಿಷ್ಠೆಗೆ ಹೆಸರಾದವರು ಎಂದು ಮಾಜಿ ಶಾಸಕ ಜಿ.ಎಸ್.ನ್ಯಾಮಗೌಡ ಅಭಿಮತ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರಗಾಣಿಗ ಸಮಾಜದವರು ಆಡಳಿತ, ರಾಜಕಾರಣ ಯಾವುದೇ ಕ್ಷೇತ್ರದಲ್ಲಿದ್ದರೂ ಸತ್ಯ, ಧರ್ಮಕ್ಕೆ ಪ್ರಾಶಸ್ತ್ಯ ನೀಡಿ ಕರ್ತವ್ಯ ನಿಷ್ಠೆಗೆ ಹೆಸರಾದವರು ಎಂದು ಮಾಜಿ ಶಾಸಕ ಜಿ.ಎಸ್.ನ್ಯಾಮಗೌಡ ಅಭಿಮತ ವ್ಯಕ್ತಪಡಿಸಿದರು.

ವಿಜಯಪುರ ಜಿಲ್ಲಾ ಗಾಣಿಗ ಸಮಾಜ ಸಂಘ ನಗರದ ವನಶ್ರೀ ಮಠದ ಸಭಾಂಗಣದಲ್ಲಿ ಆಯೋಜಿಸಿದ್ದ ಗುರುವಂದನಾ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗಾಣಿಗ ಸಮಾಜ ಮಹಾನ್ ಸತ್ಪುರುಷರನ್ನು, ಸಾಧಕರನ್ನು ನಾಡಿಗೆ ಕೊಡುಗೆಯಾಗಿ ನೀಡಿದೆ. ಇಂತಹ ಸಮಾಜದಲ್ಲಿ ಜನಿಸಿ ಇಂದು ಯುಪಿಎಸ್‌ಸಿ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದ ಸಂತೋಷ ಶಿರಾಡೋಣ ಹಾಗೂ ಎಸ್ಎಸ್ಎಲ್‌ಸಿಯಲ್ಲಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಪಡೆದ ಅಂಕಿತಾ ಕೊಣ್ಣೂರ ಸಮಾಜದ ಹೆಮ್ಮೆಯ ಮಕ್ಕಳು ಎಂದು ಶ್ಲಾಘಿಸಿದರು.

ಮಲ್ಲಿಕಾರ್ಜುನ ಲೋಣಿಯವರು ರಾಜ್ಯಾದ್ಯಂತ ಗಾಣಿಗ ಸಮಾಜದ ಒಳಪಂಗಡಗಳನ್ನು ಒಗ್ಗೂಡಿಸಿ ಸಮಾಜ ಕಟ್ಟಿ ಎಂಎಲ್‌ಸಿ ಚುನಾವಣೆಯಲ್ಲಿ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಸಮಾಜ ಹಾಗೂ ಅವರ ಸಾಮರ್ಥ್ಯ ಗುರುತಿಸಿ ಕಾಂಗ್ರೆಸ್ ಅವರಿಗೆ ಜಿಲ್ಲಾಧ್ಯಕ್ಷ ಜವಾಬ್ದಾರಿ ನೀಡಿದೆ. ಪಕ್ಷಕ್ಕೆ ಅವರಿಂದ ಅನುಕೂಲವಾಗಿ ಅವರು ಅತ್ಯುನ್ನತ್ತಮ ಸ್ಥಾನಮಾನಗಳನ್ನು ಅಲಂಕರಿಸಲಿ‌ ಎಂದು ಶುಭ ಹಾರೈಸಿದರು.

ಮಾಜಿ ಎಂಎಲ್‌ಸಿ ಬಿ.ಜಿ.ಪಾಟೀಲ ಹಲಸಂಗಿ‌ ಅವರು ಮಾತನಾಡಿ, ಜಯದೇವ ಜಗದ್ಗುರುಗಳು ಜೋಳಿಗೆ ಇಲ್ಲದ ಜಂಗಮನಾಗಿ ದುಡಿಮೆ ಮೂಲಕ ವನಶ್ರೀ ಮಠ ಕಟ್ಟಿ ಸಮಾಜಕ್ಕೆ ಹತ್ತಾರು ಕೋಟಿಯಷ್ಟು ಆಸ್ತಿ ಕೊಟ್ಟು ಹೋಗಿದ್ದಾರೆ. ಶೀಘ್ರದಲ್ಲೇ ಅವರ ಗದ್ದುಗೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.

ಶಾಸಕ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಮಾತನಾಡಿ, ಸಾಧಕರಾದ ಸಂತೋಷ ಶಿರಡೋಣ, ಸಹೋದರಿ ಅಂಕಿತಾ ಕೊಣ್ಣೂರ ತಮ್ಮ‌ ಸಾಧನೆಗಳ ಮೂಲಕ ಯುವ ಸಮುದಾಯಕ್ಕೆ ದೊಡ್ಡ ಪ್ರೇರಣೆಯಾಗಿದ್ದಾರೆ. ಅಂಕಿತಾ ಕೊಣ್ಣೂರ ಅವರ ಭವಿಷ್ಯದ ಶಿಕ್ಷಣಕ್ಕಾಗಿ ನಮ್ಮ ತಂದೆಯವರು ಒಂದು ಲಕ್ಷ ಪ್ರೋತ್ಸಾಹಧನ ನೀಡಿದ್ದಾರೆ. ಅಂಕಿತಾ ಅವರ ಕನಸಿನಂತೆ ಐಎಎಸ್ ಅಧಿಕಾರಿಯಾಗಿ ಬಂದು ಇದೇ ವೇದಿಕೆಯಲ್ಲಿ ಮತ್ತೊಮ್ಮೆ ಸನ್ಮಾನಿತರಾಗಲಿ. ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದು ಪ್ರೋತ್ಸಾಹಿಸಿದರು.

ವನಶ್ರೀ ಗಾಣಿಗ ಗುರುಪೀಠದ ಡಾ.ಜಯಬಸವ ಕುಮಾರ ಜಗದ್ಗುರುಗಳು ಸಮಾಜದಿಂದ ಗುರುವಂದನೆ ಸ್ವೀಕರಿಸಿ ಮಾತನಾಡಿ, ಸಾಧಕರು ಬಸವಣ್ಣ, ಕುವೆಂಪು, ಸಿದ್ದೇಶ್ವರ ಅಪ್ಪ ಅವರ ಸಾಮರಸ್ಯ, ಸರಳತೆ ತತ್ವಗಳಂತೆ ಬೆಳೆಯಬೇಕು. ಸಂಘಟನೆ ಸಂಸ್ಕಾರವನ್ನು ಕಲಿಸುತ್ತದೆ. ಜಾತಿ ಹೆಸರಲ್ಲಿ ಒಗ್ಗೂಡಿದರೂ ಅಲ್ಲಿ ಜಾತಿಗಿಂತ ನೀತಿ ಮುಖ್ಯವಾಗಬೇಕು. ಪ್ರಯತ್ನಶೀಲರಿಗೆ, ನಿಸ್ವಾರ್ಥಿಗಳಿಗೆ ಎಂದಿಗೂ ಸೋಲಿಲ್ಲ ಎಂದು ಆಶಿರ್ವಚನ ನೀಡಿದರು.

ಉಪನ್ಯಾಸಕ ಮಲ್ಲಿಕಾರ್ಜುನ ಮೇತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಮಖಂಡಿಯ ಸಿದ್ದಮುತ್ಯಾ ಅವರು ಸಾನಿಧ್ಯವಹಿಸಿದ್ದರು.

ಜಿಲ್ಲಾ‌ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಯುಪಿಎಸ್ಸಿ ಸಾಧಕ ಸಂತೋಷ ಶಿರಾಡೋಣ ಹಾಗೂ ಅಂಕಿತಾ ಕೊಣ್ಣೂರ ಅವರು ಸನ್ಮಾನ ಸ್ವೀಕರಿಸಿ ಪ್ರೇರಣಾತ್ಮಕ ಮಾತುಗಳನ್ನಾಡಿದರು. ಅಂಕಿತಾ ಕೊಣ್ಣೂರಗೆ ಜಿಲ್ಲಾ‌ ಗಾಣಿಗ ಸಂಘದಿಂದ ₹1.11 ಲಕ್ಷ ಪ್ರೋತ್ಸಾಹಧನದ ಚೆಕ್‌ ವಿತರಿಸಿ ಗೌರವಿಸಲಾಯಿತು.

ಈ‌ ಸಂದರ್ಭದಲ್ಲಿ ರೂಗಿ ಮುಕ್ತಿಮಂದಿರ ಸುಗಲಮ್ಮತಾಯಿ ಸಾನಿಧ್ಯವಿದ್ದರು. ಮಾಜಿ‌ ಶಾಸಕ ರಮೇಶ ಭೂಸನೂರ, ಜಿಪಂ ಮಾಜಿ‌ ಅಧ್ಯಕ್ಷರಾದ ಶಿವಯೋಗಪ್ಪ ನೇದಲಗಿ, ಸೋಮನಾಥ ಬಾಗಲಕೋಟೆ, ಜಿಲ್ಲಾ ಗಾಣಿಗ ಸಂಘದ ಮಾಜಿ‌ ಜಿಲ್ಲಾಧ್ಯಕ್ಷ ಶರಣಬಸಪ್ಪ ಅರಕೇರಿ, ಗೌರವಾಧ್ಯಕ್ಷ ಬಿ.ಎಂ.ಪಾಟೀಲ್ ಕತ್ನಳ್ಳಿ, ಜಿಲ್ಲಾಧ್ಯಕ್ಷ ಬಿ.ಬಿ.ಪಾಸೋಡಿ, ಪ್ರಧಾನ ಕಾರ್ಯದರ್ಶಿ ಡಾ.ಬಾಬು ಸಜ್ಜನ ಸೇರಿದಂತೆ ಜಿಲ್ಲೆ ಹಾಗೂ ತಾಲೂಕು ಘಟಕಗಳ ಪದಾಧಿಕಾರಿಗಳು, ಶಿವಯೋಗಿ ಟ್ರಸ್ಟ್ ಸದಸ್ಯರು ಹಾಗೂ ಸಮಾಜದ ಗಣ್ಯರು,ಹಿರಿಯರು ಉಪಸ್ಥಿತರಿದ್ದರು.

-------------------

ಕೋಟ್‌

ರಾಜಕಾರಣದಲ್ಲಿ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರುತ್ತವೆ, ಹೋಗುತ್ತವೆ. ರಾಜಕೀಯದಲ್ಲಿ ಇದೆಲ್ಲ ಸಹಜ. ಆದರೆ ಸಂತೋಷ ಶಿರಾಡೋಣ ಇದ್ಯಾವುದಕ್ಕೂ ಲಕ್ಷ್ಯ ಕೊಡದೇ ಕಾರ್ಯಾಂಗದ ಒಂದು ಭಾಗವಾಗಿ ಕರ್ತವ್ಯನಿಷ್ಠರಾಗಿ ಗಟ್ಟಿತನದಿಂದ ಕೆಲಸ ಮಾಡಿ ದಕ್ಷ ಅಧಿಕಾರಿಯಾಗಿ ಮಾದರಿಯಾಗಬೇಕು. ಇನ್ನು ಸರ್ಕಾರಿ ಶಾಲೆಯಲ್ಲಿ ಓದಿ ಎಸ್ಎಸ್ಎಲ್‌ಸಿ ಯಲ್ಲಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಪಡೆದ ಅಂಕಿತಾ ಕೊಣ್ಣೂರ ಐಎಎಸ್ ಅಧಿಕಾರಿಯಾಗಬೇಕೆಂಬ ಗುರಿ ಸಾಕಾರಗೊಳಿಸುವಲ್ಲಿ ಆಕೆಯೊಂದಿಗೆ ಸಮಾಜ ನಿಲ್ಲಲಿದೆ.

ಜಿ.ಎಸ್.ನ್ಯಾಮಗೌಡ, ಮಾಜಿ ಶಾಸಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ