ಸರ್ಕಾರಿ ಆಸ್ಪತ್ರೆಯಲ್ಲಿ ಸಿಗದ ವೈದ್ಯರ ಸೇವೆ; ರೋಗಿಗಳ ಪರದಾಟ

KannadaprabhaNewsNetwork | Updated : May 20 2024, 11:52 AM IST

ಸಾರಾಂಶ

ಸಾತನೂರು ಸರ್ಕಾರಿ ಆಸ್ಪತ್ರೆಯಲ್ಲಿ ಸಮಯಕ್ಕೆ ಸರಿಯಾಗಿ ವೈದ್ಯರು ಸಿಗದೇ ರೋಗಿಗಳು ಪರದಾಡುತ್ತಿದ್ದಾರೆ. ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ರೈತ ಸಂಘದಿಂದ ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಶಿವಗೂಳಿಗೌಡ ಎಚ್ಚರಿಕೆ ನೀಡಿದರು.

 ಕನಕಪುರ :  ಸಾತನೂರು ಸರ್ಕಾರಿ ಆಸ್ಪತ್ರೆಯಲ್ಲಿ ಸಮಯಕ್ಕೆ ಸರಿಯಾಗಿ ವೈದ್ಯರು ಸಿಗದೇ ರೋಗಿಗಳು ಪರದಾಡುತ್ತಿದ್ದಾರೆ. ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ರೈತ ಸಂಘದಿಂದ ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಶಿವಗೂಳಿಗೌಡ ಎಚ್ಚರಿಕೆ ನೀಡಿದರು.

ಸಾತನೂರಿನಲ್ಲಿ ರೈತ ಸಂಘದ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾತನೂರು ಹೋಬಳಿ ಕೇಂದ್ರದಲ್ಲಿ ಸುಮಾರು 100 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣವಾಗಿದೆ. ಆದರೆ ಅದರ ಪ್ರಯೋಜನ ಮಾತ್ರ ಸಾರ್ವಜನಿಕರಿಗೆ ಸಿಗುತ್ತಿಲ್ಲ, ಈ ಆಸ್ಪತ್ರೆಯಲ್ಲಿ ವೈದ್ಯರು ಸಮಯಕ್ಕೆ ಸಿಗದಿದ್ದರಿಂದ ರೋಗಿಗಳು ಪರದಾಡುತ್ತಿದ್ದಾರೆ, ಸುಸಜ್ಜಿತ ಆಸ್ಪತ್ರೆಯಿದ್ದೂ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾತನೂರು ಹೋಬಳಿ ಆರೋಗ್ಯ ಕೇಂದ್ರದ ವೈದ್ಯರು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಬರುವುದಿಲ್ಲ, ತಮಗೆ ಇಷ್ಟ ಬಂದಾಗ ಬರುತ್ತಾರೆ, ಹೋಗುತ್ತಾರೆ. ಇಲ್ಲಿ ಯಾರು ಹೇಳುವವರು ಕೇಳುವವರೇ ಇಲ್ಲದಂತಾಗಿದೆ, ಸಾತನೂರು ಹೋಬಳಿ ವ್ಯಾಪ್ತಿ ಬರುವ ಗ್ರಾಮೀಣ ಭಾಗದ ರೈತರು,ಬಡವರು, ಕೂಲಿ ಕಾರ್ಮಿಕರು ಸರ್ಕಾರಿ ಆಸ್ಪತ್ರೆಯನ್ನೇ ಆಶ್ರಯಿಸಿದ್ದಾರೆ. ಆದರೆ ಸರಿಯಾದ ಚಿಕಿತ್ಸೆ ಸಿಗದೇ ಪರದಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬೆಳಗ್ಗೆ 10 ಗಂಟೆಗೆ ಬರಬೇಕಾದ ವೈದ್ಯರು 12 ಗಂಟೆಯಾದರೂ ಬರುವುದಿಲ್ಲ, ವಯೋವೃದ್ಧರು, ತುರ್ತು ಚಿಕಿತ್ಸೆಗೆ ಬರುವ ರೋಗಿಗಳು ವೈದ್ಯರಿಗಾಗಿ ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಔಷದಿ ವಿತರಣೆಯನ್ನು ಸಮರ್ಪಕವಾಗಿ ಮಾಡುತ್ತಿಲ್ಲ, ಕ್ಷೇತ್ರದ ಶಾಸಕರು ಸಹ ಇದರ ಬಗ್ಗೆ ಗಮನ ಹರಿಸುತ್ತಿಲ್ಲ, ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡಲೇ ಇಲ್ಲಿ ಸಮರ್ಪಕ ಆರೋಗ್ಯ ಸೇವೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರೈತ ಸಂಘದಿಂದ ದೊಡ್ಡ ಮಟ್ಟದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈತ ಸಂಘದ ಕಾರ್ಯದರ್ಶಿ ಸತೀಶ್ ಮಾತನಾಡಿ, ಸಾತನೂರು ಹೋಬಳಿ ಕೇಂದ್ರದಲ್ಲಿರುವ ಆಸ್ಪತ್ರೆ ಹೇಳಿಕೊಳ್ಳಲು ದೊಡ್ಡದು. ಗ್ರಾಮೀಣ ಭಾಗದ ಜನರಿಗೂ ಗುಣಮಟ್ಟದ ಆರೋಗ್ಯ ಸೇವೆ ಸಿಗಬೇಕು ಎಂಬ ಉದ್ದೇಶದಿಂದ ಸರ್ಕಾರ ಸುಸಜ್ಜಿತ ಆಸ್ಪತ್ರೆ ನಿರ್ಮಿಸಿದೆ. ಆದರೆ ಜನರಿಗೆ ಮಾತ್ರ ಗುಣಮಟ್ಟದ ಆರೋಗ್ಯ ಸೇವೆ ಸಿಗುತ್ತಿಲ್ಲ, ಆರೋಗ್ಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಿ, ಇಲ್ಲಿ ಸಮಯಕ್ಕೆ ಸರಿಯಾಗಿ ರೋಗಿಗಳಿಗೆ ವೈದ್ಯರ ಸೇವೆ ಸಿಗುವಂತೆ ನೊಡಿಕೊಳ್ಳಬೇಕು, ಇಲ್ಲದಿದ್ದರೆ ರೈತ ಸಂಘದಿಂದ ಬೃಹತ್ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಅನುಕುಮಾರ್, ಮುಖಂಡರಾದ ಮಹದೇವ್, ಸತೀಶ್, ಚನ್ನಪ್ಪ, ಶಿವರಾಜ್, ಸುರೇಶ್, ಹಳ್ಳಪ್ಪ, ಚನ್ನಿಂಗಣ, ಮಹದೇವ್ ಶೆಟ್ಟರ್ ಸೇರಿ ಹಲವು ಮುಖಂಡರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Share this article