ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ರೈತ ಹೆಚ್ಚು ಇಳುವರಿ ತೆಗೆಯುವ ನೆಪದಲ್ಲಿ ಪ್ರಮಾಣಕ್ಕೂ ಮೀರಿ, ರಸಗೊಬ್ಬರ ಹಾಗೂ ಅಪಾಯಕಾರಿ ಔಷಧಿ ಬಳಕೆಯಿಂದ ಫಲವತ್ತಾದ ಭೂಮಿಯನ್ನೇ ಬಂಜರು ಮಾಡಿದ್ದಾನೆ. ಭೂಮಿಯ ಫಲವತ್ತತೆಗೆ ಕೆರೆ ಹೂಳು ಆಸರೆಯಾಗಿದೆ.ಹೌದು, ತಾಲೂಕಿನಲ್ಲಿ ಹಿರೇಹಡಗಲಿಯ ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಕೆರೆಗೆ ತುಂಗಭದ್ರಾ ನದಿಯಿಂದ ಕೆರೆ ತುಂಬಿಸುವ ಯೋಜನೆಯಲ್ಲಿ ನೀರು ತುಂಬಿಸಲಾಗುತ್ತಿದೆ. ಈ ಬಾರಿ ಸಕಾಲದಲ್ಲಿ ಮಳೆ ಇಲ್ಲದೇ ಕೆರೆ ಸಂಪೂರ್ಣ ಬತ್ತಿ ಹೋಗಿತ್ತು. ಇದೇ ಸಂದರ್ಭದಲ್ಲಿ ಹಿರೇಹಡಗಲಿ ಹಾಗೂ ಅಕ್ಕಪಕ್ಕದೂರಿನ ರೈತರು ಜೆಸಿಬಿ ಹಾಗೂ ಟ್ರ್ಯಾಕ್ಟರ್ ಮೂಲಕ ಹೂಳೆತ್ತುವ ಕೆಲಸ ಮಾಡಿದ್ದಾರೆ. ಆ ಹೂಳನ್ನು ಬಂಜರು ಬಿದ್ದಿರುವ ಭೂಮಿಗೆ ಹಾಕುವ ಮೂಲಕ ಉತ್ತಮ ಕೆಲಸಕ್ಕೆ ಕೈ ಹಾಕಿದ್ದಾರೆ.
ನೀರಾವರಿ ಪ್ರದೇಶ ಮಾಡಿಕೊಳ್ಳಲು ರೈತರು ಕೊರೆಸಿದ ಕೊಳವೆಬಾವಿ ನೀರಿನಲ್ಲಿ ಪ್ಲೋರೈಡ್ ಅಂಶ ಇರುವ ಕಾರಣ, ಇದೇ ನೀರನ್ನು ಬೆಳೆಗಳಿಗೆ ನೀರುಣಿಸಿದ್ದಾರೆ. ಈ ನೀರಿನ ಬಳಕೆಯಿಂದ ಭೂಮಿಯ ಫಲವತ್ತತೆ ಇಲ್ಲದೇ ಬೆಳೆಗಳ ಇಳುವರಿ ಕುಂಠಿತವಾಗಿದೆ. ಇಂತಹ ಜಮೀನುಗಳಿಗೆ ರೈತರು ಕೆರೆ ಹೂಳನ್ನು ಬಳಕೆ ಮಾಡುತ್ತಿದ್ದಾರೆ.
ಸಾವಯವ ಸಾಹಸ:ತುಂಗಭದ್ರಾ ನದಿಗೆ ಪೈಪ್‌ಲೈನ್ ಹಾಕಿ ನೀರಾವರಿ ಸೌಲಭ್ಯ ಮಾಡಿಕೊಂಡ ರೈತರು ಹೆಚ್ಚಾಗಿ ಕಬ್ಬು, ಬಾಳೆ, ತೆಂಗು, ಅಡಿಕೆ ಬೆಳೆಯುತ್ತಿದ್ದಾರೆ. ಜತೆಗೆ ಭತ್ತದ ಗದ್ದೆಗಳಿಗೆ ಹೆಚ್ಚು ಔಷಧಿ, ರಸಗೊಬ್ಬರ ಬಳಕೆ ಮಾಡಿದ್ದಾರೆ. ಇಂತಹ ಭೂಮಿಗಳಿಗೂ ಕೆರೆ ಹೂಳು ಹಾಕಿದ್ದಾರೆ. ಬೆಳೆಗಳ ಇಳುವರಿ ಹೆಚ್ಚಿಸಲು ಗೊಬ್ಬರ ಬಳಕೆಯ ಬದಲು ಕೆರೆಯಲ್ಲಿನ ಫಲವತ್ತಾಗಿರುವ ಹೂಳಿನ ಬಳಕೆಯಿಂದ ಹೆಚ್ಚು ಇಳುವರಿ ಪಡೆಯುವ ಪ್ರಯತ್ನಕ್ಕೆ ರೈತರು ಮುಂದಾಗಿದ್ದಾರೆ.
ತುಂಗಭದ್ರಾ ನದಿ ಸೇರಿದಂತೆ ತಾಲೂಕಿನ ಬಹುತೇಕ ಕೆರೆಗಳು ನೀರಿಲ್ಲದೇ ಬತ್ತಿವೆ. ಜತೆಗೆ ಕೆರೆ ಸುತ್ತಮುತ್ತಲಿನ ರೈತರ ಕೊಳವೆಬಾವಿಗಳು ನೀರಿಲ್ಲದೇ ಬರಿದಾಗಿ, ಬೆಳೆ ಒಣಗಿವೆ. ಇಂತಹ ಸಂದರ್ಭದಲ್ಲಿ ಕೆರೆ ಹೂಳು ಎತ್ತುವುದರಿಂದ ಹೆಚ್ಚು ನೀರು ಸಂಗ್ರಹವಾಗಿ ಅಂತರ್ಜಲ ಹೆಚ್ಚಳಕ್ಕೆ ಸಹಕಾರಿಯಾಗುತ್ತದೆ. ತಾಲೂಕಿನಲ್ಲಿ ಸಾಕಷ್ಟು ಕೆರೆಗಳಿವೆ ಆಯಾ ಭಾಗದ ರೈತರು ಸ್ವಯಂ ಪ್ರೇರಿತರಾಗಿ ಕೆರೆ ಹೂಳು ಎತ್ತಿ ಜಮೀನುಗಳಿಗೆ ಬಳಸುತ್ತಿದ್ದಾರೆ. ಇಂತಹ ಪ್ರಯತ್ನಕ್ಕೆ ಎಲ್ಲರೂ ಮುಂದಾಗಬೇಕಿದೆ ಎನ್ನುವ ಅಭಿಪ್ರಾಯ ರೈತರಿಂದ ಕೇಳಿ ಬರುತ್ತಿದೆ.ಹಿರೇಹಡಗಲಿ ಕೆರೆಯಲ್ಲಿನ ಹೂಳನ್ನು ಲಾರಿ, ಟ್ರ್ಯಾಕ್ಟರ್ ಮೂಲಕ ಸುತ್ತಮುತ್ತಲಿನ ರೈತರು, 50 ಕಿ.ಮೀ. ದೂರದವರೆಗೆ ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ನೀರಿನ ಸಂಗ್ರಹ ಹೆಚ್ಚಾಗಲಿದ್ದು, ರೈತರೇ ಹಣ ವೆಚ್ಚ ಮಾಡಿ ತಮ್ಮ ಜಮೀನುಗಳಿಗೆ ಹಾಕಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಹಿರೇಹಡಗಲಿ ಚರಣ ಗುಂಡಿ.
ಭೂಮಿಯ ಫಲವತ್ತತೆ ಹೆಚ್ಚಿಸಿಕೊಳ್ಳಲು ಕೆರೆ ಹೂಳು ತುಂಬ ಅನುಕೂಲವಾಗುತ್ತದೆ. ನಮ್ಮ ಟ್ರ್ಯಾಕ್ಟರ್ ಬಳಕೆ ಮಾಡಿಕೊಂಡು ಮಣ್ಣು ತುಂಬುವ ಜೆಸಿಬಿಗೆ ₹100 ಕೊಟ್ಟು ಹೇರುತ್ತಿದ್ದೇವೆ ಎನ್ನುತ್ತಾರೆ ರೈತ ಮಲ್ಲಪ್ಪ.