ಸೊರಬ: ಶಬ್ದ ಬಳಕೆಯಲ್ಲಿ ಮಕ್ಕಳಿಗೆ ಮಾದರಿಯಾಬೇಕಾದ ಶಿಕ್ಷಣ ಸಚಿವರು ಚುನಾವಣಾ ಪ್ರಚಾರ ಸಭೆಯಲ್ಲಿ ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಹಿಡಿತ ಇಲ್ಲದೇ ಶಬ್ದ ಬಳಕೆ ಮಾಡುತ್ತಿರುವುದು ಪ್ರಬುದ್ಧತೆ ಲಕ್ಷಣವಲ್ಲ. ತಿದ್ದಿಕೊಳ್ಳದಿದ್ದರೆ ಜನರು ಪಾಠ ಕಲಿಸುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ, ಬಿಜೆಪಿ ರಾಜ್ಯ ಕಾರ್ಯದರ್ಶಿ ಡಿ.ಎಸ್.ಅರುಣ್ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಬಿಜೆಪಿ-ಜೆಡಿಎಸ್ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಚಿವ ಮಧು ಬಂಗಾರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವೈಯಕ್ತಿಕ ಆರೋಪ ಮಾಡುವುದನ್ನು ಬಿಜೆಪಿ ಸಹಿಸುವುದಿಲ್ಲ ಖಂಡಿಸುತ್ತದೆ. ಚುನಾವಣಾ ಪ್ರಕ್ರಿಯೆ ಪ್ರಾರಂಭವಾದಗಿನಿಂದ ಮಧು ಬಂಗಾರಪ್ಪ ನಾಲಗೆಯನ್ನು ಹರಿಬಿಡುತ್ತಿದ್ದಾರೆ. ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಸಂಭ್ರಮಾಚರಣೆ. ಇದನ್ನು ಮಲೀನಗೊಳಿಸುವುದು ಸರಿಯಲ್ಲ. ಹಿಂದಿನ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಿ. ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ 10 ವರ್ಷಗಳ ಆಡಳಿತಾವಧಿಯಲ್ಲಿನ ಅಭಿವೃದ್ಧಿ ಕಾರ್ಯಗಳ ಶ್ವೇತಪತ್ರವನ್ನು ಹೊರಡಿಸುತ್ತೇವೆ. ಅವರೂ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.ಸೊರಬ ಮಂಡಲ ಅಧ್ಯಕ್ಷ ಪ್ರಕಾಶ್ ತಲಕಾಲುಕೊಪ್ಪ ಮಾತನಾಡಿ, ತಾಲೂಕಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಹೊಂದಾಣಿಕೆಯಲ್ಲಿ ಯಾವುದೇ ಅಪಸ್ವರ, ಭಿನ್ನಾಭಿಪ್ರಾಯವಿಲ್ಲ. ಈಗಾಗಲೇ ಜೆಡಿಎಸ್ ಮುಖಂಡರೊಂದಿಗೆ 2 ಬಾರಿ ಸಮನ್ವಯ ಸಭೆ ನಡೆಸಿದ್ದೇವೆ. ಜೆಡಿಎಸ್‌ನ ಶಕ್ತಿಯೊಂದಿಗೆ ತಾಲೂಕಿನಲ್ಲಿ ಬಿಜೆಪಿ ಬಲ ಇನ್ನಷ್ಟು ಹೆಚ್ಚಿದೆ. ೨ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ತನ್ನದೇ ಆದ ವರ್ಚಸ್ಸು ಹೊಂದಿರುವ ಜೆಡಿಎಸ್ ಮುಖಂಡ ಬಾಸೂರು ಚಂದ್ರೇಗೌಡ ಕೂಡಾ ಬೆಂಬಲವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಾಲೂಕು ಚುನಾವಣಾ ಉಸ್ತುವಾರಿ ಮಾಜಿ ಶಾಸಕ ರಘುಪತಿ ಭಟ್, ಅಭ್ಯರ್ಥಿ ಬಿ.ವೈ. ರಾಘವೇಂದ್ರ, ಪರಿಷತ್ ಸದಸ್ಯ ಡಿ.ಎಸ್.ಅರುಣ್ ಭೇಟಿ ಮಾಡಿದ್ದಾರೆ ಎಂದರು.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಮತ್ತು ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮೆಚ್ಚಿ ಎನ್‌ಡಿಎ ಮೈತ್ರಿ ಕೂಟಕ್ಕೆ ಸೇರಿಕೊಂಡಿದ್ದಾರೆ. ಈ ಮೂಲಕ ರಾಜ್ಯದ ೨೮ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದಲಾಗಿದೆ ಎಂದರು.ಜಂಟಿ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಡಸೂರು, ಜಿಲ್ಲಾ ಕಾರ್ಯದರ್ಶಿ ದೇವೇಂದ್ರಪ್ಪ ಚನ್ನಾಪುರ, ಟೌನ್ ಅಧ್ಯಕ್ಷ ಅಶೋಕ್ ಶೇಟ್, ಮುಖಂಡರಾದ ಜಾನಕಪ್ಪ, ಡಿ.ಶಿವಯೋಗಿ, ಜೆಡಿಎಸ್ ಟೌನ್ ಅಧ್ಯಕ್ಷ ಶ್ರೀಧರ ಶೇಟ್, ಚುನಾವಣಾ ವೀಕ್ಷಕ ಅಣ್ಣಪ್ಪ, ಜೆಡಿಎಸ್ ಮುಖಂಡರಾದ ರಾಮಣ್ಣ ಕೊಡಕಣಿ, ಗಣೇಶ್, ನಾಗೇಶ್ ಗುಡ್ಡೇಕೊಪ್ಪ, ತುಳಜಪ್ಪ, ಲಿಂಗೇಶ್ ಮೊದಲಾದವರು ಹಾಜರಿದ್ದರು.