ಸಾರಾಂಶ
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅ.17ರಿಂದ ಹೆಚ್ಚಲಿರುವ ಪ್ರಯಾಣಿಕರ ಒತ್ತಡ ನಿವಾರಣೆಗಾಗಿ ಕೆಎಸ್ಸಾರ್ಟಿಸಿ ಜತೆಗೆ ಬಿಎಂಟಿಸಿಯಿಂದ 960 ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲಾಗುತ್ತಿದೆ.
ಬೆಂಗಳೂರು : ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅ.17ರಿಂದ ಹೆಚ್ಚಲಿರುವ ಪ್ರಯಾಣಿಕರ ಒತ್ತಡ ನಿವಾರಣೆಗಾಗಿ ಕೆಎಸ್ಸಾರ್ಟಿಸಿ ಜತೆಗೆ ಬಿಎಂಟಿಸಿಯಿಂದ 960 ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲಾಗುತ್ತಿದೆ.
ವಾರಾಂತ್ಯ ಹಾಗೂ ದೀಪಾವಳಿ ಹಬ್ಬ ಹಿನ್ನೆಲೆಯಲ್ಲಿ ಅ. 18ರಿಂದ ಅ.22ರವರೆಗೆ ರಜೆಯಿದೆ. ಆ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ರಾಜ್ಯದ ವಿವಿಧ ನಗರಗಳಿಗೆ ತೆರಳುವವರ ಸಂಖ್ಯೆ ಹೆಚ್ಚಲಿದೆ. ಅದಕ್ಕಾಗಿ ಕೆಎಸ್ಸಾರ್ಟಿಸಿಯಿಂದ ಅ. 17ರಿಂದ 20ವರೆಗೆ 2,500 ಹೆಚ್ಚುವರಿ ಬಸ್‌ಗಳ ಮೂಲಕ ಸೇವೆ ನೀಡಲಿದೆ. ಜತೆಗೆ ಬಿಎಂಟಿಸಿಯಿಂದ ರಾಜ್ಯದ ವಿವಿಧ ನಗರಗಳಿಗೆ 960 ಹೆಚ್ಚುವರಿ ಬಸ್‌ಗಳ ಸೇವೆ ನೀಡಲು ಆದೇಶಿಸಲಾಗಿದೆ. ಈ ಬಸ್‌ಗಳನ್ನು ಅ.17ರಿಂದ 20ರವರೆಗೆ ಸೇವೆ ನೀಡಲಿದೆ.
ಚಿತ್ರದುರ್ಗ, ಶಿವಮೊಗ್ಗ, ಧರ್ಮಸ್ಥಳ, ದಾವಣಗೆರೆ, ಹಾಸನ, ಬಳ್ಳಾರಿ, ರಾಯಚೂರು, ಮೈಸೂರು, ಕೊಳ್ಳೇಗಾಲ ಸೇರಿ ವಿವಿಧ ನಗರಗಳಿಗೆ ಬಿಎಂಟಿಸಿಯಿಂದ ಬಸ್ ಸೇವೆ ನೀಡಲಾಗುತ್ತಿದೆ. ಈ ಮಾರ್ಗಗಳಿಗೆ ಫಾಸ್ಟ್‌ಟ್ಯಾಗ್ ಅಳವಡಿಕೆ ಮಾಡಲಾಗಿರುವ ಬಸ್‌ಗಳನ್ನು ಮಾತ್ರ ಕಾರ್ಯಾಚರಣೆಗಿಳಿಸುವಂತೆ ಘಟಕ ವ್ಯವಸ್ಥಾಪಕರಿಗೆ ನಿರ್ದೇಶಿಸಲಾಗಿದೆ.
ದೀಪಾವಳಿಗೆ ಬೆಂಗಳೂರು-ಗೋವಾ ಮಧ್ಯೆ ವಿಶೇಷ ರೈಲು
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಭಾಯಿಸಲು ನೈಋತ್ಯ ರೈಲ್ವೆ ಬೆಂಗಳೂರು - ಗೋವಾ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ಕಲ್ಪಿಸಿದೆ.
ಕೆಎಸ್ಆರ್ ಬೆಂಗಳೂರು-ವಾಸ್ಕೊ-ಡ-ಗಾಮ-ಬೆಂಗಳೂರು ಕಂಟೋನ್ಮೆಂಟ್ ಎಕ್ಸ್‌ಪ್ರೆಸ್ ವಿಶೇಷ ರೈಲು ಒಂದು ಟ್ರಿಪ್ ಸಂಚರಿಸಲಿದೆ. ಈ ರೈಲು ( 07317) ಅ.17 ರಂದು ರಾತ್ರಿ 11.25ಕ್ಕೆ ಕೆಎಸ್ಆರ್ ಬೆಂಗಳೂರಿನಿಂದ ಹೊರಟು, ಮರುದಿನ ಮಧ್ಯಾಹ್ನ 2.55ಕ್ಕೆ ವಾಸ್ಕೊ-ಡ-ಗಾಮ ತಲುಪಲಿದೆ. ವಾಪಸ್ ಬರುವ ರೈಲು (07318) ಅ. 18 ರಂದು ಸಂಜೆ 5ಕ್ಕೆ ವಾಸ್ಕೊ-ಡ-ಗಾಮದಿಂದ ಹೊರಟು, ಮರುದಿನ ಬೆಳಗ್ಗೆ 8.30ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.
ಈ ರೈಲು ಬೆಂಗಳೂರು ಕಂಟೋನ್ಮೆಂಟ್, ಎಸ್ಎಂವಿಟಿ ಬೆಂಗಳೂರು, ತುಮಕೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಎಸ್ಎಂಎಂ ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಕ್ಯಾಸಲ್ ರಾಕ್, ಕುಲೆಮ್, ಸ್ಯಾನ್’ವೊರ್ಡೆಮ್, ಮತ್ತು ಮಡಗಾಂವ್ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಒಟ್ಟು 22 ಬೋಗಿಗಳ ಸಂಯೋಜನೆ ಹೊಂದಿದ್ದು, ಅದರಲ್ಲಿ 13 ಎಸಿ 3-ಟೈರ್, 7 ಸ್ಲೀಪರ್ ದರ್ಜೆ ಮತ್ತು 2 ಲಗೇಜ್-ಕಮ್-ಬ್ರೇಕ್ ವ್ಯಾನ್’ಗಳು ಇರಲಿವೆ.