ಸಾರಾಂಶ
ಬೆಂಗಳೂರು ಒಂದರಲ್ಲೇ ಪ್ರತೀ ವರ್ಷ 943 ಟನ್ ಆಹಾರ ವ್ಯರ್ಥ ಆಗುತ್ತಿದೆ. ಸುಮಾರು 360 ಕೋಟಿ ಮೌಲ್ಯದ ಆಹಾರ ವ್ಯರ್ಥ ಮಾಡಲಾಗುತ್ತಿದೆ. ಗೊತ್ತಿದ್ದು ಆಹಾರ ವ್ಯರ್ಥ ಮಾಡುವುದು ಅನ್ನಕ್ಕೆ ತೋರುವ ಅಹಂಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು : ಬೆಂಗಳೂರು ಒಂದರಲ್ಲೇ ಪ್ರತೀ ವರ್ಷ 943 ಟನ್ ಆಹಾರ ವ್ಯರ್ಥ ಆಗುತ್ತಿದೆ. ಸುಮಾರು 360 ಕೋಟಿ ಮೌಲ್ಯದ ಆಹಾರ ವ್ಯರ್ಥ ಮಾಡಲಾಗುತ್ತಿದೆ. ಗೊತ್ತಿದ್ದು ಆಹಾರ ವ್ಯರ್ಥ ಮಾಡುವುದು ಅನ್ನಕ್ಕೆ ತೋರುವ ಅಹಂಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ‘ಉತ್ತಮ ಆಹಾರಗಳು ಮತ್ತು ಉತ್ತಮ ಭವಿಷ್ಯಕ್ಕಾಗಿ ಕೈ ಜೋಡಿಸಿ’ ಧ್ಯೇಯ ವಾಕ್ಯದಡಿ ಆಯೋಜಿಸಿದ್ದ ವಿಶ್ವ ಆಹಾರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ನಾವು ಒಂದು ಕಾಲದಲ್ಲಿ ಅನ್ನಕ್ಕಾಗಿ ಅಮೆರಿಕದ ಮೇಲೆ ಅವಲಂಭಿತರಾಗಿದ್ದೆವು. ಈಗ ವಿದೇಶಗಳಿಗೆ ರಫ್ತು ಮಾಡುವ ಮಟ್ಟಕ್ಕೆ ಪ್ರಗತಿ ಸಾಧಿಸಿದ್ದೇವೆ. ಯಾರೂ ಹಸಿವಿನಿಂದ ಮಲಗಬಾರದು ಎನ್ನುವುದು ಕಾಂಗ್ರೆಸ್ ಬದ್ದತೆ. ಹೀಗಾಗಿ ಕಾಂಗ್ರೆಸ್ ಬಡವರ ಪರವಾದ ಯೋಜನೆಗಳನ್ನು ಜಾರಿಗೆ ತಂದಿದೆ. ಆಹಾರ ಭದ್ರತೆ ಕಾಯ್ದೆಯನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿತ್ತು. ಬಡವರ ವಿರೋಧಿ ನೀತಿ ಬಿಜೆಪಿಯ ಸಿದ್ಧಾಂತ. ಇದನ್ನು ಅರ್ಥ ಜನರು ಮಾಡಿಕೊಳ್ಳಬೇಕು ಎಂದರು.
ಅನ್ನಭಾಗ್ಯದ ಅಕ್ಕಿ ಸಂಗ್ರಹಿಸಿ ಕಾಳ ಸಂತೆಯಲ್ಲಿ ಮಾರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಾಳ ಸಂತೆ ಮಾರಾಟ ತಪ್ಪಿಸಲು 5 ಕೆಜಿ ಅಕ್ಕಿ ಕೊಟ್ಟು ಉಳಿದ ಐದು ಕೆಜಿ ಕಾಳು, ಬೇಳೆ ವಿತರಿಸಲು ತೀರ್ಮಾನಿಸಿದ್ದೇವೆ ಎಂದ ಅವರು, ಆಹಾರದ ಬಗ್ಗೆ ಜಾಗ್ರತೆ, ಸಣ್ಣ ರೈತರ ರಕ್ಷಣೆ ಮಾಡುವುದು ನಮ್ಮ , ನಿಮ್ಮ ಮತ್ತು ನಾಗರಿಕ ಸಮಾಜದ ಜವಾಬ್ದಾರಿ ಎಂದು ಹೇಳಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಅನ್ನಭಾಗ್ಯ ಯೋಜನೆಯಲ್ಲಿ ಹೆಚ್ಚುವರಿಯಾಗಿ ನೀಡಲಾಗುತ್ತಿರುವ ಅಕ್ಕಿ ದುರ್ಬಳಕೆಯಾಗುತ್ತಿರುವುದನ್ನು ತಪ್ಪಿಸಲು, ಎಣ್ಣೆ, ಬೇಳೆ, ಸಕ್ಕರೆ, ಉಪ್ಪು ಸೇರಿದಂತೆ ಐದಾರು ಪದಾರ್ಥಗಳಿರುವ ಇಂದಿರಾ ಕಿಟ್ ವಿತರಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ನಾವು ಯಾರ ಒತ್ತಡಕ್ಕೂ ಒಳಗಾಗಿ ಈ ತೀರ್ಮಾನ ಮಾಡಿಲ್ಲ. ಈ ವಿಚಾರವಾಗಿ ಸಮೀಕ್ಷೆ ನಡೆಸಿ, ಜನಸಾಮಾನ್ಯರು ಹಾಗೂ ಶಾಸಕರ ಜೊತೆ ಚರ್ಚಿಸಿ ತೀರ್ಮಾನ ಮಾಡಿದ್ದೇವೆ ಎಂದರು.
ಈ ಹಿಂದೆ ಉಚಿತ ಗ್ಯಾಸ್ ನೀಡುವ ಯೋಜನೆಗೆ ಮೋದಿ ಫೋಟೋ ಹಾಕಿ ಎಲ್ಲಾ ಪೆಟ್ರೋಲ್ ಬಂಕ್ ಗಳ ಮುಂದೆ ಹಾಕುತ್ತಿದ್ದರು. ಈಗ ಅದನ್ನು ನಿಲ್ಲಿಸಿದ್ದಾರೆ. 400 ರು.ಇದ್ದ ಅಡುಗೆ ಅನಿಲ 1100ಕ್ಕೆ ಏರಿಕೆಯಾಗಿತ್ತು. ಎಲ್ಲ ದರ ಬೆಲೆಗಳು ಗಗನಕ್ಕೇರಿದೆ, ಆದಾಯ ಪಾತಾಳಕ್ಕೆ ಕುಸಿದಿದೆ ಎಂದು ನಾವು ಗ್ಯಾರಂಟಿ ಯೋಜನೆ ಜಾರಿ ಮಾಡಿದೆವು. ಇದಕ್ಕೆ ಪ್ರತಿ ವರ್ಷ 53 ಸಾವಿರ ಕೋಟಿ ಅನುದಾನ ನೀಡುತ್ತಿದ್ದೇವೆ. ಪ್ರಧಾನಮಂತ್ರಿಗಳು ಹಾಗೂ ಇತರೆ ನಾಯಕರು ನಮ್ಮ ಯೋಜನೆ ಟೀಕೆ ಮಾಡಿದರೂ ಕೊನೆಗೆ ತಮ್ಮ ರಾಜಕೀಯ ಸ್ಥಾನಮಾನ ಉಳಿಸಿಕೊಳ್ಳಲು ನಮ್ಮ ಯೋಜನೆಗಳನ್ನು ನಕಲು ಮಾಡುತ್ತಿದ್ದಾರೆ. ಬಿಹಾರದಲ್ಲಿ ಚುನಾವಣೆಯೇ ಘೋಷಣೆಯೇ ಆಗದಿದ್ದ ವೇಳೆಯಲ್ಲೇ ಆ ರಾಜ್ಯದ ಮಹಿಳೆಯರ ಖಾತೆಗೆ 10 ಸಾವಿರ ಹಾಕುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಹಸಿವಿನಿಂದ ಯಾರೂ ಬಳಲಬಾರದು ಎಂದು ನಮ್ಮ ಸರ್ಕಾರ ಪಂಚ ಗ್ಯಾರಂಟಿ ಕೊಟ್ಟಿದ್ದು ಕಳೆದ ಎರಡೂವರೆ ವರ್ಷದಲ್ಲಿ 1 ಲಕ್ಷ ಕೋಟಿ ರು.ಗಳ ಅನುದಾನ ಕೊಟ್ಟಿದೆ ಎಂದರು.
ಕಾರ್ಯಕ್ರಮದಲ್ಲಿ ವಸತಿ ಸಚಿವರಾದ ಜಮೀರ್ ಅಹ್ಮದ್ ಖಾನ್, ಮುಖ್ಯಮಂತ್ರಿ ಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ಶಾಸಕರಾದ ರವಿ, ಬಸವಣಗೌಡ ಬಾದರ್ಲಿ, ಶ್ರೀನಿವಾಸ್, ಆರ್ಯ ವೈಶ್ಯ ನಿಗಮದ ಅಧ್ಯಕ್ಷರಾದ ರಾಮಪ್ರಸಾದ್, ಸಚಿವರ ಆಪ್ತ ಕಾರ್ಯದರ್ಶಿ ಡಾ.ಎಚ್.ನಟರಾಜ್ ಸೇರಿದಂತೆ ಇತರರು ಇದ್ದರು.