ಬಿ.ರಾಮಪ್ರಸಾದ್ ಗಾಂಧಿ
ಹರಪನಹಳ್ಳಿ: ಪಟ್ಟಣದ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ಮೂಲಭೂತ ಸೌಕರ್ಯವಿಲ್ಲದೇ ನರಳುತ್ತಿದ್ದು, ಕಾಯಕಲ್ಪಕ್ಕಾಗಿ ಕಾದು ಕುಳಿತಿದೆ.ಸುಮಾರು ವರ್ಷಗಳ ಹಿಂದೆ ನಿರ್ಮಿಸಿದ್ದ ಬಸ್ ನಿಲ್ದಾಣ ಇಂದಿನ ಭಾರೀ ಬಸ್ ಗಳ ಓಡಾಟಕ್ಕೆ ನಲುಗಿದೆ. ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ದೊರೆತ ನಂತರ ಎಲ್ಲ ಬಸ್‌ಗಳು ತುಂಬಿ ತುಳುಕುತ್ತಿವೆ. ಇಲ್ಲಿಯ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಎಲ್ಲೆಂದರಲ್ಲಿ ಕಸ ಬಿದ್ದಿರುತ್ತದೆ. ಪ್ರಯಾಣಿಕರು ಕುಳಿತುಕೊಳ್ಳುವ ಬೆಂಚುಗಳ ಹಿಂದೆ, ಮುಂದೆ ಕಸ ತುಂಬಿರುತ್ತದೆ.
ನಿಲ್ದಾಣದ ಕಂಪೌಂಡ್ ಒಳಗೆ, ತೆಗ್ಗಿನಮಠದ ಕಡೆ ಕಸದ ರಾಶಿಯೇ ಬಿದ್ದಿದೆ. ಜೊತೆಗೆ ಆಗಾಗ ಸೈಕಲ್ ನಿಲುಗಡೆಯ ಬಳಿ ಇರುವ ಶೌಚಾಲಯ ಗುಂಡಿ ತುಂಬಿ ಆವರಣದ ಕಾಂಕ್ರಿಟ್ ರಸ್ತೆಗೆ ಹರಿಯುತ್ತಿರುತ್ತದೆ. ಶೌಚಾಲಯ ಗುಂಡಿ ತುಂಬಿ ಹರಿದು ಬಸ್ ನಿಲ್ದಾಣಕ್ಕೆ ಬರುವವರಿಗೆ ಗಬ್ಬು ವಾಸನೆ ತಾಕುತ್ತದೆ.ನಿಲ್ದಾಣದಲ್ಲಿರುವ ಪುರುಷ ಹಾಗೂ ಮಹಿಳೆಯರ ಶೌಚಾಲಯಗಳು ಹದಗೆಟ್ಟು ಹೋಗಿವೆ. ಒಳಗೆ ಹೋದರೆ ಯಾವಾಗ ಹೊರಗೆ ಬಂದೆನೋ ಎಂಬಂತೆ ಭಾಸವಾಗುತ್ತದೆ.
ನಿಲ್ದಾಣದ ಕ್ಯಾಂಟಿನ್ ಬಳಿ ಇರುವ ಶುದ್ಧ ಕುಡಿಯುವ ನೀರಿನ ಘಟಕ ಪದೇಪದೇ ಕೆಟ್ಟು ಹೋಗುತ್ತಿದೆ. ಇಲ್ಲಿಯ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿಲ್ಲ, ಸ್ವಚ್ಛತೆ ಮರೀಚಿಕೆಯಾಗಿದೆ.ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಮಳಿಗೆಗಳಿಂದ ಅಂದಾಜು ₹2.50 ಲಕ್ಷದಿಂದ ₹3 ಲಕ್ಷ ಬಾಡಿಗೆ ಬರುತ್ತದೆ. ಶೌಚಾಲಯ ಟೆಂಡರ್ ಗಳಿಂದಲೂ ಲಾಭವಿದೆ. ಈ ಬಸ್ ನಿಲ್ದಾಣದ ಮೂಲಕ ಪ್ರಯಾಣಿಸುವವರ ಸಂಖ್ಯೆ ಸಹ ಹೆಚ್ಚಾಗಿದೆ. ಆದರೆ ಈ ಬಸ್ ನಿಲ್ದಾಣ ತಿಪ್ಪೇಗುಂಡಿಯಾಗಿರುವುದಂತೂ ಸತ್ಯ. ಪ್ರಯಾಣಿಕರು ಸಾರಿಗೆ ಸಂಸ್ಥೆ ಮೇಲೆ ರೊಚ್ಚಿಗೇಳುವುದಕ್ಕಿಂತ ಮುಂಚೆ ಎಚ್ಚೆತ್ತುಕೊಂಡು ಬಸ್ ನಿಲ್ದಾಣಕ್ಕೆ ಕಾಯಕಲ್ಪ ಕೊಡುವುದು ಒಳ್ಳೆಯದು.
ಶೌಚಾಲಯ ಗುಂಡಿ ರಿಪೇರಿ ಬಗ್ಗೆ ನಮ್ಮ ಇಲಾಖೆಯ ಎಇಇ ಬಳಿ ಮಾತನಾಡಿದ್ದೇನೆ. ಕುಡಿಯುವ ನೀರಿನ ಘಟಕವನ್ನು ಮೂರು ಬಾರಿ ದುರಸ್ತಿ ಮಾಡಿಸಿದ್ದೇವೆ. ಯಾರೋ ಅದರ ಒಳಗಿನ ವೈರ್ ಕಟ್ ಮಾಡುತ್ತಾರೆ, ಏನು ಮಾಡಲಿಕ್ಕೆ ಆಗುತ್ತೆ? ಇನ್ನೊಮ್ಮೆ ರಿಪೇರಿ ಮಾಡಿಸುತ್ತೇವೆ ಎನ್ನುತ್ತಾರೆ ಹರಪನಹಳ್ಳಿ ಡಿಪೋ ವ್ಯವಸ್ಥಾಪಕಿ ಎಂ.ಮಂಜುಳಾ.