ಎಮಿಷನ್ ಟೆಸ್ಟ್‌ಗೆ ಸಂಚಾರಿ ವಾಹನ

KannadaprabhaNewsNetwork |  
Published : Jan 24, 2024, 02:02 AM IST
ಕಾರವಾರದಲ್ಲಿ ವಾಹನಗಳ ಹೊಗೆ ತಪಾಸಣೆಗೆ ನಿಂತಿರುವ ವಾಹನ. | Kannada Prabha

ಸಾರಾಂಶ

ಪ್ರತಿ ವಾಹನದ ಮಾಲೀಕ ಹೊಸ ವಾಹನ ಖರೀದಿಯ ೧ ವರ್ಷದ ಬಳಿಕ, ಆ ವಾಹನ ಎಷ್ಟು ಪ್ರಮಾಣದಲ್ಲಿ ಹೊಗೆ ಹೊರ ಸೂಸುತ್ತಿದೆ. ಪೆಟ್ರೋಲ್ ವಾಹನಗಳಲ್ಲಿ ಹೈಡೋ ಕಾರ್ಬನ್, ಕಾರ್ಬನ್ ಮೋನಾಕ್ಸೆಡ್ ಹೆಚ್ಚಿನ ಪ್ರಮಾಣ ಹೊರ ಬರುತ್ತಿದೆಯೋ ಅಥವಾ ಡಿಸೇಲ್ ವಾಹನದಲ್ಲಿ ಹೊಗೆ ದಟ್ಟಣೆ ಪ್ರಮಾಣ ಹೆಚ್ಚಿದೆಯೋ ಅಥವಾ ಕಡಿಮೆ ಪ್ರಮಾಣದಲ್ಲಿ ಹೊಗೆ ಹೊರ ಸೂಸುತ್ತಿದೆಯೋ ಎನ್ನುವುದನ್ನು ಪರೀಕ್ಷೆ ಮಾಡಿಸಲೇಬೇಕು.

ಜಿ.ಡಿ. ಹೆಗಡೆ ಕಾರವಾರ

ಕಾಲಕಾಲಕ್ಕೆ ವಾಹನದ ಹೊಗೆ ತಪಾಸಣೆ (ಎಮಿಷನ್ ಟೆಸ್ಟ್) ಮಾಡದೇ ಇದ್ದರೆ ಮನೆ ಬಾಗಿಲಿಗೆ ದಂಡ ತುಂಬುವ ಪಾವತಿ ಬರಲಿದೆ. ವಾಹನ ಓಡಿಸುವ ಜತೆಗೆ ಆರು ತಿಂಗಳಿಗೊಮ್ಮೆ ಮಾಲಿನ್ಯ ತಪಾಸಣೆ ಮಾಡುವುದು ಕೂಡಾ ಮಾಲಿಕರಿಗೆ ಈಗ ಅನಿವಾರ್ಯವಾಗಿದೆ.

ಮದ್ಯ ಸೇವಿಸಿ ವಾಹನ ಚಲಾಯಿಸಿದರೆ, ಅತಿ ವೇಗವಾಗಿ ವಾಹನ ಚಲಾಯಿಸಿದರೆ ಒಳಗೊಂಡು ವಿವಿಧ ರೀತಿಯ ಕಾನೂನು ಉಲ್ಲಂಘನೆ ಮಾಡಿದ ಬಗ್ಗೆ ತಿಳಿದುಕೊಳ್ಳಲು ಯಂತ್ರೋಪಕರಣಗಳು ಬಂದಿದೆ. ಮಹಾನಗರದಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತಿರುವ ಕಾರಣ ಸರ್ಕಾರದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಹೊಗೆ ತಪಾಸಣೆಗೆ ಪ್ರತ್ಯೇಕ ಸುಸಜ್ಜಿತ ಸಂಚಾರಿ ವಾಹನದ ವ್ಯವಸ್ಥೆ ಮಾಡಿದೆ.

ಉತ್ತರ ಕನ್ನಡ, ಉಡುಪಿ, ಮಂಗಳೂರು, ಚಿಕ್ಕಮಗಳೂರು ಸೇರಿ ಒಂದು ವಾಹನ ನೀಡಿದ್ದು, ತಿಂಗಳಲ್ಲಿ ನಾಲ್ಕೈದು ದಿನ ಒಂದೊಂದು ಜಿಲ್ಲೆಯ ನಗರ, ಪಟ್ಟಣಕ್ಕೆ ತೆರಳಿ ಪ್ರಾದೇಶಿಕ ಸಾರಿಗೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳ, ಸಿಬ್ಬಂದಿಯ ಸಹಕಾರದಲ್ಲಿ ನಿಯೋಜಿತ ಎಮಿಷನ್ ವಾಹನದ ಸಿಬ್ಬಂದಿ ವಾಹನಗಳ ತಪಾಸಣೆ ಮಾಡುವ ಮೊದಲು ವಾಹನದ ನೋಂದಣಿ ಸಂಖ್ಯೆ, ನೋಂದಣಿಯಾದ ವರ್ಷ, ಯಾವ ಕಂಪನಿಗೆ ಸೇರಿದ ವಾಹನ, ಯಾವ ಮಾದರಿಯ ವಾಹನ ಎನ್ನುವ ಮಾಹಿತಿ ಪಡೆದುಕೊಳ್ಳುತ್ತಾರೆ. ನಿಗದಿತ ಮಟ್ಟದಲ್ಲಿ ಹೊಗೆ ಹೊರಸೂಸುತ್ತಿದ್ದರೆ ಆ ವಾಹನ ಬಿಡುತ್ತಾರೆ. ಅದಕ್ಕಿಂತ ಹೆಚ್ಚಿದ್ದಲ್ಲಿ ಒಂದು ಪತ್ರವನ್ನು ಮಾಲೀಕರಿಗೆ ನೀಡುತ್ತಾರೆ. ಬಳಿಕ ಆಯಾ ಆರ್‌ಟಿಒ ಕಚೇರಿಗೆ ವಾಹನದ ನೋಂದಣಿ ನಂಬರ್ ನೀಡಿ ಹೊಗೆಯ ಪ್ರಮಾಣ ಹೆಚ್ಚಿರುವ ಬಗ್ಗೆ ತಿಳಿಸುತ್ತಾರೆ. ಸ್ಥಳೀಯ ಅಧಿಕಾರಿಗಳು ದಂಡ ತುಂಬುವ ಬಗ್ಗೆ ರಶೀದಿಯನ್ನು ವಾಹನದ ಮಾಲೀಕರ ವಿಳಾಸಕ್ಕೆ ಕಳುಹಿಸುತ್ತಾರೆ.

ಪ್ರತಿ ವಾಹನದ ಮಾಲೀಕ ಹೊಸ ವಾಹನ ಖರೀದಿಯ ೧ ವರ್ಷದ ಬಳಿಕ, ಆ ವಾಹನ ಎಷ್ಟು ಪ್ರಮಾಣದಲ್ಲಿ ಹೊಗೆ ಹೊರ ಸೂಸುತ್ತಿದೆ. ಪೆಟ್ರೋಲ್ ವಾಹನಗಳಲ್ಲಿ ಹೈಡೋ ಕಾರ್ಬನ್, ಕಾರ್ಬನ್ ಮೋನಾಕ್ಸೆಡ್ ಹೆಚ್ಚಿನ ಪ್ರಮಾಣ ಹೊರ ಬರುತ್ತಿದೆಯೋ ಅಥವಾ ಡಿಸೇಲ್ ವಾಹನದಲ್ಲಿ ಹೊಗೆ ದಟ್ಟಣೆ ಪ್ರಮಾಣ ಹೆಚ್ಚಿದೆಯೋ ಅಥವಾ ಕಡಿಮೆ ಪ್ರಮಾಣದಲ್ಲಿ ಹೊಗೆ ಹೊರ ಸೂಸುತ್ತಿದೆಯೋ ಎನ್ನುವುದನ್ನು ಪರೀಕ್ಷೆ ಮಾಡಿಸಲೇಬೇಕು. ವಾಹನದ ಹೊಗೆ ಪರೀಕ್ಷೆ ನಡೆಸಿದಾಗ ಪ್ರಮಾಣ ಪತ್ರದಲ್ಲಿ ದಾಖಲಾಗುವ ಅಂಕಿ-ಅಂಶಗಳ ಆಧಾರದಡಿ ವಾಹನದ ಸ್ಥಿತಿಗತಿ ಹೇಗಿದೆ ಎಂದು ತಿಳಿದುಕೊಳ್ಳಬಹುದಾಗಿದೆ. ಇದನ್ನು ಪ್ರತಿ ಆರು ತಿಂಗಳಿಗೊಮ್ಮೆ ತಪಾಸಣೆ ಮಾಡಿಸಲೇ ಬೇಕಿದೆ.

ಹೊಗೆ ತಪಾಸಣೆ ಬಗ್ಗೆ ಹೆಚ್ಚಿನ ಜನರು ನಿರ್ಲಕ್ಷ್ಯ ಮಾಡುತ್ತಿದ್ದು, ಕಾಲಕಾಲಕ್ಕೆ ಎಮಿಷನ್ ಟೆಸ್ಟ್ ಮಾಡಿಸಿ ವಾಹನವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳದೇ ಇದ್ದರೆ, ಈ ಸಂಚಾರಿ ವಾಹನವು ನಡೆಸುವ ತಪಾಸಣೆಯ ವೇಳೆ ಹೊಗೆ ಪ್ರಮಾಣ ಅಧಿಕವಾಗಿದ್ದರೆ ದಂಡ ಪಾವತಿಸಬೇಕಾಗುತ್ತದೆ.

ಮುನ್ನೆಚ್ಚರಿಕಾ ಕ್ರಮ: ಹಲವು ಮಹಾನಗರಗಳು ಈಗಾಗಲೇ ವಾಯು ಮಾಲಿನ್ಯದಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿವೆ. ದೆಹಲಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಾಲಿನ್ಯ ಹೆಚ್ಚಾಗಿದೆ. ಇದರಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ವಾಹನಗಳ ತಪಾಸಣೆಗೆ ವ್ಯವಸ್ಥೆ ಮಾಡಿದೆ. ಉತ್ತರ ಕನ್ನಡ, ಮಂಗಳೂರು, ಉಡುಪಿ ಮೊದಲಾದ ಜಿಲ್ಲೆಗಳಲ್ಲಿ ವಾಯು ಮಾಲಿನ್ಯ ಕಡಿಮೆ ಇದ್ದರೂ ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಅಧಿಕವಾಗುತ್ತಿದೆ. ಹೀಗಾಗಿ ಮುಂದೆ ವಾಯು ಮಾಲಿನ್ಯದಿಂದ ಜನರಿಗೆ, ಪರಿಸರಕ್ಕೆ ತೊಂದರೆ ಉಂಟಾಗಬಾರದು ಎಂದು ಎಚ್ಚರಿಕೆ ವಹಿಸಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ