ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ವೈಜ್ಞಾನಿಕವಾಗಿ ಹಸಿ ಹಾಗೂ ಒಣ ತ್ಯಾಜ್ಯ ವಿಲೇವಾರಿಯ ಮೂಲಕ ಉತ್ತಮ ಕಾರ್ಯನಿರ್ವಹಿಸುತ್ತಿದ್ದರೂ ಚಿಕ್ಕಬಳ್ಳಾಪುರ ನಗರ ತ್ಯಾಜ್ಯ ಸಮಸ್ಯೆಯಿಂದ ಸಂಪೂರ್ಣವಾಗಿ ಮುಕ್ತವಾಗಿಲ್ಲ.ನಗರ ಹೊರವಲಯ, ನಿರ್ಜನ ಪ್ರದೇಶ, ಹೆದ್ದಾರಿಯ ಇಕ್ಕೆಲ ಹಾಗೂ ರಾಜಕಾಲುವೆಗಳಲ್ಲಿ ತ್ಯಾಜ್ಯದ ರಾಶಿ ತುಂಬಿಕೊಂಡಿದ್ದು ‘ಸ್ವಚ್ಛ ಚಿಕ್ಕಬಳ್ಳಾಪುರ ಸುಂದರ ಚಿಕ್ಕಬಳ್ಳಾಪುರ’ ಪರಿಕಲ್ಪನೆಯನ್ನು ಅಣಕಿಸುವಂತೆ ಭಾಸವಾಗುತ್ತಿದೆ.
50 ಕಿಮೀ ಹೆದ್ದಾರಿ ಉದ್ದಕೂ ತ್ಯಾಜ್ಯನಗರ ಹೊರವಲಯದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 44 ತ್ಯಾಜ್ಯ ವಿಲೇವಾರಿ ಕೇಂದ್ರವಾಗಿದ್ದು ಗಬ್ಬು ನಾರುತ್ತಿದೆ. ತಾಲ್ಲೂಕಿನ ಬೀಡಗಾನಹಳ್ಳಿಯಿಂದ ಆರಂಭವಾಗಿ ಬಾಗೇಪಲ್ಲಿ ತಾಲ್ಲೂಕಿನ ನಂತರ ಆಂಧ್ರ ಪ್ರದೇಶದ ಗಡಿಯವರೆಗೆ ಚಾಚಿಕೊಂಡಿರುವ ಸುಮಾರು 50 ಕಿ.ಮೀ ಹೆದ್ದಾರಿ ವ್ಯಾಪ್ತಿಯ ಇಕ್ಕೆಲಗಳಲ್ಲಿ ತ್ಯಾಜ್ಯ ಎಲ್ಲೆಂದರಲ್ಲಿ ಹರಡಿಕೊಂಡಿದೆ.ರಸ್ತೆ ಬದಿ ಸಂಚರಿಸಲು ಸಾಧ್ಯವಾಗದಷ್ಟು ದುರ್ವಾಸನೆ ತುಂಬಿಕೊಂಡಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೆದ್ದಾರಿ ಬದಿಯಲ್ಲಿ ವಾಸವಿರುವ ಸಾರ್ವಜನಿಕರ ಗೋಳು ಹೇಳತೀರದು. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಹೆದ್ದಾರಿ ಬದಿ ತ್ಯಾಜ್ಯದ ರಾಶಿ ಸಂಗ್ರಹವಾಗುತ್ತಿದ್ದು ದುರ್ನಾತದಲ್ಲಿ ಬದುಕಬೇಕಾಗಿದೆ.ಕಟ್ಟಡದ ಅವಶೇಷಗಳು, ಹಳೆಯ ಬಟ್ಟೆ, ಚಪ್ಪಲಿಗಳು, ಹಾಳಾದ ಗೃಹ ಬಳಕೆ ವಸ್ತುಗಳನ್ನು ತಂದು ಹೆದ್ದಾರಿ ಬದಿಯೇ ಸುರಿಯಲಾಗುತ್ತಿದ್ದು ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ರಾಜಕಾಲುವೆಗಳಲ್ಲಿ ಪ್ಲಾಸ್ಟಿಕ್ಇದರಿಂದಾಗಿ ತಾಲ್ಲೂಕಿನ ಬೀಡಗಾನಹಳ್ಳಿಯಿಂದಆಂಧ್ರದ ಗಡಿಯವರೆಗೂ ಹಲವು ರಾಜಕಾಲುವೆಗಳು ಹಲವು ಸಣ್ಣ ಕಾಲುವೆಗಳು ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಾಟೆಲ್, ಪ್ಯಾಸ್ಟಿಕ್ ಚೀಲಗಳಿಂದ ತುಂಬಿಕೊಂಡಿದೆ. ತಾಲ್ಲೂಕಿನ ಪೆರೇಸಂದ್ರ ಸೇತುವೆ ಕೆಳಗೆ ಟನ್‌ಗಟ್ಟಲೆ ಪ್ಲಾಸ್ಟಿಕ್ ವಸ್ತುಗಳು ಸಂಗ್ರಹವಾಗಿರುವುದು ಸಮಸ್ಯೆಯ ಗಂಭೀರತೆ ತೋರಿಸುತ್ತಿದ್ದು ಈ ಮಾರ್ಗದಲ್ಲಿ ಸಾಗುವ ವಾಹನಗಳಿಗೆ ಮಾರಕವಾಗಿದೆ.
ಹೆದ್ದಾರಿಯಲ್ಲಿ ಸಾಗುವಾಗ ಕಣ್ಣಿಗೆ ರಾಚುವಂತೆ ಕಂಡರೂ ತ್ಯಾಜ್ಯವನ್ನು ವಿಲೇವಾರಿ ಮಾಡುವ ಗೋಜಿಗೆ ನಗರಸಭೆಯಾಗಲಿ, ಸ್ಥಳೀಯ ಗ್ರಾಮ ಪಂಚಾಯಿತಿಗಳಾಗಲಿ, ಹೆದ್ದಾರಿ ಇಲಾಖೆಯಾಗಲಿ ಹೋಗಿಲ್ಲ.ಪ್ರತಿನಿತ್ಯವೂ ತ್ಯಾಜ್ಯ ರಾಶಿ ಹೆಚ್ಚಾಗುತ್ತಲೇ ಇದ್ದು ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಭೀತಿ ಎದುರಾಗಿದೆ. ಪ್ರತಿನಿತ್ಯ ಸಂಗ್ರಹವಾಗುವ ಟನ್‌ಗಟ್ಟಲೆ ಹಸಿ ಹಾಗೂ ಒಣ ತ್ಯಾಜ್ಯವನ್ನು ಸೇತುವೆ ಬದಿಯಲ್ಲಿಯೇ ಸುರಿಯಲಾಗುತ್ತಿದ್ದು ವಿಲೇವಾರಿ ಮಾಡಿಲ್ಲ. ನಿತ್ಯ ತ್ಯಾಜ್ಯ ಸುಡುವ ಕೆಲಸಹೆದ್ದಾರಿ ಮಾತ್ರವಲ್ಲ ನಗರ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ತ್ಯಾಜ್ಯ ಸಮಸ್ಯೆ ಹೆಚ್ಚಾಗಿದೆ. ನಿರ್ಜನ ಪ್ರದೇಶ ಹಾಗೂ ಖಾಲಿ ನಿವೇಶನಗಳಲ್ಲಿ ತ್ಯಾಜ್ಯದ ರಾಶಿ ಸಂಗ್ರಹವಾಗಿದ್ದು ಗ್ರಾಮಗಳ ಅಂದಗೆಡಿಸುತ್ತಿದೆ.ಪ್ರ ತಿದಿನ ರಾತ್ರಿ ಹಾಗೂ ಬೆಳಗಿನ ಜಾವ ಮೂಟೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರುಪಯುಕ್ತ ವಸ್ತುಗಳನ್ನು ತಂದು ಹೆದ್ದಾರಿ ಬದಿ ಎಸೆದು ಹೋಗುತ್ತಾರೆ. ನಿತ್ಯವೂ ತ್ಯಾಜ್ಯ ಸುಟ್ಟುಹಾಕುವುದೇ ಕೆಲಸವಾಗಿದೆ ಎನ್ನುತ್ತಾರೆ ಹೊನ್ನೇನಹಳ್ಳಿ ನಿವಾಸಿ ಮೋಹನ್.
ರಾಷ್ಟ್ರೀಯ ಹೆದ್ದಾರಿ 44 ಕ್ಕೆ ಹೊಂದಿಕೊಂಡು ಹಲವು ರಾಜಕಾಲುವೆಗಳು ತ್ಯಾಜ್ಯವನ್ನು ತಂದು ಸುರಿಯುತ್ತಿರುವ ಪರಿಣಾಮ ಮುಚ್ಚಿ ಹೋಗುತ್ತಿವೆ. ಮಳೆಗಾಲದಲ್ಲಿ ರಾಜಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯದೆ ಕೃತಕ ನೆರೆ ಸೃಷ್ಟಿಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರಾಜಕಾಲುವೆಗಳು ತುಂಬಿರುವ ತ್ಯಾಜ್ಯವನ್ನು ವಿಲೇವಾರಿ ಮಾಡಿಸಬೇಕು.ಯಾರಿಗೂ ಜವಾಬ್ದಾರಿ ಬೇಕಿಲ್ಲ ಹೆದ್ದಾರಿ ಬದಿ ತ್ಯಾಜ್ಯದ ರಾಶಿ ಬಿದ್ದು ಹಲವು ತಿಂಗಳು ಕಳೆದರೂ ಯಾರೂ ವಿಲೇವಾರಿಗೆ ಮುಂದಾಗಿಲ್ಲ. ನಗರಸಭೆ ಅಧಿಕಾರಿಗಳಿಗೆ ಹೇಳಿದರೆ ಸ್ಥಳೀಯ ಪಂಚಾಯಿತಿಗಳತ್ತ ಬೊಟ್ಟು ಮಾಡುತ್ತಾರೆ. ಪಂಚಾಯಿತಿಗಳು ಹೆದ್ದಾರಿ ಇಲಾಖೆ ತೋರಿಸಿ ನುಣುಚಿಕೊಳ್ಳುತ್ತಿವೆ ಎಂದು ಸ್ಥಳೀಯ ನಿವಾಸಿ ಕೃಷ್ಣಪ್ಪ ಆರೋಪಿಸಿದರು.